ಅತ್ತ ಸಿಎಂ ಕುರ್ಚಿಗಾಗಿ ಕದನ: ಇತ್ತ ಚಾಮರಾಜನಗರದಲ್ಲೂ ಸಹ ಕುರ್ಚಿ ಕಿತ್ತಾಟ
ಚಾಮರಾಜನಗರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸ್ಥಾನಕ್ಕಾಗಿ ಇಬ್ಬರು ಅಧಿಕಾರಿಗಳ ಮಧ್ಯೆ ತೀವ್ರ ಕಾದಾಟ ನಡೆಯುತ್ತಿದೆ. ವರ್ಗಾವಣೆಗೊಂಡ ಅಧಿಕಾರಿ ನ್ಯಾಯಾಲಯದಿಂದ ತಡೆ ತಂದಿದ್ದರೆ, ಮತ್ತೋರ್ವ ಅಧಿಕಾರಿ ಏಕಾಏಕಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ವಿವಾದ ಈಗ ಸಾರ್ವಜನಿಕ ನಗೆಪಾಟಲಿಗೀಡಾಗಿದೆ.

ಚಾಮರಾಜನಗರ, ಡಿಸೆಂಬರ್ 18: ಕರ್ನಾಟಕದಾದ್ಯಂತ (Karnataka) ಸಿಎಂ ಮತ್ತು ಡಿಸಿಎಂ ಕುರ್ಚಿ ಕಾದಾಟ ಒಂದೆಡೆಯಾದರೆ, ಇತ್ತ ಗಡಿನಾಡು ಚಾಮರಾಜನಗರದಲ್ಲೂ (Chamarajanagar) ಒಂದೇ ಕುರ್ಚಿಗಾಗಿ ಕಾದಾಟ ಜೋರಾಗಿದೆ. ಒಂದು ಕುರ್ಚಿಗಾಗಿ ಇಬ್ಬಿಬ್ಬರು ಅಧಿಕಾರಿಗಳು ಪಟ್ಟು ಹಿಡಿದು ಕುಳಿತಿದ್ದಾರೆ. ನಾನು ರಿಲೀವ್ ಆಗಿಲ್ಲ, ಕೋರ್ಟ್ ಸ್ಟೇ ಕೊಟ್ಟಿದೆ ಅಂತ ಒಬ್ಬರು, ಸರ್ಕಾರ ನನಗೆ ಆದೇಶ ನೀಡಿದೆ ಅಂತ ಮತ್ತೊಬ್ಬರು ಹೇಳುತ್ತಿದ್ದಾರೆ. ಸದ್ಯ ಇದು ಜನರ ನಗೆ ಪಾಟಲಿಗೆ ಕಾರಣವಾಗಿದೆ.
ರಾಜ್ಯಾದ್ಯಂತ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಸಿಎಂ ಕುರ್ಚಿ ಕಾದಾಟ ಚರ್ಚೆ ನಡೆಯುತ್ತಿರುವ ವಿಚಾರ. ಸಿಎಂ ಅವರು ಆಗುತ್ತಾರೆ, ಇವರ ಆಗುತ್ತಾರೆ ಎನ್ನುವ ಚರ್ಚೆ ಮಧ್ಯೆ ಡಿನ್ನರ್ ಪಾಲಿಟಿಕ್ಸ್ ಸುದ್ದಿ ನೋಡಿ ರಾಜ್ಯದ ಜನ ಒಂದೆಡೆ ರೋಸಿ ಹೋಗಿದ್ದಾರೆ. ಆದರೆ ಅದೇ ರೀತಿ ಒಂದು ಕುರ್ಚಿಗಾಗಿ ಇಬ್ಬರು ಅಧಿಕಾರಿಗಳು ಕಿರಿಕ್ ಮಾಡಿಕೊಂಡು ಇದೀಗ ನಗೆ ಪಾಟಲಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಟಿವಿ9 ವರದಿಯ ಬಿಗ್ ಇಂಪ್ಯಾಕ್ಟ್; ಪಚ್ಚೆದೊಡ್ಡಿ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಜಿಲ್ಲಾಧಿಕಾರಿ
ಚಾಮರಾಜನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕನ ಕುರ್ಚಿಗೆ ಇಬ್ಬರು ಅಧಿಕಾರಿಗಳು ಟವೆಲ್ ಹಾಕಿದ್ದಾರೆ. ಸುರೇಶ್ ಮತ್ತು ಚೆಲುವರಾಜ್ ಇವರೇ ಆ ಅಧಿಕಾರಿಗಳು. ಇವರಿಬ್ಬರ ಕಿತ್ತಾಟದಿಂದ ಅಸಲಿಗೆ ನಿಜವಾದ ಉಪ ನಿರ್ದೇಶಕ ಯಾರಪ್ಪ ಅಂತ ಸಾರ್ವಜನಿಕರು ತಲೆಕೆಡೆಸಿಕೊಂಡಿದ್ದಾರೆ.
ಐದು ತಿಂಗಳಿಗೆ ವರ್ಗಾವಣೆ
ಅಸಲಿಗೆ ಆಗಿದ್ದೇನು ಅಂದರೆ, ಕಳೆದ 5 ತಿಂಗಳ ಹಿಂದೆ ಚಾಮರಾಜನಗರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾಗಿ ಸುರೇಶ್ ಚಾರ್ಜ್ ತೆಗೆದುಕೊಂಡಿದ್ದರು. ಐದು ತಿಂಗಳು ಕಳೆಯುವುದರೊಳಗೆ ಏನಾಯ್ತೋ ಏನೋ ಕೆಲ ಆರೋಪಗಳು ಕೇಳಿಬಂದ ಬೆನ್ನಲ್ಲೇ ಸುರೇಶ್ರನ್ನ ರಾಜ್ಯ ಸರ್ಕಾರ ಚಾಮರಾಜನಗರದಿಂದ ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಿತ್ತು.
ಖಾಲಿ ಇರುವ ಉಪ ನಿರ್ದೇಶಕರ ಸ್ಥಾನ ಮಹಿಳಾ ರಕ್ಷಣಾಧಿಕಾರಿ ಚೆಲುವರಾಜ್ರನ್ನ ಪ್ರಭಾರವಾಗಿ ಆಯ್ಕೆಆಡಿ ಆದೇಶ ಹೊರಡಿಸಿದೆ. ಆದರೆ ನಾನಿನ್ನು ಬಂದು 5 ತಿಂಗಳಾಗಿದೆ ಈ ವರ್ಗಾವಣೆ ನ್ಯಾಯ ಸಮ್ಮತವಲ್ಲ ಎಂದು ಕೆಇಟಿಗೆ ಹೋಗಿದ್ದರು. ಕೆಇಟಿಗೆ ಹೋಗಿ ಅದಕ್ಕೆ ಸ್ಟೇ ಕೂಡ ತಂದಿದ್ದಾರೆ. ಇಷ್ಟರ ಒಳಗಾಗಿ ಚೆಲುವರಾಜ್ ಸಿಇಓ ಗೆ ಆದೇಶ ಪ್ರತಿ ನೀಡಿ ಅವರ ಒಪ್ಪಿಗೆಯೂ ಪಡೆಯದೆ ಇತ್ತ ಸುರೇಶ್ರಿಂದ ಅಧಿಕಾರವನ್ನ ಸಹ ಪಡೆಯದೆ ಏಕಾಏಕಿ ಉಪ ನಿರ್ದೇಶಕರಾಗಿ ಸ್ವತಃ ಅಧಿಕಾರ ವಹಿಸಿಕೊಂಡಿದ್ದಾರೆ.
ಇದು ನ್ಯಾಯ ಸಮ್ಮತವಲ್ಲ ಎಂದ ಅಧಿಕಾರಿ
ಕೋರ್ಟ್ ಸ್ಟೇ ನೀಡಿದೆ. ನಾನು ರಿಲೀವ್ ಕೂಡ ಆಗಿಲ್ಲ, ಸಿಇಓ ಹಾಗೂ ಡಿಸಿ ಕೆಲ ಕಾರ್ಯಗಳು ಮುಗಿದ ಬಳಿಕ ರಿಲೀವ್ ಆಗಿ ಅಂತ ಹೇಳಿದ ಬಳಿಕವು ಚೆಲುವರಾಜ್ ಅದು ಹೇಗೆ ಅಧಿಕಾರ ವಹಿಸಿಕೊಂಡರು, ಇದು ನ್ಯಾಯ ಸಮ್ಮತವಲ್ಲ ಹಾಗಾಗಿ ನಾನೇ ಮುಂದುವರೆಯುತ್ತೇನೆ ಎಂದು ಇಂದು ಕಚೇರಿಗೆ ಬಂದ ಸುರೇಶ್, ಕುರ್ಚಿ ಮೇಲೆ ಕುಳಿತು ತಮ್ಮ ಕಾರ್ಯನಿರ್ವಹಿಸಿದ್ದಾರೆ.
ಇದನ್ನೂ ಓದಿ: ಈ ಊರಿನ ಮಕ್ಕಳು ಶಾಲೆಗೆ 14 ಕಿಮೀ ನಡೆದೇ ಹೋಗಬೇಕು! ಕಾಡು ಪ್ರಾಣಿಗಳಿಂದ ಸುರಕ್ಷತೆ ಕೋರಿ ಸಿಎಂಗೆ ಪತ್ರ ಬರೆದ ವಿದ್ಯಾರ್ಥಿಗಳು
ಸದ್ಯ ನ್ಯಾಯಾಲಯ ವರ್ಗಾವಣೆ ಆದೇಶ ತಡೆ ಹಿಡಿದಿದ್ದು, ಯಥಾಸ್ಥಿತಿ ಕಾಪಾಡಿಕೊಳ್ಳವಂತೆ ಆದೇಶಿಸಿದೆ. ಇನ್ನು ಸಿಇಓ ಗಮನಕ್ಕೆ ತಾರದೆ ಚೆಲುವರಾಜ್ ಅಧಿಕಾರ ಸ್ವೀಕರಿಸಿದನ್ನ ಪ್ರಶ್ನಿಸಿ ಸಿಇಓ ನೋಟಿಸ್ ನೀಡಿದ್ದಾರೆ. ಒಟ್ಟಿನಲ್ಲಿ ಒಂದು ಕುರ್ಚಿಗಾಗಿ ಇಬ್ಬರು ಅಧಿಕಾರಿಗಳು ನಂದು ಅಂತ ಕಿತ್ತಾಡಿದ್ದು, ಮಾತ್ರ ನಿಜಕ್ಕೂ ದುರಂತವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



