
ಚಾಮರಾಜನಗರ, ಸೆಪ್ಟೆಂಬರ್ 08: ಆಗಾಗ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿ ಕಣ್ಮರೆಯಾಗುತ್ತಿರುವ ಹುಲಿ (tiger) ಸೆರೆಗೆ ಅರಣ್ಯಾಧಿಕಾರಿಗಳು ಅದೆಷ್ಟೇ ಕೂಂಬಿಂಗ್ (Combing) ನಡೆಸಿದರೂ ಒಂದೇ ಒಂದು ಸುಳಿವು ಪತ್ತೆಯಾಗುತ್ತಿಲ್ಲ. ಇತ್ತ ವ್ಯಾಘ್ರ ಅರಣ್ಯಾಧಿಕಾರಿಗಳ ಜೊತೆ ಕಣ್ಣಾಮುಚ್ಚಾಲೇ ಆಟವಾಡುತ್ತಿದ್ದರೆ, ಅತ್ತ 62 ಮಂದಿ ಅರಣ್ಯ ಸಿಬ್ಬಂದಿ ರೋಸಿ ಹೋಗಿದ್ದಾರೆ.
ಗಡಿ ನಾಡು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮದ್ದಯ್ಯನ ಹುಂಡಿ ಗ್ರಾಮದಲ್ಲಿ ಕಳೆದೊಂದು ತಿಂಗಳಿನಿಂದ ಬಿಟ್ಟು ಬಿಡದೇ ಆಗಾಗ ಪ್ರತ್ಯೇಕ್ಷವಾಗಿ, ಕಾಡಂದಿ ಬೇಟೆಯಾಡಿ ಗ್ರಾಮಸ್ಥರ ನಿದ್ದೆ ಗೆಡಿಸಿದ್ದ ಹುಲಿಯ ಸೆರೆಗೆ ಈಗ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ನ ಸಿಬ್ಬಂದಿ ಮುಂದಾಗಿದ್ದಾರೆ. ಆದರೆ ಬರೋಬ್ಬರಿ 3 ದಿನ ಕಳೆದರೂ ವ್ಯಾಘ್ರನ ಒಂದೇ ಒಂದು ಸುಳಿವು ಸಿಗದೆ ಇರುವುದು ಈಗ ಅರಣ್ಯ ಸಿಬ್ಬಂದಿಗೆ ತಲೆ ನೋವು ತಂದೊಡ್ಡಿದೆ.
ಇದನ್ನೂ ಓದಿ: ಚಾಮರಾಜನಗರ: ಹುಲಿ ಸೆರೆಗೆ ಮುಂದಾಗದಿದ್ರೆ ಮತ್ತೊಂದು ದುರಂತ ಸಂಭವಿಸುತ್ತಾ? ಅರಣ್ಯ ಇಲಾಖೆಗೆ ರೈತರ ಎಚ್ಚರಿಕೆ ಏನು?
ಕೂಂಬಿಂಗ್ ಕಿಂಗ್ ಎಂದೇ ಖ್ಯಾತಿಯ ರಾಮಾಪುರ ಆನೆ ಬಿಡಾರದ ಕಪ್ತಾನ ರೋಹಿತ್, ಮದ್ದಯ್ಯನಹುಂಡಿ, ಬೇರಂಬಾಡಿ, ಚೆನ್ನಮಲ್ಲಿಪುರ ವ್ಯಾಪ್ತಿಯಲ್ಲಿ ಆನೆಯ ಸಹಾಯದೊಂದಿಗೆ ಹುಲಿ ಸೆರೆ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಜೊತೆಗೆ ಡ್ರೋನ್ ಕೂಡ ಬಳಕೆ ಮಾಡಲಾಗಿದೆ. ಕೆರೆ ಬಳಿ ರೈತರಿಗೆ ಹುಲಿ ಕಾಣಿಸಿಕೊಂಡ ಹಿನ್ನೆಲೆ ಅರಣ್ಯ ಇಲಾಖೆಗೆ ಹುಲಿ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು. ಇದರಿಂದ ಎಸಿಎಫ್ ಸುರೇಶ್ ನೇತೃತ್ವದಲ್ಲಿ ಕೂಂಬಿಂಗ್ ಆರಂಭಿಸಲಾಯಿತಾದರೂ ಇದೀಗ ಯಾವುದೇ ಪ್ರಯೋಜನಕ್ಕೆ ಬಂದಿಲ್ಲ.
ಚೆನ್ನಮಲ್ಲಿಪುರ, ಬೇರಂಬಾಡಿ ಭಾಗದಲ್ಲಿ ಹುಲಿಯ ಹೆಜ್ಜೆ ಗುರುತು ಕಂಡುಬಂದಿದ್ದು, ಇದನ್ನು ಆಧರಿಸಿ ಅರಣ್ಯ ಇಲಾಖೆ ಪಶು ವೈದ್ಯಾಧಿಕಾರಿ ಡಾ. ವಾಸೀಂ ಮಿರ್ಜಾ ಹಾಗೂ ಡಿಆರ್ಎಫ್ ರವಿ, ಗುಂಡ್ಲುಪೇಟೆ ಡಿಆರ್ಎಫ್ ಶಿವಕುಮಾರ್, ಎಸ್ಟಿಪಿಎಫ್ಆರ್ಎಫ್ಓ ವೈರಮುಡಿ ಸೇರಿದಂತೆ ಒಟ್ಟು 62 ಮಂದಿ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಹುಲಿ, ಮಂಗ ಆಯ್ತು ಈಗ ಚಿರತೆ ಸರದಿ: ಚಾಮರಾಜನಗರ ಕೊತ್ತಲವಾಡಿ ಬಳಿ ಚಿರತೆ ಶವ ಪತ್ತೆ
ಒಟ್ಟಿನಲ್ಲಿ ಕಳೆದ ಒಂದು ತಿಂಗಳಿನಿಂದಲ್ಲೂ ಕಾಡು ಬಿಟ್ಟು ಗ್ರಾಮಗಳತ್ತ ಓಡಾಟ ನಡೆಸುತ್ತಿರುವ ಹುಲಿಯನ್ನು ಆದಷ್ಟು ಬೇಗ ಸೆರೆ ಹಿಡಿಯುವ ಯಾವುದೇ ಅನಾಹುತವಾಗದಿದ್ದರೆ ಸಾಕು ಎಂಬುದು ನಮ್ಮ ಆಶಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.