ಚಾಮರಾಜನಗರದಲ್ಲಿ ಭೀಕರ ಅಪಘಾತ: ಸಾರಿಗೆ ಬಸ್ ಪಲ್ಟಿಯಾಗಿ ಇಬ್ಬರು ಸಾವು; 67 ಪ್ರಯಾಣಿಕರಿಗೆ ಗಾಯ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಬಳಿ ಸಂಭವಿಸಿದ ಭೀಕರ ಸಾರಿಗೆ ಬಸ್ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 67 ಮಂದಿ ಗಾಯಗೊಂಡಿರುವಂತಹ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.

ಚಾಮರಾಜನಗರದಲ್ಲಿ ಭೀಕರ ಅಪಘಾತ: ಸಾರಿಗೆ ಬಸ್ ಪಲ್ಟಿಯಾಗಿ ಇಬ್ಬರು ಸಾವು; 67 ಪ್ರಯಾಣಿಕರಿಗೆ ಗಾಯ
ಸಾರಿಗೆ ಬಸ್ ಪಲ್ಟಿ​
Image Credit source: tv9 kannada
Edited By:

Updated on: Jun 29, 2026 | 7:33 PM

ಮುಖ್ಯಾಂಶಗಳು

  • ಟೈರ್​ ಸ್ಫೋಟಗೊಂಡು ಸಾರಿಗೆ ಬಸ್ ಪಲ್ಟಿ​, 67 ಮಂದಿಗೆ ಗಾಯ
  • ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಬೈಪಾಸ್ ಬಳಿ ಅಪಘಾತ
  • ಗಾಯಾಳುಗಳಿಗೆ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ

ಚಾಮರಾಜನಗರ, ಜೂನ್​​ 29: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ತೆರಳುತ್ತಿದ್ದ ಸಾರಿಗೆ ಬಸ್‌ನ (bus accident) ಟೈರ್ ಏಕಾಏಕಿ ಸ್ಫೋಟಗೊಂಡು ಪಲ್ಟಿಯಾಗಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದು (death), ಬರೋಬ್ಬರಿ 67 ಪ್ರಯಾಣಿಕರು ಗಾಯಗೊಂಡಿದ್ದಾರೆ. ಕೊಳ್ಳೇಗಾಲದ ಪುಟ್ಟನಂಜಮ್ಮ(60) ಮತ್ತು ಕುದೇರು ನಿವಾಸಿ ಮಹೇಶ್(50) ಮೃತರು. ಸದ್ಯ ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.

ನಡೆದಿದ್ದೇನು?

ಇಂದು ಸೋಮವಾರ ಹಾಗೂ ಹುಣ್ಣಿಮೆಯ ವಿಶೇಷ ದಿನ ಹೀಗಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮಾದಪ್ಪನ ದರ್ಶನ ಮುಗಿಸಿಕೊಂಡು ಮೈಸೂರಿಗೆ ವಾಪಸ್ ಪ್ರಯಾಣಿಸುತ್ತಿದ್ದ ವೇಳೆ, KA 57 F 3964 ಸಂಖ್ಯೆಯ ಕೆಎಸ್​​​ಆರ್​ಟಿಸಿ ಸಾರಿಗೆ ಬಸ್‌ನ ಮುಂಭಾಗದ ಟೈರ್ ಏಕಾಏಕಿ ಬ್ಲಾಸ್ಟ್ ಆಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಗೆ ಪಲ್ಟಿ ಹೊಡೆದಿದೆ.

ಇದನ್ನೂ ಓದಿ: ರಾಯಚೂರು: ಏಕಾಏಕಿ ಕುಸಿದ ಕಟ್ಟಡ​​ದ ಗೋಡೆ; ನಾಲ್ವರ ಪೈಕಿ ಇಬ್ಬರು ಸಾವು

ಬಸ್ ಪಲ್ಟಿಯಾಗುತ್ತಿದ್ದಂತೆ ಒಳಗಿದ್ದ ಪ್ರಯಾಣಿಕರಿಗೆ ದಿಕ್ಕೇ ತೋಚದಾಗಿದೆ. ಅಪಘಾತದ ತೀವ್ರತೆಗೆ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಬಸ್‌ನ ಅವಶೇಷಗಳ ನಡುವೆ ಸಿಲುಕಿದ್ದ ಎಲ್ಲಾ ಪ್ರಯಾಣಿಕರನ್ನು ಹೊರಗೆ ತೆಗೆದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಬರೋಬ್ಬರಿ 67 ಮಂದಿ ಪ್ರಯಾಣಿಕರಿಗೆ ಗಾಯ

ಇನ್ನು ಬಸ್‌ನಲ್ಲಿದ್ದ ಬರೋಬ್ಬರಿ 67 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ತಕ್ಷಣವೇ ಎಲ್ಲರನ್ನೂ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ 10ಕ್ಕೂ ಹೆಚ್ಚು ಮಂದಿಗೆ ತಲೆಗೆ ತೀವ್ರ ಪೆಟ್ಟಾಗಿದ್ದು, ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ಬೈಕ್ ಸವಾರ: ಜಸ್ಟ್ ಮಿಸ್

ಗುಂಡಿ ತಪ್ಪಿಸಲು ಹೋಗಿ ಬೈಕ್ ಸವಾರ ಕೆಳಗೆ ಬಿದ್ದ ಘಟನೆ ಕೋಲಾರ ನಗರದ ಕನಕನ ಪಾಳ್ಯ 3ನೇ ರಸ್ತೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಬೈಕ್ ಸವಾರ ಪಾರಾಗಿದ್ದಾರೆ. ಸ್ಥಳೀಯರು ತಕ್ಷಣ ಬೈಕ್ ಸವಾರನನ್ನು ಮೇಲಕ್ಕೆ ಎತ್ತಿದ್ದು, ರಸ್ತೆ ಗುಂಡಿ ಮುಚ್ಚುವಂತೆ ಮನವಿ ಮಾಡಿದ್ದಾರೆ. ಸವಾರ ಬೈಕ್​ನಿಂದ ಬೀಳುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ ಆಗಿದೆ. ಗುತ್ತಿಗೆದಾರ ಕೃಷ್ಣಪ್ಪ ಯುಜಿಡಿ ಕಾಮಗಾರಿ ಮಾಡಿ ಸರಿಯಾಗಿ ಗುಂಡಿ ಮುಚ್ಚದೆ ಇದ್ದ ಕಾರಣ ಅನಾಹುತ ನಡೆದಿದೆ ಎಂದು ಆರೋಪ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us