ಚಾಮರಾಜನಗರ, ಮಾರ್ಚ್ 09: ಏಳು ಮಲೆ ಎಪ್ಪತ್ತೇಳು ಮಲೆಯ ಒಡೆಯ, ದಂಡಕಾರಣ್ಯದ ನಡುವೆ ಬೆಟ್ಟದಲ್ಲಿ ನೆಲೆ ನಿಂತಿರುವ ಮಹದೇಶ್ವರ ಬೆಟ್ಟದಲ್ಲಿ (Mahadeshwara Hill) ಅಕ್ರಮ ಮದ್ಯದ ಘಾಟು ಹೆಚ್ಚಾಗಿದೆ. ಮದ್ಯ ಹಾಗೂ ತಂಬಾಕು ಮುಕ್ತ ಮಲೆ ಮಹದೇಶ್ವರ ಬೆಟ್ಟದ ಹೊತ್ತಾಸೆಗೆ ಬೆಟ್ಟದಲ್ಲೆ ವಾಸಿಸುವ ಕೆಲ ಕಿಡಿಗೇಡಿಗಳು ಸಂಚಕಾರ ತಂದಿದ್ದಾರೆ. ಪಾವಿತ್ರ್ಯಕ್ಕೆ ತೊಡಕಾಗಿದ್ದಾರೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ (Liquor) ಮಾರಾಟ ಆಗುತ್ತಿದ್ದು, ಶನಿವಾರ (ಮಾ.08) ರಂದು ನಡೆದ ಪೊಲೀಸರ ದಾಳಿ ವೇಳೆ ಬರೋಬ್ಬರಿ 300 ಲೀಟರ್ ಮದ್ಯ ಸಿಕ್ಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆಚ್ಚಿನ ಜಿಲ್ಲೆಗಳಲ್ಲಿ ಚಾಮರಾಜನಗರ ಜಿಲ್ಲೆ ಕೂಡ ಒಂದು. ಯಾರೇ ಮುಖ್ಯಮಂತ್ರಿಯಾದರೂ ಚಾಮರಾಜನಗರ ಜಿಲ್ಲೆಗೆ ತೆರಳಲು ಹಿಂದೇಟು ಹಾಕುತ್ತಾರೆ. ಚಾಮರಾಜನಗರ ಜಿಲ್ಲೆಗೆ ಹೋದರೇ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ವಾಡಿಕೆ ಇದೆ. ಆದರೆ, ಸಿಎಂ ಸಿದ್ದರಾಮಯ್ಯ ಅನೇಕ ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿ ಆ ಕಳಂಕವನ್ನು ದೂರವಾಗಿಸಿದ್ದಾರೆ.
ಜೊತೆಗೆ ಮಲೆ ಮಹದೇಶ್ವರ ಬೆಟ್ಟವನ್ನ ಮದ್ಯ ಮುಕ್ತ ಪ್ರದೇಶವನ್ನಾಗಿಸುವ ಸಂಕಲ್ಪ ಮಾಡಿದ್ದಾರೆ. ಜೊತೆಗೆ ಅಧಿಕಾರಿಗಳಿಗೆ ಕೆಡಿಪಿ ಸಭೆಯಲ್ಲಿ ಖಡಕ್ ಆಗಿ ಸೂಚನೆ ನೀಡಿದ್ದಾರೆ. ಇವೆಲ್ಲರ ನಡುವೆ ಈಗ ಮತ್ತೆ ಮಲೆ ಮಹದೇಶ್ವರ ಬೆಟ್ಟದಲ್ಲಿ 300 ಲೀಟರ್ ಮದ್ಯ ಜಪ್ತಿಯಾಗಿದೆ. ಅಕ್ರಮವಾಗಿ ಮದ್ಯ ತಂದು ಮಾರಾಟ ಮಾಡುತ್ತಿದ್ದ ಸಿದ್ದಪ್ಪ ಹಾಗೂ ಮುತ್ತುರಾಜ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ನೋಡಿ: ಹೂ, ಹಣ್ಣು, ತರಕಾರಿಗಳಿಂದ ಮಾದಪ್ಪನ ದೇಗುಲ ಅಲಂಕಾರ
ಅಕ್ರಮ ಮದ್ಯ ಮಾರಟಗಾರರ ಜೊತೆ ಅಧಿಕಾರಿಗಳ ಕೈವಾಡವಿದೆ ಎಂಬ ಆರೋಪವೂ ಕೇಳಿಬಂದಿದೆ. ಜಿಲ್ಲಾ ಎಸ್ ಪಿ ಹಾಗೂ ಅಬಕಾರಿ ಇಲಾಖೆಯ ಡಿಸಿ ಈ ಕುರಿತು ಹೆಚ್ಚಿನ ನಿಗಾ ವಹಿಸಬೇಕಿದೆ. ಹಾಗಿದಲ್ಲಿ ಮಾತ್ರ ಮಾದಪ್ಪನ ಕ್ಷೇತ್ರದ ಪಾವಿತ್ರ್ಯ ಉಳಿಸಿಕೊಳ್ಳಲು ಸಾದ್ಯವಾಗುತ್ತದೆ.