ಪ್ರಧಾನಿ ಮೋದಿ ಭೇಟಿ ಬಳಿಕ ಪ್ರವಾಸಿಗರ ಸಂಖ್ಯೆ, ಆದಾಯ ಹೆಚ್ಚಳ: ಗಳಿಕೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನಕ್ಕೇರಿದ ಬಂಡೀಪುರ
ಅದು ಕರ್ನಾಟಕದಲ್ಲೇ ಅತಿ ಹೆಚ್ಚು ಹುಲಿ ಹಾಗೂ ಆನೆಗಳಿರುವ ತಾಣ. ಪ್ರತಿ ವರ್ಷ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ನಂತರವಂತೂ ವನ್ಯ ಸಂಪತ್ತನ್ನು ಕಣ್ತುಂಬಿಕೊಳ್ಳಲು ರಾಜ್ಯವಷ್ಟೇ, ಅಲ್ಲ ದೇಶದ ಮೂಲೆಮೂಲೆಗಳಿಂದ ಪ್ರವಾಸಿಗರು ದಾಂಗುಡಿ ಇಡುತ್ತಿದ್ದಾರೆ.

ಚಾಮರಾಜನಗರ, ಫೆಬ್ರವರಿ 24: ಸುಮಾರು 1024 ಸಾವಿರ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ದಕ್ಷಿಣ ಭಾರತದ ಅತಿ ದೊಡ್ಡ ಸಂರಕ್ಷಿರತ ಪ್ರದೇಶವೂ ಆಗಿದೆ. 191 ಕ್ಕೂ ಹೆಚ್ಚು ಹುಲಿಗಳು, 1116 ಕ್ಕೂ ಹೆಚ್ಚು ಆನೆಗಳು ಸೇರಿದಂತೆ ಚಿರತೆ, ಕರಡಿ, ಜಿಂಕೆ, ಕಾಡೆಮ್ಮೆ, ಮೊದಲಾದ ವನ್ಯಜೀವಿಗಳ ಆವಾಸ ಸ್ಥಾನವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಭೇಟಿ ನಂತರ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ಪರಿಸರ ಪ್ರವಾಸೋದ್ಯಮವು ಸಾಕಷ್ಟು ಅಭಿವೃದ್ಧಿಯಾಗಿದೆ. ಸಫಾರಿ ಹಾಗೂ ಹಸಿರು ಪ್ರವೇಶ ಶುಲ್ಕದಿಂದ 2023-24 ನೇ ಸಾಲಿನಲ್ಲಿ 19 ಕೋಟಿ ರೂಪಾಯಿ ಆದಾಯ ಹರಿದು ಬಂದಿತ್ತು. ಈ ಬಾರಿ ಅಂದರೆ 2024-25 ನೇ ಸಾಲಿನಲ್ಲಿ 22 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಬರುವ ನಿರೀಕ್ಷೆ ಇದೆ ಎಂದು ಡಿಸಿಎಫ್ ಪ್ರಭಾಕರನ್ ತಿಳಿಸಿದ್ದಾರೆ.
ಆದಾಯದ ಹಣ ಬಳಕೆ ಹೇಗೆ? ಅಧಿಕಾರಿಗಳು ಹೇಳಿದ್ದೇನು?
ಪರಿಸರ ಪ್ರವಾಸೋದ್ಯಮದಿಂದ ಬರುವ ಹಣದಿಂದ ಸಿಬ್ಬಂದಿ ವೇತನ, ವನ್ಯಜೀವಿಗಳ ಆವಾಸಸ್ಥಾನ ಅಭಿವೃದ್ಧಿ, ಲಂಟಾನ ಹಾಗೂ ಸೆನ್ನಾ ಕಳೆ ಗಿಡ ತೆಗೆಯಲು, ಅಗ್ನಿಶಾಮಕ ಉಪಕರಣಗಳಿಗೆ ಬಳಸಿಕೊಳ್ಳುವ ಮೂಲಕ ಹುಲಿ ಸಂರಕ್ಷಿತ ಪ್ರದೇಶದ ನಿರ್ವಹಣೆ ಮಾಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಬಂಡೀಪುರ ಆದಾಯ
ಬಂಡಿಪುರದ ಅರಣ್ಯ ಹಾಗೂ ಇಲ್ಲಿನ ವನ್ಯಜೀವಿಗಳ ವೀಕ್ಷಣೆಗೆಂದು ನಿತ್ಯ ನೂರಾರು ಪ್ರವಾಸಿಗರು ಬರತೊಡಗಿದ್ದಾರೆ. ಹೀಗೆ ಬರುವ ಪ್ರವಾಸಿಗರಿಗೆ ಇಲ್ಲಿ ಖಂಡಿತ ನಿರಾಸೆಯಾಗುವುದಿಲ್ಲ. ಸಫಾರಿಗೆ ತೆರಳುವ ಪ್ರವಾಸಿಗರು ಹಸಿರ ಸಿರಿಯನ್ನು ಕಣ್ತುಂಬಿಕೊಂಡು ವನ್ಯಜೀವಿಗಳನ್ನು ನೋಡಿ ಖುಷಿಪಡುತ್ತಾರೆ.

ಬಂಡೀಪುರದಲ್ಲಿ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ಒಟ್ಟಾರೆ ತನ್ನ ವನ್ಯಸಂಪತ್ತಿನಿಂದ ಕಂಗೊಳಿಸುತ್ತಿರುವ ಬಂಡೀಪುರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದು ವರ್ಷ ವರ್ಷ ಆದಾಯವು ಹೆಚ್ಚಾಗುತ್ತಿದೆ.
ಇದನ್ನೂ ಓದಿ: ದುರ್ಬಿನ್ನಿಂದ ಹುಲಿ ಹುಡುಕಿದ ಮೋದಿ, ಸಫಾರಿ ವೇಳೆ ಪ್ರಧಾನಿಗೆ ಕಂಡ ಪ್ರಾಣಿಗಳಾವುವು? ಇಲ್ಲಿವೆ ಫೋಟೋಸ್
ಬಂಡೀಪುರ ಅರಣ್ಯವನ್ನು ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಿ 50 ವರ್ಷಗಳು ಸಂದ ಸಂದರ್ಭದಲ್ಲಿ 2023ರ ಏಪ್ರಿಲ್ 9ರಂದು ಪ್ರಧಾನಿ ನರೇಂದ್ರ ಮೋದಿ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ ಸಫಾರಿ ನಡೆಸಿದ್ದರು. ಈ ವಿಚಾರ ದೇಶ ಮಟ್ಟದಲ್ಲಿ ಸುದ್ದಿಯಾಗಿತ್ತು. ನಂತರ ಬಂಡೀಪುರಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:15 am, Mon, 24 February 25