ಮೈಸೂರು ಮೃಗಾಲಯಕ್ಕೆ ಕಳಿಸಿದ್ದೇವೆ ಎಂದಿದ್ದ ನರಭಕ್ಷಕ ಚಿರತೆ ಹನೂರು ಕಾಡಿನಲ್ಲಿ ಪತ್ತೆ; ಅಧಿಕಾರಿಗಳ ವಿರುದ್ಧ ಸೋಲಿಗರು ಗರಂ

ಚಾಮರಾಜನಗರದ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆಯು ನರಭಕ್ಷಕ ಚಿರತೆಯೊಂದನ್ನು ಗುಟ್ಟಾಗಿ ಬಿಟ್ಟಿರುವುದು ಆದಿವಾಸಿ ಸೋಲಿಗರು ಮತ್ತು ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ. ಕಾಲರ್ ಐಡಿ ಇರುವ ಈ ಚಿರತೆಯನ್ನು ಮೈಸೂರಿಗೆ ರವಾನಿಸಲಾಗಿದೆ ಎಂದು ಹೇಳಿದ್ದ ಅರಣ್ಯಾಧಿಕಾರಿಗಳು, ಸೂಕ್ಷ್ಮ ಪ್ರದೇಶದಲ್ಲಿ ಬಿಟ್ಟು ಅಪಾಯ ತಂದಿದ್ದಾರೆ. ಇದರಿಂದ ಜಾನುವಾರುಗಳಿಗೆ ನಷ್ಟ, ಜೀವಕ್ಕೆ ಅಪಾಯ ಎದುರಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮೈಸೂರು ಮೃಗಾಲಯಕ್ಕೆ ಕಳಿಸಿದ್ದೇವೆ ಎಂದಿದ್ದ ನರಭಕ್ಷಕ ಚಿರತೆ ಹನೂರು ಕಾಡಿನಲ್ಲಿ ಪತ್ತೆ; ಅಧಿಕಾರಿಗಳ ವಿರುದ್ಧ ಸೋಲಿಗರು ಗರಂ
ನರಭಕ್ಷಕ ಚಿರತೆ
Image Credit source: Tv9 kannada
Edited By:

Updated on: Jun 20, 2026 | 10:05 AM

ಚಾಮರಾಜನಗರ, ಜೂ.20: ಮಲೆ ಮಹದೇಶ್ವರ ವನ್ಯಜೀವಿಧಾಮದ ಅರಣ್ಯ ಸಿಬ್ಬಂದಿಯ ನಡೆಗೆ ಆದಿವಾಸಿ ಸೋಲಿಗರು ಹಾಗೂ ಸ್ಥಳೀಯ ಗ್ರಾಮೀಣ ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಬೇರೆಡೆ ಸೆರೆ ಹಿಡಿದಿದ್ದ ನರಭಕ್ಷಕ ಚಿರತೆಯೊಂದನ್ನು ತಂದು ಪಾಲಾರ್ ಹಾಗೂ ಪೊನ್ನಾಚಿ ಕಾಡಿನ ಮಧ್ಯೆ ಬಿಟ್ಟಿರುವುದು ಈಗ ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪೊನ್ನಾಚಿ ಬಳಿಯ ಕಕ್ಕೆಹೊಲ ಗ್ರಾಮದಲ್ಲಿ ಹಸು, ಮೇಕೆ ಹಾಗೂ ಜಾನುವಾರುಗಳ ಮೇಲೆ ನಿರಂತರ ದಾಳಿ ನಡೆಸುತ್ತಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಬೋನು ಇಟ್ಟಿತ್ತು. ತಡರಾತ್ರಿ ಈ ಚಿರತೆ ಬೋನಿನಲ್ಲಿ ಲಾಕ್ ಆಗಿದೆ. ಆದರೆ, ಬೋನಿಗೆ ಬಿದ್ದ ಚಿರತೆಯ ಕತ್ತನ್ನು ಪರಿಶೀಲಿಸಿದಾಗ ಸಾರ್ವಜನಿಕರು ಮತ್ತು ಅಧಿಕಾರಿಗಳಿಗೆ ಶಾಕ್ ಕಾದಿತ್ತು. ಅದರ ಕತ್ತಿನಲ್ಲಿ ಕಾಲರ್ ಐಡಿ ಪತ್ತೆಯಾಗಿದೆ.

ಈ ಹಿಂದೆ ತಾಳಬೆಟ್ಟದ ಬಳಿ ಮಂಡ್ಯ ಮೂಲದ ಪಾದಯಾತ್ರಿ ಪ್ರವೀಣ್ ಎಂಬುವವರನ್ನು ಕೊಂದು ತಿಂದಿದ್ದ ನರಭಕ್ಷಕ ಚಿರತೆ ಇದೇ ಆಗಿದೆ. ಈ ಚಿರತೆಯನ್ನು ಈ ಹಿಂದೆ ರಂಗಸ್ವಾಮಿವೊಡ್ಡು ಬಳಿ ಸೆರೆ ಹಿಡಿದು, ಅದರ ಕತ್ತಿಗೆ ಕಾಲರ್ ಐಡಿ ಅಳವಡಿಸಲಾಗಿತ್ತು. ಅರಣ್ಯಾಧಿಕಾರಿಗಳು ಈ ನರಭಕ್ಷಕ ಚಿರತೆಯನ್ನು ಮೈಸೂರಿನ ಚಾಮುಂಡಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು. ಆದರೆ, ಅಧಿಕಾರಿಗಳು ಸಾರ್ವಜನಿಕರಿಗೆ ಸುಳ್ಳು ಹೇಳಿ, ಅದೇ ನರಭಕ್ಷಕ ಚಿರತೆಯನ್ನು ಗುಟ್ಟಾಗಿ ತಂದು ಪಾಲಾರ್ ಮತ್ತು ಪೊನ್ನಾಚಿ ಕಾಡಿನ ಮಧ್ಯೆ, ಅಂದರೆ ಆದಿವಾಸಿಗಳ ಹಾಡಿಗಳು ಇರುವ ಸೂಕ್ಷ್ಮ ಪ್ರದೇಶದಲ್ಲಿ ಬಿಟ್ಟಿದ್ದಾರೆ ಎಂಬ ಅಸಲಿ ಸತ್ಯ ಈಗ ಬಯಲಾಗಿದೆ.

ಇದನ್ನೂ ಓದಿ: ಹಳಿಗಳ ಮೇಲೆ ಓಡೋ ಲಕ್ಸುರಿ ಹೋಟೆಲ್!: ವೈರಲ್ ಆಯ್ತು ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ‘ಫಸ್ಟ್ ಎಸಿ’ ಲುಕ್

ಅರಣ್ಯ ಇಲಾಖೆಯ ಈ ಅಪಾಯಕಾರಿ ನಡೆಗೆ ಕಕ್ಕೆಹೊಲ ಗ್ರಾಮದ ಹಾಗೂ ಸುತ್ತಮುತ್ತಲಿನ ಹಾಡಿಗಳ ಆದಿವಾಸಿ ಸೋಲಿಗರು ಕೆಂಡಾಮಂಡಲವಾಗಿದ್ದಾರೆ. “ನರಭಕ್ಷಕ ಚಿರತೆಯನ್ನು ತಂದು ನಮ್ಮ ಜಾಗದಲ್ಲಿ ಬಿಡುವ ಮೂಲಕ ಅರಣ್ಯ ಸಿಬ್ಬಂದಿ ನಮ್ಮ ಪ್ರಾಣದ ಜೊತೆ ಚೆಲ್ಲಾಟವಾಡಿದ್ದಾರೆ. ಇವರ ಬೇಜವಾಬ್ದಾರಿತನದಿಂದಾಗಿ ನಮ್ಮ ಜಾನುವಾರುಗಳು ಬಲಿಯಾಗಿವೆ, ನಮಗೂ ಪ್ರಾಣಭಯ ಎದುರಾಗಿತ್ತು” ಎಂದು ಆದಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥ ಅರಣ್ಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us