ಆ ವೃದ್ದೆ ಹೆಸರು ನಂಜಮ್ಮ...ಇವರು ಚಾಮರಾಜನಗರ ಅಹಮದ್ ನಗರದ ನಿವಾಸಿ. ನಂಜಮ್ಮ ಮೊನ್ನೆ ವಯೋಸಹಜ ಅನಾರೋಗ್ಯ ದಿಂದ ಮೃತಪಟ್ಟಿದ್ದರು. ನಂಜಮ್ಮನಿಗೆ ಮಕ್ಕಳಿದ್ದರೂ ಯಾರೂ ಜೊತೆಗಿಲ್ಲವಂತೆ. ಜೊತೆಗೆ ಸಂಬಂಧಿಕರು ಸಾವಿನ ಸಮಯದಲ್ಲಿ ಬಂದು ಹೋಗಿದ್ದಾರೆ. ಆದ್ರೆ ಯಾರು ಕೂಡ ಅಂತ್ಯಸಂಸ್ಕಾರ ಮಾಡುವ ಜವಾಬ್ದಾರಿ ತೆಗೆದುಕೊಳ್ಳಲಿಲ್ಲವಂತೆ.
ಇಡೀ ಕುಟುಂಬದಲ್ಲಿ ಅಂತ್ಯಸಂಸ್ಕಾರ ಮಾಡಲು ಗಂಡಸರೇ ಇರಲಿಲ್ಲವಂತೆ. ಇದರಿಂದ ಯಾರೂ ಸಹ ಈಕೆಯ ಶವ ಸಂಸ್ಕಾರಕ್ಕೆ ಮುಂದಾಗಲಿಲ್ಲ. ಇದರಿಂದ ಮೃತದೇಹವನ್ನ ಮನೆ ಮುಂದೆಯೇ ಇಟ್ಟುಕೊಂಡಿದ್ದಾರೆ. ಈ ಏರಿಯಾದಲ್ಲಿ ಬಹುತೇಕ ಮುಸ್ಲಿಮರೆ ವಾಸವಿರುವುದರಿಂದ ಇಲ್ಲಿನ ಸ್ಥಳೀಯ ಯುವಕರಿಗೆ ವಿಚಾರ ಗೊತ್ತಾಗಿ ಅಹಮದ್ ನಗರದ ಮುಸ್ಲಿಂ ಯುವಕರು ನಂಜಮ್ಮನ ಶವವನ್ನು ಸ್ಮಶಾನಕ್ಕೆ ಹೊತ್ತು ಸಾಗಿಸಿ, ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ. (ವರದಿ: ದಿಲೀಪ್ ಚೌಡಹಳ್ಳಿ, ಟಿವಿ 9, ಚಾಮರಾಜನಗರ)
ನಂಜಮ್ಮನ ಶವಸಂಸ್ಕಾರಕ್ಕೆ ಸಂಬಂಧಿಕರು ಬಾರದೆ ಇರಲು ಕಾರಣ ಇಷ್ಟೆ.. ನಂಜಮ್ಮ ಅಂತರಜಾತಿ ವಿವಾಹವಾಗಿದ್ದರು. ಹಾಗಾಗಿ ಇವರ ಬಂಧು ಬಳಗದವರೆಲ್ಲಾ ದೂರ ಆಗಿದ್ದರು. ಹಲವು ವರ್ಷಗಳ ಹಿಂದೆ ಈಕೆಯ ಪತಿ ತೀರಿಕೊಂಡಿದ್ದರು. ಹಾಗಾಗಿ ನಂಜಮ್ಮ ತಮ್ಮ ಮಗಳೊಂದಿಗೆ ಚಾಮರಾಜನಗರದ ಅಹಮದ್ ನಗರದಲ್ಲಿ ಬಾಡಿಗೆ ಶೆಡ್‌ವೊಂದರಲ್ಲಿ ವಾಸವಿದ್ದರು.
ಅಂತರ ಜಾತಿ ವಿವಾಹವಾಗಿದ್ದರು ಎಂಬ ಒಂದೇ ಕಾರಣಕ್ಕೆ ಮೊಮ್ಮಗಳ ಪತಿ ಹೊರತುಪಡಿಸಿ ನಂಜಮ್ಮನ ಅಂತ್ಯಸಂಸ್ಕಾರಕ್ಕೆ ಬೇರೆ ಯಾವ ನೆಂಟರಿಷ್ಟರೂ ಕೈ ಜೋಡಿಸಲಿಲ್ಲ. ವಿಷಯ ಅರಿತ ಮುಸ್ಲಿಂ ಯುವಕರು ತಾವೇ ಹೋಗಿ ಶವಸಂಸ್ಕಾರಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿ ತಂದಿದ್ದೂ ಅಲ್ಲದೆ, ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಕೋಮು ಸಂಘರ್ಷ, ಧರ್ಮ ದಂಗಲ್‌ನಂತಹ ಘಟನೆಗಳಿಂದ ಮನುಷ್ಯ ಮನುಷ್ಯರ ನಡುವೆಯೇ ಕಂದಕ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಎಲ್ಲರ ಮೈಯಲ್ಲೂ ಹರಿಯುತ್ತಿರುವುದು ಕೆಂಪು ರಕ್ತವೇ. ನಾವೆಲ್ಲಾ ಮನುಷ್ಯರು ಎಂದುಕೊಂಡು ಹಿಂದೂ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿ, ಮುಸ್ಲಿಂ ಯುವಕರು ಸಾಮರಸ್ಯ ಮೆರೆದಿದ್ದಾರೆ.
Published On - 1:45 pm, Wed, 15 February 23