
ಚಾಮರಾಜನಗರ, ಏಪ್ರಿಲ್ 19: ಹನೂರು (Hanur) ತಾಲೂಕಿನ ಮಲೆ ಮಹದೇಶ್ವರ ಬೆಟ್ಟ (Male Mahadeshwara Hill) ವ್ಯಾಪ್ತಿಯ ತುಳಸಿಕೆರೆ ಗ್ರಾಮದ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಜನರು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ್ದರ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿದ ಬಳಿಕ ಜಿಲ್ಲಾಡಳಿತ ಮತ್ತು ಮಹದೇಶ್ವರ ಬೆಟ್ಟ ಪ್ರಾಧಿಕಾರ ಎಚ್ಚೆತ್ತಿವೆ.
ಪ್ರಾಧಿಕಾರ ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಗ್ರಾಮದ ಜನರಿಗೆ ಅನುಕಲವಾಗಲೆಂದು ಆರೋಗ್ಯ ಇಲಾಖೆಗೆ 18 ಲಕ್ಷ ರೂ. ಮೌಲ್ಯದ ಆ್ಯಂಬುಲೆನ್ಸ್ ಕೊಡುಗೆ ನೀಡಿದೆ.
ಹನೂರು ತಾಲೂಕಿನ ತುಳಸಿಕೆರೆ ಗ್ರಾಮಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲದ ಕಾರಣ ಗ್ರಾಮಕ್ಕೆ ಯಾವ ವಾಹನಗಳು ಬರುವುದಿಲ್ಲ. ಇದರಿಂದ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಡೋಲಿಯಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ಸೇರಿಸಲಾಗಿದೆ. ಸ್ವಾತಂತ್ರ ಬಂದು 75 ವರ್ಷಗಳು ಕಳೆದರೂ ಇನ್ನೂವರೆಗೂ ಹನೂರು ತಾಲೂಕಿನ 18 ಗ್ರಾಮಗಳಿಗೆ ವಿದ್ಯುತ್ ಸಂಪರ್ಕವು ದೊರೆತಿಲ್ಲ, ರಸ್ತೆ ಸಂಪರ್ಕ ಇಲ್ಲ.
ತುಳಸಿಕೆರೆ ಗ್ರಾಮದ ನಿವಾಸಿ ಪುಟ್ಟ ಎಂಬುವರು ಅನಾರೋಗ್ಯದಿಂದ ನಿತ್ರಾಣಗೊಂಡಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಪುಟ್ಟನನ್ನ ಡೋಲಿಯಲ್ಲಿ ಹೊತ್ತುಕೊಂಡು ಹೋಗಿ ತಮಿಳುನಾಡಿನ ಕೋಳತ್ತೂರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಕಾಡಂಚಿನ ಗ್ರಾಮವಾದ ಕಾರಣ ವಿದ್ಯಾರ್ಥಿಗಳು ವಿದ್ಯಾಬ್ಯಾಸಕ್ಕಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಬೇಕು. 4-5 ಕಿಮೀ ಕಾಡಿನ ದುರ್ಗಮ ಮಾರ್ಗದಲ್ಲಿ ಸಾಗುವಾಗ ಕತ್ತೆ ಕಿರುಬ, ಕರಡಿ ಮತ್ತು ಆನೆಗಳ ಕಾಟ ಇರುತ್ತದೆ. ಇಷ್ಟೆಲ್ಲ ಸಮಸ್ಯೆಯಿದ್ದರೂ ಜನಪ್ರತಿನಿಧಿಗಳು ಸರ್ಕಾರಿ ಅಧಿಕಾರಿಗಳು ದಿವ್ಯ ನಿರ್ಲಕ್ಷಕ್ಕೆ ಈ ಕಾಡಿನ ಮಕ್ಕಳು ದಿನನಿತ್ಯ ನರಕ ಅನುಭವಿಸುವಂತಾಗಿದೆ.
ಇದನ್ನೂ ಓದಿ: ಇತಿಹಾಸದಲ್ಲಿ ಮೊದಲ ಬಾರಿಗೆ ಮಾದಪ್ಪನ ಬೆಟ್ಟದಲ್ಲಿ ಸಂಪುಟ ಸಭೆ: ಹಲವು ನಿರೀಕ್ಷೆ
5ಜಿ ಯುಗದಲ್ಲಿ ಸೆಕೆಂಡ್ನಲ್ಲಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಂಪರ್ಕ ಬೆಳೆಸುವ ಈ ಯುಗದಲ್ಲಿ ಇನ್ನು ಮೂಲಭೂತ ಸೌಕರ್ಯ ಸಿಗದೆ ಶಿಲಾ ಯುಗದ ರೀತಿ ಇಲ್ಲಿನ ಜನರು ಬದುಕ್ತಯಿರುವ ನಿಜಕ್ಕೂ ದುರಂತವೆ ಸರಿ.