ಹೊಸ ವರ್ಷದ ವೇಳೆಯೂ ಮದ್ಯಕ್ಕಿಲ್ಲ ಡಿಮ್ಯಾಂಡ್​​: ದಾಖಲೆ ಮಟ್ಟದಲ್ಲಿ ಬೇಡಿಕೆ ಕುಸಿತ

ಹೊಸ ವರ್ಷದ ಸಂಭ್ರಮದ ನಡುವೆಯೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮದ್ಯ ಬೇಡಿಕೆ ಶೇ. 58ಕ್ಕಿಂತ ಹೆಚ್ಚು ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮದ್ಯ ಮತ್ತು ಬಿಯರ್ ಮಾರಾಟ ಗಣನೀಯವಾಗಿ ಕಡಿಮೆಯಾಗಿದೆ. ಜನರ ಆದಾಯ ಕುಸಿತ ಮತ್ತು ಮದ್ಯದ ಬೆಲೆ ಏರಿಕೆ ಈ ಬೇಡಿಕೆ ಇಳಿಕೆಗೆ ಮುಖ್ಯ ಕಾರಣ ಎನ್ನಲಾಗಿದೆ. ಸದ್ಯದ ಸ್ಥಿತಿಯ ಕಾರಣ ಮಾರಾಟ ಗುರಿ ತಲುಪಲು ಅಬಕಾರಿ ಇಲಾಖೆ ಹೆಣಗಾಡುತ್ತಿದೆ.

ಹೊಸ ವರ್ಷದ ವೇಳೆಯೂ ಮದ್ಯಕ್ಕಿಲ್ಲ ಡಿಮ್ಯಾಂಡ್​​: ದಾಖಲೆ ಮಟ್ಟದಲ್ಲಿ ಬೇಡಿಕೆ ಕುಸಿತ
ಮದ್ಯ ಮಾರಾಟ (ಸಾಂದರ್ಭಿಕ ಚಿತ್ರ)
Edited By:

Updated on: Dec 31, 2025 | 7:14 PM

ಚಿಕ್ಕಬಳ್ಳಾಪುರ, ಡಿಸೆಂಬರ್​​ 31: ಹೊಸ ವರ್ಷದ ಪಾರ್ಟಿ ಅಂದ್ರೆ ಅಲ್ಲಿ ಮದ್ಯ ಇರಲೇ ಬೇಕು. ಎಣ್ಣೆ ಇಲ್ಲದಿದ್ರೆ ಅದೆಂತಾ ಪಾರ್ಟಿ ಗುರೂ ಎಂದು ಮೂಗು ಮುರಿಯೋರ ನಡುವೆಯೂ ಮದ್ಯದ ಬೇಡಿಕೆ ಕುಸಿದಿದೆ ಎಂಬುದನ್ನು ನೀವು ನಂಬಬೇಕಿದೆ. ನ್ಯೂ ಇಯರ್​ ಸಂಭ್ರಮದ ನಡುವೆಯೂ ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿಯೇ ಮದ್ಯದ ಬೇಡಿಕೆ ಶೇ.58ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಕಳೆದ ವರ್ಷದ ಅಂಕಿ ಅಂಶಗಳಿಗೆ ಹೋಲಿಸದರೆ ಇದು ಭಾರಿ ಪ್ರಮಾಣದ ಇಳಿಕೆಯಾಗಿದೆ.

ಹೌದು, 2024ರ ಡಿಸೆಂಬರ್​​ 31ಕ್ಕೆ ಹೋಲಿಸಿದರೆ ಈ ವರ್ಷ ಡಿಸೆಂಬರ್​​ 31ರ ಮದ್ಯ ಮಾರಾಟದಲ್ಲಿ ಗಣನೀಯ ವ್ಯತ್ಯಾಸ ಕಂಡುಬಂದಿದೆ. ಮದ್ಯ ಬೇಡಿಕೆಯಲ್ಲಿ ಶೇ. 58.8ರಷ್ಟು ಕಡಿಮೆಯಾಗಿದ್ದರೆ, ಬಿಯರ್ ಬೇಡಿಕೆ ಶೇ. 11.94ರಷ್ಟು ಇಳಿಕೆಯಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಬಲವಂತ ಮಾಡಿ ಬಾರ್​​ಗಳಿಗೆ ಮದ್ಯ ಸರಬರಾಜು ಮಾಡಬೇಕಾದ ಸ್ಥಿತಿ ಉದ್ಭವಿಸಿದ್ದು, ಟಾರ್ಗೆಟ್ ರೀಚ್ ಮಾಡಲು ಅಬಕಾರಿ ಇಲಾಖೆ ಪರದಾಟ ನಡೆಸುತ್ತಿದೆ.

ಇದನ್ನೂ ಓದಿ:  ಕರ್ನಾಟಕದಲ್ಲಿ ಮದ್ಯ ಮಾರಾಟ ಭಾರಿ ಕುಸಿತ; 7 ತಿಂಗಳಾದ್ರೂ ಕಿಕ್‌ ಕೊಡದ ಎಣ್ಣೆ, ಕಾರಣವೇನು?

ಬೇಡಿಕೆ ಇಳಿಕೆಯಾಗಿರೋದೆಷ್ಟು?

ಕಳೆದ ವರ್ಷ ಡಿಸೆಂಬರ್​​ 31ರಂದು 13,191 ಕೇಸ್​​/ಬಾಕ್ಸ್​​ ಮದ್ಯ ಮಾರಾಟವಾಗಿದ್ದರೆ ಈ ವರ್ಷ ಡಿಸೆಂಬರ್​​ 31ರಂದು 5,516 ಕೇಸ್​​/ಬಾಕ್ಸ್​​ ಮಾತ್ರ ಸೇಲ್​​ ಆಗಿದೆ. ಅಂದರೆ ಶೇ. 58.18ರಷ್ಟು ಕುಸಿತವಾಗಿದೆ. ಇದೇ ದಿನಾಂಕಗಳಲ್ಲಿ ಕಳೆದ ವರ್ಷ 5,384 ಕೇಸ್​​/ಬಾಕ್ಸ್​​ ಬಿಯರ್​​ ಮಾರಾಟವಾಗಿದ್ದರೆ, ಈ ಬಾರಿ 4,741 ಕೇಸ್​​/ಬಾಕ್ಸ್​​ ಮಾರಾಟವಾಗಿದೆ. ಆ ಮೂಲಕ ಬೇಡಿಕೆ ಶೇ. 11.94ರಷ್ಟು ಇಳಿಕೆಯಾಗಿದೆ.

ದುಡಿಮೆ ಇಲ್ಲದ ಕಾರಣ ಹಣ ಸಂಪಾದನೆ ಇಲ್ಲ. ಸರಿಯಾಗಿ ಮಳೆ ಆಗದಿರೋದ್ರಿಂದ ಬೆಳೆ ಇಲ್ಲದೆಯೂ ಜನರ ಆದಾಯಕ್ಕೆ ಖೋತಾ ಆಗಿದೆ. ಇದರ ನಡುವೆ ಮದ್ಯದ ಬೆಲೆಯೂ ಏರಿಕೆಯಾಗಿದೆ. ಲಿಕ್ಕರ್​​ಗಳ ಮೇಲೆ 10-15 ರೂಪಾಯಿ ಹೆಚ್ಚಾಗಿರುವ ಆಗಿರುವ ಕಾರಣ ಕುಡಿಯುವರಿಗೆ ಸಮಸ್ಯೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಸದರೆ ಹೊಸ ವರ್ಷದ ವೇಳೆ ಮದ್ಯ ಖರೀದಿಸುವವರ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆಯಾಗಿದೆ ಎಂದು ಬಾರ್​​ ಮಾಲಕರು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.