Chikkaballapur 4 weddings: ಮದುವೆಯಾಗುವುದನ್ನೆ ಕಾಯಕ ಮಾಡಿಕೊಂಡ ಯುವತಿ! ಸರಣಿಯಂತೆ ನಾಲ್ಕು ಮದುವೆ – ಆಮೇಲೆ!?
Chikkaballapur woman cheater: ಇತ್ತೀಚೆಗೆ ಬೆಳಗಾವಿ ಜಿಲ್ಲಾ ಎಸ್ಪಿಯನ್ನು ಭೇಟಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿರುವ ಯುವಕನನ್ನು ಮದುವೆಯಾಗಿದ್ದು, ತಾನು ಕೋಟ್ಯಾಧಿಪತಿ. ಆಸ್ತಿಗಾಗಿ ತಮ್ಮ ಸಂಬಂಧಿಕರು ಕಿರುಕುಳ ಕೊಡುತ್ತಿದ್ದಾರೆ. ತಮಗೆ ರಕ್ಷಣೆ ಕೊಡುವಂತೆ ಪೊಲೀಸರ ಮೊರೆ ಹೋಗಿದ್ದ ಪ್ರಿಯಾಂಕ ಅಲಿಯಾಸ್ ಪ್ರಿಯ ಎಂಬ ಮಹಿಳೆಯ ರಹಸ್ಯಗಳು ಒಂದೊಂದೆ ಬಯಲಾಗುತ್ತಿವೆ. ಚಿಕ್ಕಬಳ್ಳಾಪುರದಲ್ಲೆ ಎರಡೆರಡು ಮದುವೆಯಾಗಿ ಮೋಸ ಮಾಡಿರುವುದು ಬಯಲಾಗಿದೆ.
ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿದ್ದ ಪ್ರಿಯಾಂಕ ಅಲಿಯಾಸ್ ಪ್ರಿಯ ಎಂಬ ಮಹಿಳೆ ತಾನು ಅಗರ್ಭ ಶ್ರೀಮಂತೆ. ತನಗೆ 12 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಿದೆ. ತಮ್ಮ ಮಾವಂದಿರು, ಸಂಬಂಧಿಗಳು ಕಿರುಕುಳ ಕೊಡುತ್ತಿದ್ದಾರೆ. ಇದರಿಂದ ಬೇಸತ್ತಿದ್ದೇನೆ. ಬೆಳಗಾವಿ ಮೂಲದ ರಾಹುಲ್ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದು, ತಮಗೆ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದಳು. ಆದರೆ ಪ್ರಿಯಾಂಕಾಳ ಹೇಳಿಕೆ ಗೊಂದಲದಿಂದ ಕೂಡಿತ್ತು. ಪೊಲೀಸರು ಮೂಕವಿಸ್ಮಿತರಾಗಿದ್ದರು. ಆದರೆ ಅಸಲಿಗೆ ಪ್ರಿಯಾಂಕ ಒಂದಲ್ಲಾ, ಎರಡಲ್ಲಾ, ಮೂರಕ್ಕೂ ಮುಕ್ತಾಯ ಮಾಡಿಲ್ಲ ಪುಣ್ಯಾತ್ತಗಿತ್ತಿ. ನಾಲ್ಕಾರು ಮದುವೆಯಾಗಿ, ಮದುವೆಯಾದ ಗಂಡಸಿರಿಗೆಲ್ಲಾ ಸಾಲುಸಾಲಾಗಿ ಕೈಕೊಟ್ಟಿರುವ ರಹಸ್ಯ ಕೊನೆಗೂ ಬಟಾಬಯಲಾಗಿದೆ!
ಇನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕಳ ಲವ್ ಮ್ಯಾರೇಜ್ ವೈರಲ್ ಆಗುತ್ತಿದ್ದಂತೆ, ಆಕೆಯ ಒಂದೊಂದೆ ಮುಖಗಳು ಬಯಲಾಗಿವೆ. ಅಸಲಿಗೆ ಪ್ರಿಯಾಂಕ ಶ್ರೀಮಂತೆಯೂ ಅಲ್ಲ, ಆಕೆಗೆ ಹಣ, ಆಸ್ತಿಯೂ ಇಲ್ಲ. ಹೇಳಿಕೊಳ್ಳುವ ಸಂಬಂಧಿಗಳೂ ಇಲ್ಲ. ದಿನಕ್ಕೊಂದು ವಿಳಾಸ, ದಿನಕ್ಕೊಂದು ಊರು ಹೇಳುವ ಪ್ರಿಯಾಂಕ ಒಮ್ಮೆ ಬೆಂಗಳೂರಿನವಳು ಎಂದರೆ, ಮತ್ತೊಮ್ಮೆ ಶಿವಮೊಗ್ಗದವಳು, ಇನ್ನೊಮ್ಮೆ ಚಿಕ್ಕಬಳ್ಳಾಪುರ ಅದೂ ಅಲ್ಲದಿದ್ದರೆ ಬೆಳಗಾವಿಯ ಹೆಸರು ಹೇಳುತ್ತಾಳೆ.
ಅಸಲಿಗೆ ಒಂದು ವರ್ಷದ ಹಿಂದೆ ಪರಿಚಯವಾದ ಚಿಕ್ಕಬಳ್ಳಾಪುರ ತಾಲ್ಲೂಕು ಅಂಗರೇಖನಹಳ್ಳಿ ಗ್ರಾಮದ ಮುನಿರಾಜು ಎನ್ನುವವರನ್ನು ನಾಯನಹಳ್ಳಿ ಗ್ರಾಮದ ದೇವಸ್ಥಾನವೊಂದರಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಮದುವೆಯಾಗಿದ್ದಳು. ನಂತರ ಮುನಿರಾಜು ಬಳಿ ಕಾರು ಬಾಡಿಗೆಗೆ ಬರುತ್ತಿದ್ದ ಶಿಡ್ಲಘಟ್ಟ ತಾಲ್ಲೂಕು, ರೊಪ್ಪಾರ್ಲಹಳ್ಳಿ ಗ್ರಾಮದ ವಿವಾಹಿತ ಎನ್. ಸುಧಾಕರ್ಗೆ ಗಾಳ ಹಾಕಿ, ಆತನನ್ನು ಕಾಡಿಸಿ ಪೀಡಿಸಿ, ಮಾಂಗಲ್ಯಧಾರಣೆ ಮಾಡಿಸಿಕೊಂಡಿದ್ದಾಳೆ. 8 ತಿಂಗಳು ಸಂಸಾರ ಮಾಡಿ, ಹೇಳದೇ-ಕೇಳದೇ ಎಸ್ಕೇಪ್ ಆಗಿದ್ದಳು. ಈಗ ಬೆಳಗಾವಿಯಲ್ಲಿ ರಾಹುಲ್ ಎನ್ನುವವರನ್ನು ಮದುವೆಯಾಗಿ ಪತ್ತೆಯಾಗಿದ್ದಾಳೆ ನೋಡಿ! ಪ್ರಿಯಾಂಕಳ ಗಂಡ ಶಿಡ್ಲಘಟ್ಟ ಸುಧಾಕರ್ ತನ್ನ ‘ಚಿನ್ನು’ವಿನ ರಹಸ್ಯವನ್ನು ಬಹಿರಂಗಗೊಳಿಸಿದ್ದಾರೆ.
ಅಸಲಿಗೆ ಪ್ರಿಯಾಂಕಳ ಸಂಬಂಧಿಕರು ಬೆಂಗಳೂರು, ತಮಿಳುನಾಡಿನ ಹೊಸೂರಿನಲ್ಲಿದ್ದಾರಂತೆ. ಬೆಂಗಳೂರಿನಲ್ಲಿ ಫೋಟೋಗ್ರಾಫರ್ ಒಬ್ಬರನ್ನು ಮದುವೆಯಾಗಿ ನಂತರ ತಮ್ಮ ಸಂಬಂಧಿಕರೊಬ್ಬರನ್ನು ಮದುವೆಯಾಗಿ, ತದನಂತರ ಚಿಕ್ಕಬಳ್ಳಾಪುರದಲ್ಲಿ ಒಬ್ಬರಲ್ಲವೆಂದು ಇಬ್ಬರನ್ನು ಮದುವೆಯಾಗಿ ನಾಲ್ಕೂ ಜನರಿಗೆ ಕೈಕೊಟ್ಟಿದ್ದಾಳಂತೆ. ಮಾತಿನಲ್ಲೆ ಮರಳು ಮಾಡುವ ಚಿನ್ನಾರಿ ಮುತ್ತಾಳ ಮದುವೆ ಬೇಟೆ ತುಂಬಾ ಇದೆಯಂತೆ. ಪೊಲೀಸರು ಮತ್ತಷ್ಟು ತನಿಖೆ ನಡೆಸಿದರೆ ಪ್ರಿಯಾಂಕಳ ಮದುವೆಯ ಕಥಾಕಾಲಕ್ಷೇಪ ಬಯಲಿಗೆ ಬೀಳಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ