
ಚಿಕ್ಕಬಳ್ಳಾಪುರ, ಆಗಸ್ಟ್ 04: ಸಚಿವ ಸಂಪುಟ ವಿಸ್ತರಣೆಯಲ್ಲಿ (Cabinet Expansion) ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿಗೆ (MLA Subbareddy) ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸಾವಿರಾರು ಕಾರ್ಯಕರ್ತರು ಶಾಸಕರ ಮನೆ ಮುಂದೆ ಜಮಾಯಿಸಿ, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ನಾಳೆ ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ಮೂರು ತಾಲೂಕುಗಳ ಬಂದ್‌ಗೆ ಕರೆ ನೀಡಲಾಗಿದೆ. ಮತ್ತೊಂದೆಡೆ ಪಕ್ಷದ ವಿವಿಧ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡಲಾಗುತ್ತಿದೆ.
ಶಾಸಕ ಎಸ್.ಎನ್. ಸುಬ್ಬಾರೆಡ್ಡಿಗೆ ಸಚಿವ ಸ್ಥಾನ ಸಿಗದಕ್ಕೆ ಬಾಗೇಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನೋವು ಆಕ್ರೋಶವಾಗಿ ಹೊರಹೊಮ್ಮಿದೆ. ಬಾಗೇಪಲ್ಲಿ ಪಟ್ಟಣದ ಗೂಳೂರು ರಸ್ತೆಯಲ್ಲಿರುವ ಶಾಸಕರ ಮನೆ ಮುಂದೆ ಸಾವಿರಾರು ಕಾರ್ಯಕರ್ತರು ಮತ್ತು ಮುಖಂಡರು ಜಮಾಯಿಸಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಿದರು.
ಇದನ್ನೂ ಓದಿ: ಖಾಲಿ ಇರುವ ಒಂದು ಸಚಿವ ಸ್ಥಾನಕ್ಕಾಗಿ ಮಹಿಳಾ ಶಾಸಕರ ನಡುವೆ ತೀವ್ರ ಪೈಪೋಟಿ: ರೇಸ್ನಲ್ಲಿ ಇರೋದು ಯಾರ್ಯಾರು?
ಇದೇ ವೇಳೆ ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲೂಕುಗಳ ಕಾಂಗ್ರೆಸ್ ಮುಖಂಡರ ಸಭೆ ನಡೆಸಿ ನಾಳೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮೂರು ತಾಲೂಕುಗಳ ಬಂದ್‌ಗೆ ಕರೆ ನೀಡಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ಬಂದ್‌ಗೆ ಬೆಂಬಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಸತತ ಮೂರು ಬಾರಿ ಶಾಸಕರಾಗಿರುವ ಎಸ್.ಎನ್. ಸುಬ್ಬಾರೆಡ್ಡಿಗೆ ಸಚಿವ ಸ್ಥಾನ ನೀಡದೆ ಕಾಂಗ್ರೆಸ್ ವರಿಷ್ಠರು ಅನ್ಯಾಯ ಮಾಡಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್‌ನ ಎಂಟು ಶಾಸಕರಿದ್ದರೂ ಯಾರೊಬ್ಬರಿಗೂ ಸಚಿವ ಸ್ಥಾನ ನೀಡಿಲ್ಲ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಸ್ಥಾನ ವಿಚಾರ ಇದೀಗ ಸ್ಥಳಿಯ ಕಾಂಗ್ರೆಸ್ ಪದಾಧಿಕಾರಿಗಳ ರಾಜೀನಾಮೆ ಪರ್ವಕ್ಕೂ ತಿರುಗಿದೆ. ಬಾಗೇಪಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಗ್ಯಾರಂಟಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಹೆಚ್.ಎಸ್. ನರೇಂದ್ರ ರಾಜೀನಾಮೆ ಘೋಷಿಸಿದ್ದಾರೆ. ಚೇಳೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಪಿ.ಆರ್. ಚಲಂ ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇನ್ನೂ ಹಲವು ಕಾಂಗ್ರೆಸ್ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದು, ಪಕ್ಷದ ವರಿಷ್ಠರು ತಕ್ಷಣವೇ ಮಧ್ಯಪ್ರವೇಶಿಸಿ ಸುಬ್ಬಾರೆಡ್ಡಿಗೆ ಸಚಿವ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ನೂತನ ಸಚಿವರ ಪ್ರಮಾಣವಚನ ಸಮಾರಂಭಕ್ಕೆ ಸಿದ್ದರಾಮಯ್ಯ ಗೈರಾಗಿದ್ದೇಕೆ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
ಬಾಗೇಪಲ್ಲಿ ಕ್ಷೇತ್ರದಲ್ಲಿ ಸಚಿವ ಸ್ಥಾನ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಂದು ಕಡೆ ಮೂರು ತಾಲೂಕುಗಳ ಬಂದ್‌ಗೆ ಕರೆ, ಮತ್ತೊಂದೆಡೆ ಪಕ್ಷದ ವಿವಿಧ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆಗಳು ಆರಂಭವಾಗಿರುವುದು ರಾಜಕೀಯ ಬೆಳವಣಿಗೆಗೆ ಹೊಸ ತಿರುವು ನೀಡಿದೆ. ಈ ಬೆಳವಣಿಗೆಗೆ ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.