ಚಿಕ್ಕಬಳ್ಳಾಪುರ: ಅಪ್ರಾಪ್ತೆ ಜತೆ ಲವ್, ಪ್ರೇಯಸಿಯ ಸಾಕಲು ಕಳ್ಳತನ ಮಾಡ್ತಿದ್ದ ಯುವಕ ಲಾಕ್
ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ, ಬಾಲಕಿಯ ಜೊತೆ ಪರಾರಿಯಾಗಿದ್ದ ಯುವಕನೋರ್ವ ಕೊನೆಗೆ ಆಕೆಯನ್ನು ಸಾಕಲು ಮನೆಗಳಲ್ಲಿ ಕಳ್ಳತನ ಮಾಡುವುದರ ಮೂಲಕ ರಾಯಲ್ ಆಗಿ ಜೀವನ ಮಾಡುತ್ತಿದ್ದ. ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ. ಆದರೆ, ಚಿಕ್ಕಬಳ್ಳಾಪುರ ಪೊಲೀಸರು ಈಗ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಚಿಕ್ಕಬಳ್ಳಾಪುರ, ಫೆಬ್ರವರಿ 13: ಆತನ ಹೆಸರು ಕೆಎಚ್ ನಾಗೇಂದ್ರ. ಇನ್ನೂ 21 ವರ್ಷ ವಯಸ್ಸು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕು, ಕೋರೇನಹಳ್ಳಿ ನಿವಾಸಿ. ಇದೇ ಗುಡಿಬಂಡೆ ನಗರದ, 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದ ನಾಗೇಂದ್ರ, ಆಕೆಯ ಸಮೇತ ಮಂಡ್ಯದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದ. ಕೊನೆಗೆ ಪ್ರಿಯತಮೆಯನ್ನು ಸಾಕಲು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮನೆಗಳ ಕಳ್ಳತನಕ್ಕೆ ಇಳಿದಿದ್ದ. ಇದರಿಂದ ಪೊಲೀಸರು ಆರೋಪಿ ನಾಗೇಂದ್ರನನ್ನು ಬಂಧಿಸಿ, ಆತನಿಂದ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.
ಆರೋಪಿ ನಾಗೇಂದ್ರ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ, ಪೆರೇಸಂದ್ರ, ಚೇಳೂರು ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 8ಕ್ಕೂ ಹೆಚ್ಚು ಮನೆ ಕಳ್ಳತನ ಪ್ರಕರಣಗಳಲ್ಲಿ ಶಾಮೀಲಾಗಿದ್ದಾನೆ.
ಆರೋಪಿಯಿಂದ ಜಪ್ತಿಯಾಗಿದ್ದೇನೇನು?
ಆರೋಪಿ ಕೆಎಸ್ ನಾಗೇಂದ್ರನಿಂದ 152 ಗ್ರಾಂ ಚಿನ್ನ, 496 ಗ್ರಾಂ ಬೆಳ್ಳಿ, 12 ಬೈಕ್ ಸೇರಿ 12,41,200 ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರು ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಆತನ ಅಪ್ರಾಪ್ತ ಪ್ರಿಯತಮೆಯನ್ನು ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ತಿಳಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: 18 ವರ್ಷದ ಹುಡುಗಿ ಜೊತೆ 50 ರ ವ್ಯಕ್ತಿಯ ಲವ್ವಿ ಡವ್ವಿ, ಅಜ್ಜಿ ಮನೆಯಲ್ಲಿದ್ದ ಹುಡುಗಿ ನಾಪತ್ತೆ
ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ, ಪ್ರೇಮ, ಪ್ರಣಯವೆಂದು ಎಸ್ಕೇಪ್ ಆಗಿದ್ದ ಜೋಡಿ ಬದಕಲು ಅಡ್ಡದಾರಿ ಹಿಡಿದು ಈಗ ಪೊಲೀಸರ ಅತಿಥಿಗಳಾಗಿದ್ದು ವಿಪರ್ಯಾಸವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ