ಚಿಕ್ಕಬಳ್ಳಾಪುರ: ಹೆಣ್ಣು ಹೆತ್ತಿದ್ದಕ್ಕೆ ಪತ್ನಿಗೆ ಕಿರುಕುಳ ಆರೋಪ; ಮಗುವನ್ನು ಆಸ್ಪತ್ರೆಯಲ್ಲೇ ಇಟ್ಟುಕೊಳ್ಳಿ ಎಂದು ಅಂಗಲಾಚಿದ ಬಾಣಂತಿ
ಬಾಗೇಪಲ್ಲಿ ತಾಲೂಕಿನಲ್ಲಿ ಕೈ ಹಿಡಿದ ಪತ್ನಿ, ಒಬ್ಬರಲ್ಲವೆಂದು ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಕಾರಣ, ಅಸಮಾಧಾನ, ಅಕ್ರೋಶಗೊಂಡ ಗಂಡ ಹಾಗೂ ಅತ್ತೆ-ಮಾವ, ಬಾಣಂತಿ ಹಾಗೂ ಮಗುವನ್ನು ಸರಿಯಾಗಿ ನೋಡಿಕೊಳ್ಳದೇ ಕಿರುಕುಳ ನೀಡುತ್ತಿದ್ದಾರೆಂದು ಕುಗ್ಗಿದ ಬಾಣಂತಿಯೋರ್ವಳು ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ಧಿಗೆ ಒಪ್ಪಿಸಲು ಮುಂದಾದ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ, ಮಾ.06: ಹೆರಿಗೆ ಆಗಿ ಹಸಿ ಮೈ ಹೊತ್ತ ಬಾಣಂತಿಯೋರ್ವಳು ಯಾವ ಮಕ್ಕಳೂ ಬೇಡ, ಜೀವನವೇ ಬೇಡವೆಂದು ಬೇಸತ್ತು, ತನ್ನ 4 ತಿಂಗಳ ಹೆಣ್ಣು ಮಗುವನ್ನು ವೈದ್ಯರಿಗೆ ಒಪ್ಪಿಸಲು ಮುಂದಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಮರಸನಪಲ್ಲಿ ಗ್ರಾಮದಲ್ಲಿ ನಡೆದಿದೆ. ಬಾಣಂತಿ ರಾಜಮ್ಮ, ಗಂಡ ಲಕ್ಷ್ಮೀನಾರಾಯಣನನ್ನು ಮದುವೆಯಾಗಿ 5 ವರ್ಷಗಳಾಗಿದೆ. ಹುಟ್ಟಿದ 2 ಮಕ್ಕಳು ಹೆಣ್ಣು ಮಕ್ಕಳೆಂಬ ಕಾರಣದಿಂದ ಗಂಡ, ಅತ್ತೆ, ಮಾವ ತಾತ್ಸಾರ ತಾಳಿದ್ದು, ಕಿರುಕುಳ ನೀಡುತ್ತಿದ್ದಾರೆ. ಹೆತ್ತ ಮಗುವನ್ನು ಆಸ್ಪತ್ರೆಯಲ್ಲೇ ಇಟ್ಟುಕೊಳ್ಳಿ ಎಂದು ಅಂಗಲಾಚಿದ್ದಾಳೆ.
ಇನ್ನು ರಾಜಮ್ಮಗೆ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಸಿಜೆರಿಯನ್ ಹೆರಿಗೆ ಆಗಿ ನಂತರ ಗರ್ಭಕೋಶ ಶಸ್ತ್ರಚಿಕಿತ್ಸೆಯಾಗಿದೆ. ಒಂದೆಡೆ ವಿಶ್ರಾಂತಿ, ವೈದ್ಯಕೀಯ ಚಿಕಿತ್ಸೆ ಬೇಕಿದೆ. ಮತ್ತೊಂದೆಡೆ ಮಗುವಿನ ಆರೈಕೆ ಆಗಬೇಕಿದೆ. ಆದರೆ, ಗಂಡನ ಮನೆಯಲ್ಲಿ ಆರೈಕೆ, ಸಾಂತ್ವಾನ ಸಿಗದ ಹಿನ್ನಲೆ ಮಹಿಳೆ ನೊಂದು ಆಸ್ಪತ್ರೆಗೆ ಬಂದಿದ್ದಾಳೆ. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಕೆಯ ಗಂಡ ಲಕ್ಷ್ಮೀನಾರಾಯಣನನ್ನು ಕರೆಯಿಸಿ ಬುದ್ಧಿವಾದ ಹೇಳಿದರು.
ಇದನ್ನೂ ಓದಿ:ತುಮಕೂರು ಜಿಲ್ಲೆಯಲ್ಲಿ ಮುಂದುವರಿದ ಮೌಢ್ಯಾಚರಣೆ: 1 ತಿಂಗಳ ಹಸುಗೂಸು, ಬಾಣಂತಿಯನ್ನ ಊರಾಚೆ ಇರಿಸಿದ ಗ್ರಾಮಸ್ಥರು
ಇದಾದ ಬಳಿಕ ಲಕ್ಷ್ಮೀನಾರಾಯಣ ತನ್ನ ಹೆಂಡತಿ ಮತ್ತು ಮಗುವನ್ನು ಸಾಕುವುದಾಗಿ ತಿಳಿಸಿದ್ದಾನೆ. ಮತ್ತೊಂದೆಡೆ ರಾಜಮ್ಮನ ಅತ್ತೆ-ಮಾವನ ವಾದವೇ ಬೇರೆಯಾಗಿದ್ದು, ‘ರಾಜಮ್ಮ ಗಂಡನ ಮನೆ ಬದಲು ತವರು ಮನೆಗೆ ಹೋಗಲು ಯತ್ನಿಸಿದ್ದಾಳೆ. ಆದರೆ, ಯಾರೂ ರಾಜಮ್ಮನ ಆಶ್ರಯಕ್ಕೆ ಬಂದಿಲ್ಲ. ರಾಜಮ್ಮ ಮಾನಸಿಕ ಸ್ಥೈರ್ಯ ಕಳೆದುಕೊಂಡು, ಇಲ್ಲಸಲ್ಲದ್ದನ್ನು ಆರೋಪ ಮಾಡುತ್ತಿದ್ದಾಳೆಂದು ಆರೋಪ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ