ಅನೈತಿಕ ಸಂಬಂಧ ಆರೋಪ: ಎರಡನೇ ಹೆಂಡತಿಯನ್ನ ಕೂಡಿಹಾಕಿ ಮೊದಲನೇ ಪತ್ನಿ ಕಡೆಯವರಿಂದ ಹಲ್ಲೆ
ಚಿಕ್ಕಬಳ್ಳಾಪುರದಲ್ಲಿ ಪ್ರೇಮ ವಿವಾಹ ಹಿನ್ನೆಲೆಯಲ್ಲಿ ಭೀಕರ ಘಟನೆ ನಡೆದಿದೆ. ಓರ್ವ ವ್ಯಕ್ತಿ ಮೊದಲ ಪತ್ನಿಯ ಕುಟುಂಬಸ್ಥರು ಅವನ ಎರಡನೇ ಪತ್ನಿ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಬಳಿಕ ಫಾರ್ಮ್ ಹೌಸ್ನಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪೊಲೀಸರು ಹಲವು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಚಿಕ್ಕಬಳ್ಳಾಪುರ, ಫೆಬ್ರವರಿ 20: ಆತ ಮೊದಲೇ ಒಬ್ಬಾಕೆಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದ, ಆಕೆಗೆ ಇಬ್ಬರು ಮಕ್ಕಳನ್ನು ಕರುಣಿಸಿದ್ದಾನೆ. ಇರುವ ಹೆಂಡತಿ ಸಾಲದು ಎಂದು ಬೇರೊಬ್ಬಳ್ಳನ್ನು ಪ್ರೀತಿಸಿ, ಇನ್ನೊಂದು ಸಂಸಾರ ಮಾಡಿಕೊಂಡಿದ್ದನಂತೆ. ಇದರಿಂದ ಕೆರಳಿದ್ದ ಮೊದಲನೇ ಹೆಂಡತಿ ಕಡೆಯವರು ಗಂಡನ ಎರಡನೇ ಹೆಂಡತಿ ಕೈಗೆ ಸಿಕ್ಕಿದ್ದೆ ತಡ ಅವರನ್ನು ಫಾರ್ಮ್ ಹೌಸ್ನಲ್ಲಿ ಕೂಡಿಹಾಕಿ, ಹಿಗ್ಗಾಮುಗ್ಗಾ ಥಳಿಸಿ ಮಾರಣಾಂತಿಕ ಹಲ್ಲೆ (attack) ಮಾಡಿರುವಂತಹ ಘಟನೆ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಜಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೂಲತಃ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿಯಾಗಿರುವ ಗಂಗರಾಜ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಜೀಗಾನಹಳ್ಳಿ ಗ್ರಾಮಕ್ಕೆ ಆಗಾಗ ಬಂದು ಹೋಗುತ್ತಿದ್ದ. ಇದೇ ಊರಿಗೆ ತಂಗಿಯನ್ನ ಮದುವೆ ಮಾಡಿಕೊಟ್ಟಿದ. ಹೀಗೆ ಬಂದು ಹೋಗುವಾಗ ಅಕ್ಕ-ಮಾವನ ಸಂಬಂಧಿ ರಾಜೇಶ್ವರಿ ಎಂಬ ಹುಡುಗಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೂ ತಂಗಿ ಮನೆಯ ಪಕ್ಕದ ನಿವಾಸಿ ಸಂಗೀತಾ ಎನ್ನುವ ಯುವತಿಯನ್ನು ಪ್ರೀತಿಸಿ, ಕೆಲವು ವರ್ಷಗಳಿಂದ ಅನೈತಿಕ ಸಂಬಂಧವಿಟ್ಟುಕೊಂಡಿದ್ದನಂತೆ.
ಇದನ್ನೂ ಓದಿ: ರೀಲ್ಸ್ ಮಾಡುವಾಗ ರೈಲು ಡಿಕ್ಕಿಯಾಗಿ ಯುಪಿ ಮೂಲದ ಮೂವರು ಕಾರ್ಮಿಕರು ಸಾವು
ಹೆಂಡತಿ ಮನೆಯವರ ವಿರೋಧದ ನಡುವೆಯೂ ಕೆಲವು ವರ್ಷಗಳಿಂದ ಸಂಗೀತಾಳನ್ನು ಮದುವೆ ಮಾಡಿಕೊಂಡು, ಬೆಂಗಳೂರಿನಲ್ಲಿ ಪ್ರತ್ಯೇಕ ಮನೆ ಮಾಡಿ ಇಟ್ಟಿದ್ದನಂತೆ. ಆದರೆ ನಿನ್ನೆ ರಾತ್ರಿ ಜೀಗಾನಹಳ್ಳಿ ಗ್ರಾಮದಲ್ಲಿ ಗಂಗರಾಜ ಹಾಗೂ ಸಂಗೀತಾ ಪ್ರತ್ಯಕ್ಷವಾಗಿದ್ದೆ ತಡ, ಗಂಗರಾಜು ಸಂಬಂಧಿಗಳು ಸಂಗೀತಾಳನ್ನು ಫಾರ್ಮ್‍ಹೌಸ್‍ನಲ್ಲಿ ಕೂಡಿಹಾಕಿ, ಹಿಗ್ಗಾಮುಗ್ಗಾ ಮನಸ್ಸೋ ಇಚ್ಚೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಸಂಗೀತಾ ತಂದೆಗೆ ಹಲ್ಲೆ
ಅಸಲಿಗೆ ನಿನ್ನೆ ಜೀಗಾನಹಳ್ಳಿ ಗ್ರಾಮದಲ್ಲಿ ದೇವಸ್ಥಾನವೊಂದರ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಒಂದು ಚಂದಾ ಸಂಗ್ರಹ ಮಾಡುತ್ತಿದ್ದರು. ಗಂಗರಾಜ ಹೆಂಡತಿ ರಾಜೇಶ್ವರಿ ಹಾಗೂ ತಂಗಿ ಸಂಬಂಧಿಕರು ಚಂದಾ ಸಂಗ್ರಹ ಮಾಡುತ್ತಿದ್ದರು. ಆಗ ಸಂಗೀತಾ ತಂದೆ ರಾಮುನನ್ನೂ ಸಹಾ ಚಂದಾ ಕೇಳಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಗಂಗರಾಜು ಸಂಬಂಧಿಕರು ಸಂಗೀತಾ ತಂದೆ ರಾಮುವಿನ ಹಲ್ಲೆ ಮಾಡಿದ್ದಾರೆ. ಇದನ್ನು ಕೇಳಲು ನಿನ್ನೆ ತಡರಾತ್ರಿ ಸಂಗೀತಾ, ತನ್ನ ಗಂಡ ಗಂಗರಾಜು ಜೊತೆ ಬೆಂಗಳೂರಿನಿಂದ ಜೀಗಾನಹಳ್ಳಿ ಗ್ರಾಮಕ್ಕೆ ಆಗಮಿಸಿದ್ದಾಳೆ.
ಈ ವೇಳೆ ಕೈಗೆ ಸಿಕ್ಕ ಗಂಗರಾಜು ಹಾಗೂ ಸಂಗೀತಾಳನ್ನು ಕರೆದುಕೊಂಡು ಫಾರ್ಮ್‍ಹೌಸ್‍ನಲ್ಲಿ ಕೂಡಿಹಾಕಿ, ಸಂಗೀತಾಳನ್ನು ಮಾತ್ರ ಹಿಗ್ಗಾಮುಗ್ಗಾ ಥಳಿಸಿ ರಾಕ್ಷಸಿ ಕೃತ್ಯ ಮೆರೆದಿದ್ದಾರೆ. ಕೊನೆಗೆ ಪೊಲೀಸರು ಬಂದು ಸಂಗೀತಾಳನ್ನು ರಕ್ಷಿಸಿದ್ದಾರೆ ಎಂದು ಸಂಗೀತಾ ತಂದೆ ರಾಮು ಹೇಳಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಗಾಂಜಾ ಸಾಗಿಸುತ್ತಿದ್ದ ತಂದೆ, ಮಗಳು, ಮೊಮ್ಮಗ ಸೇರಿ ಐವರ ಬಂಧನ
ಸಂಗೀತಾಳನ್ನು ಕೂಡಿಹಾಕಿ ಹಲ್ಲೆ ಮಾಡಿದ ಸುದ್ದಿ ತಿಳಿದ ಪೆರೇಸಂದ್ರ ಠಾಣೆ ಪೊಲೀಸರು ರಕ್ಷಣೆ ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಹಲ್ಲೆ ಮಾಡಿದ ಗಂಗರಾಜು ಸಂಬಂಧಿಗಳಾದ ಕೃಷ್ಣಪ್ಪ, ಮಹೇಶ ಸೇರಿದಂತೆ 5 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:47 pm, Thu, 20 February 25