ಚಿಕ್ಕಬಳ್ಳಾಪುರ: ಖಾಸಗಿ ಬಸ್ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು, ಇಬ್ಬರು ಸಜೀವ ದಹನ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಘನಘೋರ ಘಟನೆಯೊಂದು ನಡೆದಿದೆ. ಖಾಸಗಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಬಸ್ ಗುದ್ದಿದ ರಭಸಕ್ಕೆ ಕಾರು ಹೊತ್ತಿ ಉರಿದಿದೆ. ಪರಿಣಾಮ ಕಾರಿನಲ್ಲಿ ಇಬ್ಬರು ಸಜೀವ ದಹನವಾಗಿದ್ದಾರೆ. ಓರ್ವ ಮಹಿಳೆ ಹಾಗೂ ಓರ್ವ ಪುರುಷ ಸಜೀವದಹನವಾಗಿದ್ದು, ಅದೃಷ್ಟವಶಾತ್ ಕಾರಿನಲ್ಲಿ ಇನ್ನುಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿಕ್ಕಬಳ್ಳಾಪುರ, ಮಾರ್ಚ್ 09): ಖಾಸಗಿ ಬಸ್‌ವೊಂದು ಡಿಕ್ಕಿಯಾದ ಪರಿಣಾಮ ಕಾರು ಹೊತ್ತಿ ಉರಿದಿದ್ದು, ಘಟನೆಯಲ್ಲಿ ಇಬ್ಬರು ಸಜೀವ ದಹನವಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ (Chintamani) ತಾಲೂಕಿನ ಗೋಪಲ್ಲಿ ಗೇಟ್ ಬಳಿ ನಡೆದಿದೆ. ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಓರ್ವ ಪುರುಷ ಸಜೀವದಹನವಾಗಿದ್ದು, ಆಂಧ್ರ ಮೂಲದ ಧನಂಜಯ ರೆಡ್ಡಿ(31), ಕಲಾವತಿ(35) ಮೃತರು ಎಂದು ಗುರುತಿಸಲಾಗಿದೆ. ಇನ್ನು ಕಾರಿನಲ್ಲಿದ್ದ ಇನ್ನುಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭೀಕರ ಅಪಘಾತದಲ್ಲಿ ಕಾರು ಬೆಂಕಿಯಿಂದ ಹೊತ್ತಿ ಉರಿದಿದ್ದರೆ, ಬಸ್ ಪಲ್ಟಿಯಾಗಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಮದನಪಲ್ಲಿ ನಿವಾಸಿಗಳಾದ ಇಬ್ಬರು ಸುಟ್ಟು ಕರಕಲಾಗಿದ್ದರೆ, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಖಾಸಗಿ ಬಸ್ನಲ್ಲಿ ಪ್ರಯಾಣಿಕರು ಬಚಾವಾಗಿದ್ದಾರೆ.
ಇದನ್ನೂ ಓದಿ: ಲಗ್ನ ಪತ್ರಿಕೆ ವಿತರಿಸಲು ಹೋಗುವಾಗ ಕಾರಿಗೆ ಬೆಂಕಿ ತಗುಲಿ ಸುಟ್ಟು ಕರಕಲಾದ ವರ
Published On - 12:24 pm, Sun, 9 March 25