
ಚಿಕ್ಕಬಳ್ಳಾಪುರ, ಏಪ್ರಿಲ್ 02: ಅಲ್ಲೊಂದು ಅಪರೂಪದಲ್ಲಿ ಅಪರೂಪದ ಜಾತ್ರೆ (Jatre) ನಡೆಯುತ್ತೆ. ಆ ಜಾತ್ರೆಯಲ್ಲಿ ಕಹಿ ಬೇವು (Neem), ಬೆಲ್ಲದಂತೆ ಸಿಹಿಯಾಗುತ್ತಂತೆ. ಇದರಿಂದ ಜನ ಬೃಹತ್ ಬೇವಿನ ಮರವೇರಿ ಕಹಿ ಬೇವಿನ ಸೊಪ್ಪು ತಿನ್ನುತ್ತಾರೆ. ಎಲ್ಲಡೆ ದೇವರ ಪ್ರಸಾದವಾಗಿ ಸಿಹಿ ಲಾಡು, ಸ್ವೀಟ್, ಅನ್ನಸಂತರ್ಪಣೆ ಮಾಡಿದರೆ, ಇಲ್ಲಿ ಮಾತ್ರ ಕಹಿ ಬೇವಿನ ಸೊಪ್ಪು ಪ್ರಸಾದವಾಗಿ ನೀಡಲಾಗುತ್ತದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ನೂತನ ಮಂಚೇನಹಳ್ಳಿ ತಾಲೂಕಿನ ಮೀಣಕನಗುರ್ಕಿ ಗ್ರಾಮದಲ್ಲಿ ಮಹೇಶ್ವರಮ್ಮ ಜಾತ್ರೆ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಜಾತ್ರೆ ಪ್ರಯುಕ್ತ ಬ್ರಹ್ಮ ರಥೋತ್ಸವ ನಡೆಯುತ್ತೆ. ಈ ರಥೋತ್ಸವ ಅದೊಂದು ಬೇವಿನ ಮರದ ಬಳಿ ಬರ್ತಿದ್ದಂತೆ, ಜನರು ಇದ್ದಕ್ಕಿದ್ದಂತೆ ಬೃಹತ್ ಬೇವಿನ ಮರವನ್ನು ಏರಿ ಬೇವಿನ ಸೊಪ್ಪು ಕಿತ್ತು ತಿನ್ನುತ್ತಾರೆ. ಕೆಳಗಿದ್ದವರು ನಮಗೂ ಸ್ವಲ್ಪ ಬೇವಿನ ಸೊಪ್ಪಿನ ಪ್ರಸಾದ ಕೊಡಿ ಅಂತ ಮುಗಿಬಿದ್ದು ಬೆಲ್ಲದಂತೆ ಸೊಪ್ಪು ತಿನ್ನುತ್ತಾರೆ.
ಇದನ್ನೂ ಓದಿ: ವೀಕೆಂಡ್ನಲ್ಲೂ ನಂದಿ ಹಿಲ್ಸ್ ಖಾಲಿ! ಊಟ-ತಿಂಡಿ ಸಿಗಲ್ಲ ಎಂಬ ಕಾರಣಕ್ಕೆ ಬಾರದ ಜನ
ಮಹೇಶ್ವರಮ್ಮ ರಥ ಬೇವಿನ ಮರದ ಬಳಿ ಬರ್ತಿದ್ದಂತೆ ಕಹಿ ಬೇವು ಕೆಲಕಾಲ ಸಿಹಿಯಾಗುತ್ತೆ ಎನ್ನುವ ನಂಬಿಕೆ ಇಲ್ಲಿನ ಜನರದ್ದು. ಇದರಿಂದ ಭಕ್ತರು ಪ್ರಸಾದದ ರೂಪದಲ್ಲಿ ಬೇವಿನ ಸೊಪ್ಪುನ್ನು ತಿನ್ನುತ್ತಾರೆ. ಮಹೇಶ್ವರಮ್ಮನ ಜಾತ್ರೆಯಲ್ಲಿ ಪಾಲ್ಗೊಳ್ಳುವ ಜನ ಬೇವನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ. ಇನ್ನು ಜಾತ್ರೆಗೆ ಬಂದ ಜನ ಬೇವಿನ ಸೊಪ್ಪನ್ನು ತಮ್ಮ ಮನೆಗೂ ತೆಗೆದುಕೊಂಡು ಹೋಗಿ ಜನರಿಗೆ ಹಂಚುತ್ತಾರೆ.
ಇದನ್ನೂ ಓದಿ: ತರಕಾರಿಯಲ್ಲಿ ರಾಸಾಯನಿಕ ಪತ್ತೆಗೆ ಕಾರಣ ರಿವೀಲ್: ಪರಿಸರವಾದಿ ಬಿಚ್ಚಿಟ್ರು ಅಸಲಿ ಸತ್ಯ
ಒಟ್ಟಿನಲ್ಲಿ ಕಹಿ ಕಹಿ ಬೇವು ಕೂಡ ಮಹೇಶ್ವರಮ್ಮ ಜಾತ್ರೆಯಲ್ಲಿ ಮಾತ್ರ ಸಿಹಿ ಆಗುತ್ತಂತೆ. ಮಕ್ಕಳಿಂದ ಹಿಡಿದು ವೃದ್ದರವರೆಗೂ ಎಲ್ಲರೂ ಮುಗಿಬಿದ್ದು ಕಹಿ ಬೇವನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ. ಇಂದು ಒಂದು ರೀತಿ ಜನ ಮರುಳೋ ಜಾತ್ರೆ ಮರುಳೋ ಎನ್ನುವಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.