ಬ್ಯಾಂಕ್​ ಕ್ಯಾಶಿಯರ್​ನಿಂದ ಅಸಭ್ಯ ವರ್ತನೆ: ಗ್ರಾಹಕರ ಎದುರೇ ಕ್ಲಾಸ್​​ ತೆಗೆದುಕೊಂಡ ಮಹಿಳಾ ಸಿಬ್ಬಂದಿ

ಚಿಕ್ಕಮಗಳೂರಿನ NR ಪುರದ ಕೆನರಾ ಬ್ಯಾಂಕ್‌ನಲ್ಲಿ ಸಿಬ್ಬಂದಿ ನಡುವೆ ನಡೆದ ಗಲಾಟೆ ವಿಡಿಯೋ ವೈರಲ್ ಆಗಿದೆ. ಮಹಿಳಾ ಸಿಬ್ಬಂದಿ ಕ್ಯಾಶಿಯರ್ ವಿರುದ್ಧ ಅಸಭ್ಯ ವರ್ತನೆಯ ಆರೋಪ ಮಾಡಿದ್ದು, ಅಷ್ಟೇ ಅಲ್ಲದೆ ಆತನ ಕೊರಳಪಟ್ಟಿ ಹಿಡಿದು ಜಗಳವಾಡಿದ್ದಾರೆ. ಗ್ರಾಹಕರ ಸಮ್ಮುಖದಲ್ಲೇ ಘಟನೆ ನಡೆದಿದೆ.

ಬ್ಯಾಂಕ್​ ಕ್ಯಾಶಿಯರ್​ನಿಂದ ಅಸಭ್ಯ ವರ್ತನೆ: ಗ್ರಾಹಕರ ಎದುರೇ ಕ್ಲಾಸ್​​ ತೆಗೆದುಕೊಂಡ ಮಹಿಳಾ ಸಿಬ್ಬಂದಿ
ಬ್ಯಾಂಕ್​​ ಸಿಬ್ಬಂದಿ ನಡುವೆ ಗಲಾಟೆ
Edited By:

Updated on: Apr 18, 2026 | 8:12 PM

ಚಿಕ್ಕಮಗಳೂರು, ಏಪ್ರಿಲ್​ 18: ಬ್ಯಾಂಕಿನ ಒಳಗೆ ಗ್ರಾಹಕರು ಇರುವುದನ್ನೂ ಲೆಕ್ಕಿಸದೆ ಬ್ಯಾಂಕ್ ಸಿಬ್ಬಂದಿಗಳಿಬ್ಬರು ಪರಸ್ಪರ ಕಿತ್ತಾಡಿಕೊಂಡಿರುವ ಅಹಿತಕರ ಘಟನೆ ಜಿಲ್ಲೆಯ ಎನ್.ಆರ್. ಪುರದ ಕೆನರಾ ಬ್ಯಾಂಕ್ (Canara Bank) ಶಾಖೆಯಲ್ಲಿ ನಡೆದಿದೆ. ಮಹಿಳಾ ಸಿಬ್ಬಂದಿಯೊಬ್ಬರು ಕ್ಯಾಶಿಯರ್‌ನ ಕೊರಳಪಟ್ಟಿ ಹಿಡಿದು ತರಾಟೆಗೆ ತೆಗೆದುಕೊಂಡಿರುವ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗಿದ್ದು, ಅಸಭ್ಯ ವರ್ತನೆ ಆರೋಪ ಕೇಳಿಬಂದಿದೆ.

ನಡೆದಿದ್ದೇನು?

ಎನ್.ಆರ್. ಪುರ ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ ದೀಪಾ ಹಾಗೂ ಆಂಧ್ರ ಮೂಲದ ಕ್ಯಾಶಿಯರ್ ಚಾಣಕ್ಯ ಎಂಬುವವರ ನಡುವೆ ಗಲಾಟೆ ನಡೆದಿದೆ. ಬ್ಯಾಂಕಿನ ದೈನಂದಿನ ಕೆಲಸದ ಅವಧಿಯಲ್ಲೇ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿ, ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ಕೈ ಹಿಡಿದು ಎಳೆದಿದ್ದಾರೆ: ಮಹಿಳಾ ಸಿಬ್ಬಂದಿ ಗಂಭೀರ ಆರೋಪ

ಕ್ಯಾಶಿಯರ್ ಚಾಣಕ್ಯ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೀಪಾ ಆರೋಪಿಸಿದ್ದಾರೆ. ಬ್ಯಾಂಕಿಗೆ ಸಂಬಂಧಿಸಿದ ಹಣವನ್ನು ಕಟ್ಟಲು ಹೋದ ಸಂದರ್ಭದಲ್ಲಿ ಕ್ಯಾಶಿಯರ್ ತನ್ನ ಕೈ ಹಿಡಿದು ಎಳೆದಿದ್ದಾರೆ ಎಂದು ಮಹಿಳಾ ಸಿಬ್ಬಂದಿ ಗಂಭೀರ ಆರೋಪ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ದೀಪಾ, ಗ್ರಾಹಕರ ಮುಂದೆಯೇ ಕ್ಯಾಶಿಯರ್‌ನ ಕೊರಳಪಟ್ಟಿ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಈ ವೇಳೆ ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದಾರೆ.

ಇದನ್ನೂ ಓದಿ: ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಎನ್.ಆರ್. ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಘಟನೆ ನಡೆದಿದ್ದರೂ, ಈವರೆಗೂ ಇಬ್ಬರು ಸಿಬ್ಬಂದಿ ಪರಸ್ಪರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಯಾವುದೇ ಅಧಿಕೃತ ದೂರು ನೀಡಿಲ್ಲ. ಇನ್ನು ಬ್ಯಾಂಕಿನ ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಗಲಾಟೆಯನ್ನು ಅಲ್ಲಿಯೇ ಇದ್ದ ಗ್ರಾಹಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ದೃಶ್ಯಗಳು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಬ್ಯಾಂಕಿನಂತಹ ಜವಾಬ್ದಾರಿಯುತ ಸಂಸ್ಥೆಯಲ್ಲಿ ಸಿಬ್ಬಂದಿಗಳ ಇಂತಹ ವರ್ತನೆಯು ಗ್ರಾಹಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:09 pm, Sat, 18 April 26

Follow Us