ಶಾಸಕ ಎಂ.ಪಿ. ಕುಮಾರಸ್ವಾಮಿ ವಿರುದ್ಧ ಕಾರ್ಯಕರ್ತರ ಬಂಡಾಯ; ಜೆಡಿಎಸ್ ಮುಖಂಡೆಗಾಗಿ ಎಲ್ಲವನ್ನೂ ಮೈ ಮೇಲೆ ಎಳೆದುಕೊಂಡ್ರಾ ಶಾಸಕ?
ಮೂಡಿಗೆರೆ ಶಾಸಕ ಕುಮಾರಸ್ವಾಮಿಗೆ ಜೆಡಿಎಸ್ ಮುಖಂಡೆ ಭಾರತಿ ಕಂಟಕವಾಗಿದ್ದಾರಂತೆ. ತನ್ನ ಆಪ್ತೆಯ ಮೇಲಿನ ವ್ಯಾಮೋಹದಿಂದಲೇ ಶಾಸಕರು ತಮ್ಮ ಕಾರ್ಯಕರ್ತರನ್ನು ದೂರ ಮಾಡಿದ್ದು ಈ ವಿಚಾರ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಚಿಕ್ಕಮಗಳೂರು: ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ವಿರುದ್ಧ ಬಿಜೆಪಿ ಕಾರ್ಯಕರ್ತರ ಬಂಡಾಯ ಮುಂದುವರೆದಿದೆ. ನಿನ್ನೆ(ಮಾರ್ಚ್ 22) ನೂರಾರು ಕಾರ್ಯಕರ್ತರು ಸಿ.ಟಿ. ರವಿ ಮನೆಗೆ ಮುತ್ತಿಗೆ ಹಾಕಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ್ದರು. ಸದ್ಯ ಈ ಬಂಡಾಯದ ಕಿಚ್ಚಿನ ಹಿಂದಿನ ನಿಜವಾದ ಸತ್ಯ ಬಯಲಾಗಿದೆ. ಮೂಡಿಗೆರೆ ಶಾಸಕ ಕುಮಾರಸ್ವಾಮಿಗೆ ಜೆಡಿಎಸ್ ಮುಖಂಡೆ ಭಾರತಿ ಕಂಟಕವಾಗಿದ್ದಾರಂತೆ. ತನ್ನ ಆಪ್ತೆಯ ಮೇಲಿನ ವ್ಯಾಮೋಹದಿಂದಲೇ ಶಾಸಕರು ತಮ್ಮ ಕಾರ್ಯಕರ್ತರನ್ನು ದೂರ ಮಾಡಿದ್ದು ಈ ವಿಚಾರ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಒಂಟಿ ಹೋಂ ಸ್ಟೇ, ಕೋಟಿ ಅನುದಾನ, ಕಾರ್ಯಕರ್ತರು ಕೆಂಡ
ಎಂ.ಪಿ. ಕುಮಾರಸ್ವಾಮಿ ವಿರುದ್ಧ ಕಾರ್ಯಕರ್ತರು ಅಸಮಾಧಾನಗೊಳ್ಳಲು ಅಸಲಿ ಕಾರಣ ಬಹಿರಂಗವಾಗಿದೆ. ಮೂಡಿಗೆರೆ ಜೆಡಿಎಸ್ ಮುಖಂಡೆ ಭಾರತಿಗಾಗಿ ಎಂ.ಪಿ. ಕುಮಾರಸ್ವಾಮಿಯವರು ಜನರ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ಖರ್ಚು ಮಾಡಿದ್ದಾರೆ. ಕಾರ್ಯಕರ್ತರ ವಿರೋಧದ ನಡುವೆಯೂ ಸರ್ಕಾರಿ ದುಡ್ಡನ್ನ ತನ್ನ ಆಪ್ತೆಗಾಗಿ ಖರ್ಚು ಮಾಡಿದ್ದಾರೆ. ತನ್ನ ಆಪ್ತೆಯ ಹೋಂ ಸ್ಟೇ ರಸ್ತೆಗೆ ಲಕ್ಷಾಂತರ ರೂಪಾಯಿ ಅನುದಾನ ನೀಡಿದ್ದಾರೆ. ನೆರೆ ಪರಿಹಾರದ ಹಣವನ್ನು ಹೋಂ ಸ್ಟೇ ರಸ್ತೆಗಾಗಿ ಖರ್ಚು ಮಾಡಿದ್ದಾರೆ. ಹೋಂ ಸ್ಟೇಗೆ ಸಿಮೆಂಟ್ ರಸ್ತೆ, ಚರಡಿ, ವಿದ್ಯುತ್ ಪೂರೈಕೆಗಾಗಿ 80 ಲಕ್ಷ ಅನುದಾನ ನೀಡಿದ್ದಾರೆ ಎಂದು ಕಾರ್ಯಕರ್ತರು ಶಾಸಕನ ಮೇಲೆ ಅಸಮಾಧಾನಗೊಂಡಿದ್ದಾರೆ.
ಉರುಬಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಚಿನ್ನಟ್ಟಿ ಗ್ರಾಮದಲ್ಲಿ ಕೇವಲ ಒಂಟಿ ಹೋಂ ಸ್ಟೇ ಮಾತ್ರ ಇದೆ. ಅಲ್ಲಿ ಯಾವುದೇ ಮನೆಗಳಿಲ್ಲ. ಆದ್ರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಆ ಹೋಂ ಸ್ಟೇಗಾಗಿ ಸರ್ಕಾರದ ಹಣವನ್ನು ಬಳಸಿಕೊಂಡಿದ್ದಾರೆ. ಮನೆಗಳೇ ಇಲ್ಲದ ಗ್ರಾಮಕ್ಕೆ ಕೋಟ್ಯಾಂತರ ರೂಪಾಯಿ ಅನುದಾನ ನೀಡಿದ್ದಾರೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದು ತಮ್ಮನ್ನೇ ನಂಬಿದ್ದ ಕಾರ್ಯಕರ್ತರನ್ನೇ ಕಡೆಗಣನೆ ಮಾಡಿದ್ದಾರೆ. ಹೀಗಾಗಿ ನಿಮ್ಮ ಆಪ್ತೆಗಾಗಿ ಯಾಕಿಷ್ಟು ಅನುದಾನ ಎಂದು ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ. ನೆರೆ ಬಂದ ಗ್ರಾಮಗಳನ್ನ ಬಿಟ್ಟು ಹೋಂ ಸ್ಟೇ ರಸ್ತೆಗೆ ಅನುದಾನ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಬಿಜೆಪಿ ಮುಖಂಡನ ಈ ಪ್ರಶ್ನೆಗೆ ಶಾಸಕ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಧ್ಯ ಮೂಡಿಗೆರೆಯಲ್ಲಿ ಅಸಮಾಧಾನದ ಜ್ವಾಲೆ ಎದ್ದಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:26 am, Thu, 23 March 23