ಚಿಕ್ಕಮಗಳೂರು: ಸರ್ಕಾರದಿಂದ ಅನುದಾನ ಬಿಡುಗಡೆಯಾದರೂ ಜಿಲ್ಲೆಯ ಜನರಿಗೆ ಸಿಗದ ಆಹಾರ ಸಾಮಾಗ್ರಿ
ರಾಜ್ಯದ ಗಿರಿಜನರಿಗಾಗಿ ಸರ್ಕಾರ ಉಚಿತವಾಗಿ ಪೌಷ್ಟಿಕ ಆಹಾರ ಪದಾರ್ಥಗಳನ್ನು ನೀಡುತ್ತಿದ್ದು, ಈಗಾಗಲೇ ಎಲ್ಲಾ ಜಿಲ್ಲೆಯ ಜನರಿಗೂ ಈ ಯೋಜನೆ ದೊರೆತ್ತಿದ್ದು, ಆದರೆ ಚಿಕ್ಕಮಗಳೂರಿನ ಜನರಿಗೆ ಮಾತ್ರ ಇನ್ನು ಸಿಕ್ಕಿಲ್ಲವೆಂದು ಅಸಮಾಧಾನ ಹೊರ ಹಾಕಿದ್ದಾರೆ.
ಚಿಕ್ಕಮಗಳೂರು: ಜಿಲ್ಲೆಯ ಬುಡಕಟ್ಟು ಜನಾಂಗದವರಿಗೆ ಮಳೆಗಾಲದಲ್ಲಿ ಅನುಕೂಲವಾಗಲೆಂದು ಸರ್ಕಾರ ಜೂನ್ ತಿಂಗಳಿಂದ ನವೆಂಬರ್ವರೆಗೆ ಗಿರಿಜನರಿಗೆ ಉಚಿತವಾಗಿ ಪೌಷ್ಟಿಕ ಆಹಾರ ಪದಾರ್ಥಗಳನ್ನು ನೀಡುತ್ತದೆ. ಆದರೆ ಚಿಕ್ಕಮಗಳೂರು ಜನತೆಗೆ ಮಾತ್ರ ಈ ಯೋಜನೆ ಇನ್ನು ದೊರೆತಿಲ್ಲ. ಜಿಲ್ಲೆಯಲ್ಲಿ 6 ಸಾವಿರಕ್ಕೂ ಹೆಚ್ಚು ಕುಟುಂಬಗಳು ಈ ಯೋಜನೆ ವ್ಯಾಪ್ತಿಯಲ್ಲಿದ್ದು, ಈ ಯೋಜನೆಗೆಂದು ಬಂದ ಸುಮಾರು ಎಂಟು ಕೋಟಿ ಹಣ ಜಿಲ್ಲಾಧಿಕಾರಿ ಖಾತೆಯಲ್ಲಿ ಹಾಗೇ ಉಳಿದಿದೆ. ಮಳೆಗಾಲ ಮುಗಿದರೂ ಅವರಿಗೆ ಆಹಾರ ಸಾಮಾಗ್ರಿಯೇ ಸಿಕ್ಕಿಲ್ಲ, ಎಂದು ಬುಡಕಟ್ಟು ಜನಾಂಗದವರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಮಲೆನಾಡು ಭಾಗದಲ್ಲಿ ವಾರ್ಷಿಕ ದಾಖಲೆ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ. ಈ ವೇಳೆ ಕುಗ್ರಾಮಗಳಲ್ಲಿರುವ ಬುಡಕಟ್ಟು ಜನಾಂಗದವರಿಗೆ ಕೂಲಿ ಸಿಗುವುದಿಲ್ಲ. ಅವರು ಗ್ರಾಮದಿಂದ ಹೊರಬರುವುದು ಕಷ್ಟ. ಹಾಗಾಗಿ ಸರ್ಕಾರ ಆ ಬುಡಕಟ್ಟು ಜನಾಂಗದವರಿಗೆ ಮಳೆಗಾಲ ಮುಗಿಯುವರೆಗೂ ಆಹಾರ ಸಾಮಾಗ್ರಿಗಳನ್ನು ಉಚಿತವಾಗಿ ನೀಡುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ಬಂದು ಸರ್ಕಾರದಿಂದ ಬಂದ ಹಣವೂ ಖಾಲಿಯಾಗಿ ಫಲಾನುಭವಿಗಳಿಗೆ ಆಹಾರ ಸಾಮಾಗ್ರಿಯೂ ಸಿಕ್ಕಿದೆ. ಆದರೆ ಚಿಕ್ಕಮಗಳೂರು ಇಲಾಖೆಯ ಅಧಿಕಾರಿಗಳು ಕೂಡ ಪರ್ಸಂಟೇಜ್ ರೀತಿ ವ್ಯವಹಾರ ಮಾಡುತ್ತಿದ್ದಾರೆ ಅನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಡಿಸೆಂಬರ್.20ರೊಳಗೆ ನಮ್ಮ ಹಕ್ಕನ್ನು ನಮಗೆ ನೀಡದಿದ್ದರೆ 6 ಸಾವಿರ ಕುಟುಂಬಗಳು ಜಿಲ್ಲಾಧಿಕಾರಿ ಕಚೇರಿ ಬಾಗಿಲಲ್ಲಿ ಕುಳಿತುಕೊಳ್ಳುವುದಾಗಿಎಚ್ಚರಿಕೆ ನೀಡಿದ್ದಾರೆ.
ಗಿರಿಜನರಿಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ನೀಡುವ ಯೋಜನೆಯಡಿಯಲ್ಲಿ ಜಿಲ್ಲಾಡಳಿತ ಇದುವರೆಗೂ ಪೌಷ್ಟಿಕ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿಲ್ಲ. ಈ ಯೋಜನೆಗೆ ಸರ್ಕಾರ 8 ಕೋಟಿ. ರೂ. ಅನುದಾನ ಬಿಡುಗಡೆ ಮಾಡಿದ್ದು, ಈ ಹಣ ಜಿಲ್ಲಾಧಿಕಾರಿ ಖಾತೆಯಲ್ಲಿದ್ದರೂ ಸಂಬಂಧಿಸಿದ ಇಲಾಖಾಧಿಕಾರಿಗಳು ಟೆಂಡರ್ ಆಗಿಲ್ಲ ಎಂಬ ಕುಂಟು ನೆಪ ಹೇಳುತ್ತಾ ಸೌಲಭ್ಯವನ್ನು ಗಿರಿಜನರಿಗೆ ನೀಡುತ್ತಿಲ್ಲ. ಅಧಿಕಾರಿಗಳು ಕಮಿಷನ್ ದಂಧೆಯಲ್ಲಿ ತೊಡಗಿರುವ ಕಾರಣದಿಂದ ಯೋಜನೆ ಜಾರಿ ವಿಳಂಬವಾಗುತ್ತಿದೆ. ಮಕ್ಕಳು ಕೂಡ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಸರ್ಕಾರ ಕೊಡುವ ಮೊಟ್ಟೆ, ಬೇಳೆ-ಕಾಳುಗಳಿಂದ ಮಕ್ಕಳ ಆರೋಗ್ಯ ಚೆನ್ನಾಗಿರುತ್ತಿತ್ತು. ಆದರೆ ಸರ್ಕಾರ ಕೊಟ್ಟರೂ ಅಧಿಕಾರಿಗಳು ಕೊಟ್ಟಿಲ್ಲ. ಎಲ್ಲಾ ಜಿಲ್ಲೆಯಲ್ಲೂ ಯೋಜನೆ ಜಾರಿಗೆ ಬಂದಿದೆ. ನಮ್ಮ ಜಿಲ್ಲೆಯಲ್ಲಿ ಏಕೆ ಬಂದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸಂತ್ರಸ್ತರು ಕಿಡಿಕಾರಿದ್ದಾರೆ.
ಮಲೆನಾಡ ಕಾಡು-ಮೇಡು, ಕುಗ್ರಾಮಗಳಲ್ಲಿ ಬುಡಕಟ್ಟು ಜನಾಂಗದ ಬದುಕು ನಾವು ಅಂದುಕೊಂಡಂತಿಲ್ಲ. ಅಲ್ಲಿ ಸುರಿಯುವ ಮಳೆಗೆ ಜನರು ತಿಂಗಳುಗಟ್ಟಲೇ ಮನೆಯಿಂದ ಆಚೆ ಬರಲಾಗುವುದಿಲ್ಲ. ಮಕ್ಕಳು ಶಾಲೆಗಳಿಗೆ ಹೋಗಲ್ಲ. ಕೆಲಸವೂ ಸಿಗಲ್ಲ. ಕೆಲ ಜನರು ಆಹಾರ ಸಾಮಾಗ್ರಿಗಳನ್ನು ಮೊದಲೇ ಶೇಖರಿಸಿಕೊಳ್ಳುತ್ತಾರೆ. ಸರ್ಕಾರದ ಇಂತಹ ಯೋಜನೆಗಳು ಬಡವರಿಗೆ ಅನುಕೂಲವಾಗುತ್ತದೆ. ಆದರೆ ಸರ್ಕಾರ ಹಣ ನೀಡಿದರು ಅಧಿಕಾರಿಗಳು ಸಂತ್ರಸ್ತರಿಗೆ ನೀಡದೇ ಇರುವುದು ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ.
ವರದಿ: ಪ್ರಶಾಂತ್ ಟಿವಿ9 ಚಿಕ್ಕಮಗಳೂರು
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Sat, 3 December 22