ಕಿಲ್ಲರ್ ಕಾಡಾನೆ ಸೆರೆಯಾದರೂ ಮುಂದುವರಿದ ಆತಂಕ; ಚಿಕ್ಕಮಗಳೂರಿನ 12 ಗ್ರಾಮಗಳಿಗೆ ಗ್ರಾಮಗಳಲ್ಲಿ ನಿಷೇಧಾಜ್ಞೆ !

ಚಿಕ್ಕಮಗಳೂರು ತಾಲೂಕಿನಲ್ಲಿ ಕಾಡಾನೆಗಳ ಆತಂಕ ಹೆಚ್ಚಾಗಿದ್ದು, ಇತ್ತೀಚೆಗೆ ಒಂದೇ ವಾರದಲ್ಲಿ, ಒಂದೇ ಸ್ಥಳದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ 12 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಂಜೆ 4ರಿಂದ ಬೆಳಗ್ಗೆ 6ರವರೆಗೆ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧವಿದೆ. ಅರಣ್ಯ ಇಲಾಖೆಯು ಆನೆಗಳ ಚಲನವಲನಗಳ ಮೇಲೆ ನಿಗಾ ವಹಿಸಿದ್ದು, ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ.

ಕಿಲ್ಲರ್ ಕಾಡಾನೆ ಸೆರೆಯಾದರೂ ಮುಂದುವರಿದ ಆತಂಕ; ಚಿಕ್ಕಮಗಳೂರಿನ 12 ಗ್ರಾಮಗಳಿಗೆ ಗ್ರಾಮಗಳಲ್ಲಿ ನಿಷೇಧಾಜ್ಞೆ !
ಚಿಕ್ಕಮಗಳೂರಿನ 12 ಗ್ರಾಮಗಳಿಗೆ ಗ್ರಾಮಗಳಲ್ಲಿ ನಿಷೇಧಾಜ್ಞೆ !
Edited By:

Updated on: Feb 25, 2026 | 10:54 AM

ಚಿಕ್ಕಮಗಳೂರು, ಫೆಬ್ರವರಿ 25: ತಾಲೂಕಿನಲ್ಲಿ ಕಾಡಾನೆಗಳ ಆತಂಕ ಹೆಚ್ಚಿದ ಹಿನ್ನೆಲೆಯಲ್ಲಿ ಆಡಳಿತವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ತಾಲೂಕಿನ (Chikkamagaluru) ಒಟ್ಟು 12 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಸಂಜೆ 4 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕರ ಸಂಚಾರವನ್ನು ನಿಯಂತ್ರಿಸಲಾಗಿದೆ. ಈ ಸಂಬಂಧ ತಹಶೀಲ್ದಾರ್ ಆದೇಶ ಹೊರಡಿಸಿದ್ದು, ನಾಳೆವರೆಗೆ (ಫೆಬ್ರವರಿ 26)ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ.

ಕಾಡಾನೆ ದಾಳಿಗೆ ಒಂದೇ ವಾರದಲ್ಲಿ ಇಬ್ಬರು ಬಲಿ

ಕೆಲ ದಿನಗಳ ಹಿಂದಷ್ಟೇ ತಾಲ್ಲೂಕಿನ ಹುಣಸೆಹಳ್ಳಿ ಗ್ರಾಮದಲ್ಲಿ ನಾಗೇಶ್ ಗೌಡ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 50 ವರ್ಷದ ಕಾರ್ಮಿಕ ಯಲ್ಲಪ್ಪ ಆನೆ ದಾಳಿಗೆ ಬಲಿಯಾಗಿದ್ದರು. ಈ ಘಟನೆ ನಡೆದು ಒಂದು ವಾರದಲ್ಲೇ ಅದೇ ಕಾಫಿತೋಟದಲ್ಲಿ ಕಾಡಾನೆ ದಾಳಿಗೆ ಹೊಸಪೇಟೆ ಮೂಲದ ಬೋರಮ್ಮ (34)ಎಂಬ ಕಾರ್ಮಿಕ ಮಹಿಳೆಯೂ ಅಸುನೀಗಿದ್ದರು. ಈ ಘಟನೆಗಳ ಬಳಿಕ ವೇಗದಿಂದ ಸಾಗಿದ ಆನೆ ಸೆರೆ ಕಾರ್ಯಾಚರಣೆಯು ಯಶಸ್ವಿಗೊಂಡು ಕಿಲ್ಲರ್ ಸಲಗ ಸೆರೆಯಾಗಿತ್ತು. ಇದರ ಬೆನ್ನಲ್ಲೇ ಅರಣ್ಯ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದ್ದು, ಮುಂದೆ ಈ ರೀತಿಯ ಅವಘಡಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಹಲವೆಡೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ

ಇದನ್ನೂ ಓದಿ ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ! ಕೊನೆಗೂ ಸೆರೆ ಸಿಕ್ತು ಕಿಲ್ಲರ್ ಒಂಟಿ ಸಲಗ

ಎಲ್ಲೆಲ್ಲಿ ನಿಷೇಧಾಜ್ಞೆ ಜಾರಿ?

ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ, ವಸ್ತಾರೆ, ಮತ್ತಾವರ, ದಂಬದಹಳ್ಳಿ, ನಲ್ಲೂರು, ಕಾರೇಮನೆ, ಉಕ್ಕುಂದ, ಗಡಬನಹಳ್ಳಿ, ಜೋಳದಾಳು, ಚಿಕ್ಕೊಳಲೆ, ತಳಿಹಳ್ಳ, ಶಿರಗುಂದದಲ್ಲಿ ಜನರ ಸುರಕ್ಷತೆಗಾಗಿ ನಿಷೇಧಾಜ್ಞೆ ಹೊರಡಿಸಲಾಗಿದೆ. ವಿಶೇಷವಾಗಿ ಚಿಕ್ಕೊಳಲೆ ಅರಣ್ಯ ಪ್ರದೇಶದಲ್ಲಿ ಎರಡು ಕಾಡಾನೆಗಳು ಬೀಡುಬಿಟ್ಟಿರುವುದು ಪತ್ತೆಯಾಗಿದ್ದು, ಅವುಗಳ ಚಲನವಲನಗಳ ಮೇಲೆ ಅರಣ್ಯ ಇಲಾಖೆ ಹದ್ದಿನಕಣ್ಣು ಇಟ್ಟಿದೆ.

ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಶ್ವಾನ ದಳದ ಸಹಾಯದಿಂದ ಕಾಡಾನೆಗಳ ಸಂಚಾರದ ದಿಕ್ಕು ಹಾಗೂ ಚಲನೆಗಳನ್ನು ಗಮನಿಸಲಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಅನಾವಶ್ಯಕ ಸಂಚಾರ ಮಾಡದಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳುವವರು ತಾತ್ಕಾಲಿಕವಾಗಿ ತಡೆಯಬೇಕೆಂದು ಸೂಚಿಸಲಾಗಿದೆ. ರಾತ್ರಿ ವೇಳೆ ಮನೆಗಳ ಹೊರಗೆ ಓಡಾಡದಂತೆ ಹಾಗೂ ಗುಂಪುಗಳಲ್ಲಿ ಮಾತ್ರ ಸಂಚರಿಸುವಂತೆ ಎಚ್ಚರಿಕೆ ನೀಡಲಾಗಿದೆ. ಯಾವುದೇ ತುರ್ತು ಪರಿಸ್ಥಿತಿ ಉಂಟಾದಲ್ಲಿ ತಕ್ಷಣ ಅರಣ್ಯ ಇಲಾಖೆ ಅಥವಾ ಪೊಲೀಸ್ ಇಲಾಖೆಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

ಕಾಡುಕೋಣ ದಾಳಿ

ಈ  ನಡುವೆ ಕೊಪ್ಪ ತಾಲೂಕಿನ ಮುಂಡೋಳು ಗ್ರಾಮದಲ್ಲಿ 65 ವರ್ಷದ ಶಿವಪ್ಪ ಎಂಬ ರೈತ ತೋಟಕ್ಕೆ ನೀರು ಹಾಯಿಸಲು ತೆರಳಿದ್ದ ವೇಳೆ ಏಕಾಏಕಿ ಕಾಡುಕೋಣ ದಾಳಿ ನಡೆಸಿದೆ. ಅಪ್ರತೀಕ್ಷಿತ ದಾಳಿಯಿಂದ ಶಿವಪ್ಪ ಅವರ ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಸ್ಥಳೀಯರು ಅವರನ್ನು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:23 am, Wed, 25 February 26

Follow Us