ಬಾರದಹಳ್ಳಿ, ಮಾಕೋನಹಳ್ಳಿ ಬಳಿ ಬೀಡುಬಿಟ್ಟ 38 ಕಾಡಾನೆಗಳು: 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ನಿಷೇಧಾಜ್ಞೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ 38 ಕಾಡಾನೆಗಳು ಬೀಡುಬಿಟ್ಟಿದ್ದು, ಸಾರ್ವಜನಿಕ ಸುರಕ್ಷತೆಗಾಗಿ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆನೆಗಳನ್ನು ಓಡಿಸುವ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಡ್ರೋನ್‌ಗಳ ಮೂಲಕ ನಿರಂತರ ಕಣ್ಗಾವಲು ಇರಿಸಲಾಗಿದೆ. ಗ್ರಾಮಸ್ಥರು ಗುಂಪುಗೂಡುವುದನ್ನು ನಿರ್ಬಂಧಿಸಲಾಗಿದೆ.

ಬಾರದಹಳ್ಳಿ, ಮಾಕೋನಹಳ್ಳಿ ಬಳಿ ಬೀಡುಬಿಟ್ಟ 38 ಕಾಡಾನೆಗಳು: 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ನಿಷೇಧಾಜ್ಞೆ
ಮೂಡಿಗೆರೆಯಲ್ಲಿ 38 ಆನೆಗಳು
Edited By:

Updated on: Nov 23, 2026 | 2:54 PM

ಚಿಕ್ಕಮಗಳೂರು, ನ. 23: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಬರೋಬ್ಬರಿ 38 ಕಾಡಾನೆಗಳು ಬೀಡುಬಿಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ತಾಲೂಕು ಆಡಳಿತ ಕಟ್ಟೆಚ್ಚರ ವಹಿಸಿದೆ. ಕಾಡಾನೆಗಳು ಸಂಚರಿಸುತ್ತಿರುವ 50ಕ್ಕೂ ಅಧಿಕ ಗ್ರಾಮಗಳಲ್ಲಿ ಬಿಎನ್‌ಎಸ್ (BNS) ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಮೂಡಿಗೆರೆ ತಹಶೀಲ್ದಾರ್ ಅಶ್ವಿನಿ ಅವರು ಸೋಮವಾರ ಅಧಿಕೃತ ಆದೇಶ ಹೊರಡಿಸಿದ್ದಾರೆ. ಇಂದಿನಿಂದ ಮುಂದಿನ ಆದೇಶದವರೆಗೂ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ಯಾವೆಲ್ಲಾ ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ?

ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿ ಮತ್ತು ಕಸಬಾ ಹೋಬಳಿ ವ್ಯಾಪ್ತಿಯ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಗೋಣಿಬೀಡು, ಕಸಬಾ, ಜಿ.ಹೊಸಳ್ಳಿ, ಪೋಡಿಯಾ ಕಾಲೋನಿ, ಹೊಸಪುರ. ಗೋಣಿಬೀಡು ಮಕ್ಕಿ, ವಲಕೇರಟ್ಟಿ, ಮಾಲಹಳ್ಳಿ ಕಾರ್ಬೈಲು, ಬೊಮ್ಮನಹಳ್ಳಿ ಮುಡಸಸಿ, ಸಿದ್ದಾಂತವನ, ತತ್ಕೋಳ, ಕುನ್ನಳ್ಳಿ, ನಂದಿಪುರ ದುಂಡುಗ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರು ಗುಂಪುಗೂಡುವುದು ಮತ್ತು ಅನಗತ್ಯವಾಗಿ ಓಡಾಡುವುದನ್ನು ನಿರ್ಬಂಧಿಸಲಾಗಿದೆ.

Loading...

ಕಾಡಾನೆ ಓಡಿಸುವ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ : ಡಿಎಫ್‌ಒ ಬೋರಯ್ಯ

ಹಾಸನ ಜಿಲ್ಲೆಯಿಂದ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಭಾನುವಾರ ಮಧ್ಯರಾತ್ರಿಯೇ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ ಎಂದು ಚಿಕ್ಕಮಗಳೂರು ವಿಭಾಗದ ಡಿಎಫ್‌ಒ (DFO) ಬೋರಯ್ಯ ತಿಳಿಸಿದ್ದಾರೆ. ಮುಂದಿನ ಸ್ಪಷ್ಟ ಸೂಚನೆ ಬರುವವರೆಗೂ ಕಾಡಾನೆಗಳನ್ನು ಓಡಿಸುವ ಯಾವುದೇ ಪ್ರಯತ್ನ ನಡೆಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸದ್ಯ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 38 ಕಾಡಾನೆಗಳು ಇರುವುದನ್ನು ಅರಣ್ಯ ಇಲಾಖೆ ಖಚಿತಪಡಿಸಿದೆ. ಈ ಆನೆಗಳು ಎರಡು ಗುಂಪುಗಳಾಗಿ ವಿಭಜನೆಯಾಗಿದ್ದು, ಒಂದು ಗುಂಪು ಬಾರದಹಳ್ಳಿ ಪ್ರದೇಶದಲ್ಲಿದ್ದರೆ, ಮತ್ತೊಂದು ಗುಂಪು ಮಾಕೋನಹಳ್ಳಿ ಬಳಿ ಇದೆ. ಇವೆರಡೂ ಗುಂಪುಗಳ ನಡುವೆ ಸುಮಾರು 2-3 ಕಿಲೋಮೀಟರ್ ಅಂತರವಿದೆ. ಕಳೆದ 3-4 ದಿನಗಳಿಂದ ನಿರಂತರವಾಗಿ ಚಲಿಸುತ್ತಿದ್ದ ಆನೆಗಳು ಸದ್ಯ ವಿಶ್ರಾಂತಿ ಪಡೆಯುತ್ತಿವೆ ಎಂದು ಡಿಎಫ್‌ಒ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಆನೆ ಓಡಿಸುವ ಕಾರ್ಯಾಚರಣೆ ಸ್ಥಗಿತ: ಮೂಡಿಗೆರೆ ಭಾಗದಲ್ಲಿ 38 ಕಾಡಾನೆಗಳಿವೆ, ಜನರಿಗೆ ಅರಣ್ಯ ಇಲಾಖೆ ಎಚ್ಚರಿಕೆ ಸಂದೇಶ

60-70 ಅರಣ್ಯ ಸಿಬ್ಬಂದಿ ನಿಯೋಜನೆ ಮತ್ತು ಡ್ರೋನ್ ಕಣ್ಗಾವಲು:

ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ಸ್ಥಗಿತಗೊಂಡಿದ್ದರೂ, ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರಿಸಿದೆ. ಆನೆಗಳ ಚಲನವಲನದ ಮೇಲೆ ನಿರಂತರ ನಿಗಾ ಇರಿಸಲು ಅವುಗಳಿರುವ ಪ್ರದೇಶಗಳ ಸುತ್ತಮುತ್ತ 60ರಿಂದ 70 ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, ಡ್ರೋನ್‌ಗಳ ಮೂಲಕ ವೈಮಾನಿಕ ಸಮೀಕ್ಷೆ ನಡೆಸಲಾಗುತ್ತಿದ್ದು, ಸದ್ಯ ಆನೆಗಳು ಅಶಾಂತ ಸ್ಥಿತಿಯಲ್ಲಿಲ್ಲ ಎಂದು ಡಿಎಫ್‌ಒ ಬೋರಯ್ಯ ತಿಳಿಸಿದ್ದಾರೆ.

ಕಾಫಿ ಕೊಯ್ಲು ಮಾಡಲು ಹೋಗಲು ಆತಂಕ

ಮಲೆನಾಡು ಭಾಗದಲ್ಲಿ ವರ್ಷದ ಪ್ರಮುಖ ಕೃಷಿ ಚಟುವಟಿಕೆಯಾದ ಕಾಫಿ ಕೊಯ್ಲುಆರಂಭವಾಗಿರುವ ಬೆನ್ನಲ್ಲೇ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿರುವುದು ಬೆಳೆಗಾರರು ಮತ್ತು ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ. ಒಂದೆಡೆ ಕಾಫಿ ಹಣ್ಣು ಕಟಾವು ಮಾಡುವ ನಿರ್ಣಾಯಕ ಸಮಯ ಎದುರಾಗಿದ್ದರೆ, ಮತ್ತೊಂದೆಡೆ ತೋಟಗಳಲ್ಲಿ ಆನೆಗಳ ಸಂಚಾರ ಹೆಚ್ಚಾಗಿರುವುದರಿಂದ ಬೆಳೆ ನಷ್ಟದ ಜೊತೆಗೆ ಕೊಯ್ಲು ಕಾರ್ಯಕ್ಕೂ ಭಾರಿ ಅಡ್ಡಿಯಾಗುವ ಚಿಂತೆ ಎದುರಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಎನ್.ಆರ್. ಪುರ ಹಾಗೂ ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ ಭಾಗದ ಕಾಫಿ ತೋಟಗಳಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿದೆ. ತೋಟದೊಳಗೆ ಯಾವ ಕ್ಷಣದಲ್ಲಾದರೂ ಕಾಡಾನೆಗಳು ಎದುರಾಗಬಹುದು ಎಂಬ ಜೀವಭಯದಿಂದ ಕಾರ್ಮಿಕರು ಕಾಫಿ ಹಣ್ಣು ಕೊಯ್ಯಲು ತೋಟಗಳಿಗೆ ಇಳಿಯಲು ಹಿಂದೇಟು ಹಾಕುತ್ತಿದ್ದಾರೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಕಾಫಿ ಫಸಲು ಇದೀಗ ಕಟಾವಿಗೆ ಬಂದಿದೆ. ಸರಿಯಾದ ಸಮಯಕ್ಕೆ ಕಾಫಿ ಹಣ್ಣು ಕೊಯ್ಯದಿದ್ದರೆ ಹಣ್ಣು ಉದುರಿ ನಷ್ಟವಾಗುವ ಆತಂಕವಿದೆ. ಇದರ ಜೊತೆಗೆ, ತೋಟಗಳಲ್ಲಿ ಸಂಚರಿಸುವ ಕಾಡಾನೆಗಳು ಕಾಫಿ ಗಿಡಗಳು, ಮೆಣಸಿನ ಬಳ್ಳಿಗಳು ಹಾಗೂ ನೀರಾವರಿ ಪೈಪ್‌ಗಳನ್ನು ತುಳಿದು ನಾಶಪಡಿಸುತ್ತಿರುವುದು ಬೆಳೆಗಾರರನ್ನು ಕಂಗಾಲಾಗಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us