ಚಿಕ್ಕಮಗಳೂರು-ತಿರುಪತಿ ರೈಲು ಸೇವೆ: ಹಿಂದೂ-ಮುಸ್ಲಿಮರ ನಡುವೆ ಶುರುವಾದ ವಿವಾದವೇನು?
ಚಿಕ್ಕಮಗಳೂರಿನಿಂದ ತಿರುಪತಿಗೆ ರೈಲು ಸಂಚಾರ ಆರಂಭಕ್ಕೂ ಮುನ್ನವೇ, ರೈಲಿಗೆ ಹೆಸರಿಡುವ ವಿಚಾರವಾಗಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ತೀವ್ರ ವಿವಾದ ಉಂಟಾಗಿದೆ. ಹಿಂದೂಗಳು ದತ್ತಪೀಠ ಎಕ್ಸ್‌ಪ್ರೆಸ್ ಎಂದು ಹೆಸರಿಡುವಂತೆ ಆಗ್ರಹಿಸುತ್ತಿದ್ದರೆ, ಮುಸ್ಲಿಂ ಸಮುದಾಯ ಬಾಬಾ ಬುಡನ್ ಎಕ್ಸ್‌ಪ್ರೆಸ್ ಎಂದು ಹೆಸರಿಡಬೇಕೆಂದು ಒತ್ತಾಯಿಸಿದೆ.

ಚಿಕ್ಕಮಗಳೂರು, ಜುಲೈ 13: ಕಾಫಿನಾಡಿನ ಜನರ ಬಹುದಿನದ ಕನಸಿನಂತೆ ಚಿಕ್ಕಮಗಳೂರು-ತಿರುಪತಿ ರೈಲಿಗೆ (Chikmagalur-Tirupati Train) ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (V. Somanna) ಶುಕ್ರವಾರ ಸಾಂಕೇತಿಕವಾಗಿ ಚಾಲನೆ ನೀಡಿದ್ದಾರೆ. ಆದರೆ ಇತ್ತ ಹಿಂದೂ, ಮುಸ್ಲಿಮರ ನಡುವೆ ರೈಲಿಗೆ ಹೆಸರಿಡುವ ವಿಚಾರವಾಗಿ ವಿವಾದ ಸೃಷ್ಟಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅಂಗಳಕ್ಕೂ ತಲುಪಿದೆ. ಆ ಮೂಲಕ ದತ್ತಪೀಠ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.
ದಕ್ಷಿಣ ಭಾರತದ ಅತೀ ದೊಡ್ಡ ವಿವಾದವಿರುವ ಸ್ಥಳ ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಸಾಲಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ. ಹಿಂದೂ ಮತ್ತು ಮುಸ್ಲಿಮರ ನಡುವೆ ನಾಲ್ಕು ದಶಕದಿಂದ ವಿವಾದವಿದ್ದು, ಹಿಂದೂಗಳು ಸಂಪೂರ್ಣ ದತ್ತಪೀಠಕ್ಕಾಗಿ ಹೋರಾಟ ನಡೆಸಿದರೆ, ಮುಸ್ಲಿಮರು ಇದು ನಮ್ಮ ಬಾಬಾ ಬುಡನ್ ಸ್ವಾಮಿ ದರ್ಗಾ ಎಂಬ ವಾದ ಅವರದ್ದಾಗಿದೆ. ಸದ್ಯ ದತ್ತಪೀಠ ವಿವಾದ ಸುಪ್ರೀಂ ಕೋರ್ಟ್ನಲ್ಲಿದೆ.
ದತ್ತಪೀಠ ಅಥವಾ ದತ್ತಾತ್ರೇಯ ಎಂದು ಹೆಸರಿಡುವಂತೆ ಮನವಿ
ಚಿಕ್ಕಮಗಳೂರು ಟು ತಿರುಪತಿ ರೈಲಿಗೆ ಹೆಸರಿಡುವ ವಿಚಾರವಾಗಿ ದತ್ತಪೀಠ ಹೆಸರಿನ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಶುಕ್ರವಾರ ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ನೇತೃತ್ವದಲ್ಲಿ ಚಿಕ್ಕಮಗಳೂರು ನಗರದ ರೈಲ್ವೆ ನಿಲ್ದಾಣದಲ್ಲಿ ಸಾಂಕೇತಿಕವಾಗಿ ತಿರುಪತಿ-ಚಿಕ್ಕಮಗಳೂರು ರೈಲಿಗೆ ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮದ ವೇದಿಕೆ ಮೇಲೆ ಈ ರೆಲ್ವೆಗೆ ‘ದತ್ತಪೀಠ ಅಥವಾ ದತ್ತಾತ್ರೇಯ’ ಹೆಸರಿಡುವಂತೆ ಉಪ ಸಭಾಪತಿ ಪ್ರಾಣೇಶ್, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಇನ್ನೂ ದತ್ತಪೀಠ ಎಕ್ಸ್‌ಪ್ರೆಸ್ ಎಂದು ಹೆಸರಿಡುವಂತೆ ಹಿಂದೂ ಸಂಘಟನೆಗಳು ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ದತ್ತಪೀಠ ಎಕ್ಸ್‌ಪ್ರೆಸ್ ಅಭಿಯಾನ ಆರಂಭಿಸಿದ್ದಾರೆ. ದತ್ತಪೀಠ ಅಥವಾ ದತ್ತಾತ್ರೇಯ ಹೆಸರಿಗೆ ಸೋಮಣ್ಣ ಸಮ್ಮತಿ ನೀಡಿದ್ದು, ಎರಡರಲ್ಲಿ ಒಂದು ಹೆಸರು ಸೂಚಿಸುವಂತೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿಗೆ ಸೂಚಿಸಿದ್ದಾರೆ.
ಬಾಬಾ ಬುಡನ್ ಎಕ್ಸ್‌ಪ್ರೆಸ್ ಹೆಸರಿಡುವಂತೆ ಪಟ್ಟು
ಚಿಕ್ಕಮಗಳೂರು ಟು ತಿರುಪತಿಗೆ ಆರಂಭವಾಗುವ ರೈಲಿಗೆ ದತ್ತಪೀಠ ಎಕ್ಸ್‌ಪ್ರೆಸ್ ಅಥವಾ ದತ್ತಾತ್ರೇಯ ಎಕ್ಸ್‌ಪ್ರೆಸ್ ಹೆಸರು ನಿಗದಿ ಆಗುವುದು ಖಚಿತವಾಗುತ್ತಿದ್ದಂತೆ, ಇತ್ತ ಮುಸ್ಲಿಂ ಸಂಘಟನೆಗಳು, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಶಾಖಾದ್ರಿ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ರೈಲಿಗೆ ‘ಬಾಬಾ ಬುಡನ್ ಎಕ್ಸ್‌ಪ್ರೆಸ್’ ಹೆಸರಿಡುವಂತೆ ಪಟ್ಟು ಹಿಡಿದಿದ್ದಾರೆ.
ಚಿಕ್ಕಮಗಳೂರಿಗೆ ಕಾಫಿಯನ್ನ ತಂದ ಸೂಫಿ ಸಂತ ಬಾಬಾ ಬುಡನ್ ಅವರ ಹೆಸರು ರೈಲಿಗೆ ಇಡುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ವಿ ಸೋಮಣ್ಣ ಅವರಿಗೆ ಪತ್ರ ಬರೆದು ಸೊಶೀಯಲ್ ಮೀಡಿಯಾದಲ್ಲಿ ಟ್ಯಾಗ್ ಮಾಡಿದ್ದಾರೆ. ಇನ್ನೂ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಕೂಡ ಸಲ್ಲಿಸಲು ಮುಸ್ಲಿಂ ಸಂಘಟನೆಗಳ ಒಕ್ಕೂಟ ಸಿದ್ದತೆ ನಡೆಸಿದೆ.
ಇದನ್ನೂ ಓದಿ: ತಿರುಪತಿಗೆ ತೆರಳುವ ಭಕ್ತರಿಗೆ ಗುಡ್ ನ್ಯೂಸ್: ಕರ್ನಾಟಕದಿಂದ ನೂತನ ರೈಲು, ಇಲ್ಲಿದೆ ಮಾಹಿತಿ
ರೈಲು ಚಿಕ್ಕಮಗಳೂರಿನಿಂದ ತಿರುಪತಿಗೆ ಓಡಾಟ ನಡೆಸುವ ಮುನ್ನವೇ ರೈಲಿಗೆ ಹೆಸರಿಡುವ ವಿಚಾರವಾಗಿ ಹಿಂದೂ, ಮುಸ್ಲಿಮರ ನಡುವೆ ವಿವಾದ ಸೃಷ್ಟಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅಂಗಳಕ್ಕೂ ತಲುಪಿದೆ. ರೈಲು ಹೆಸರಿಡುವ ವಿಚಾರವಾಗಿ ಸೃಷ್ಟಿಯಾಗಿರುವ ವಿವಾದ ಯಾವ ಸ್ವರೂಪ ಪಡೆಯುತ್ತದೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:23 pm, Sun, 13 July 25








