ಕಾಂಗ್ರೆಸ್ ಮುಖಂಡನ ಹತ್ಯೆ ಕೇಸ್: ಮಧುರೈನಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸೇರಿ 6 ಜನರ ಬಂಧನ
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದ್ದ ಕಾಂಗ್ರೆಸ್ ಮುಖಂಡ ಗಣೇಶ್ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇದೀಗ ಪ್ರಮುಖ ಆರೋಪಿ ಸೇರಿ 6 ಆರೋಪಿಗಳನ್ನು ಬಂಧಿಸಿದ್ದಾರೆ. ಆ ಮೂಲಕ ಕೇಸ್ಗೆ ಸಂಬಂಧಿಸಿದಂತೆ 12 ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ.

ಚಿಕ್ಕಮಗಳೂರು, ಡಿಸೆಂಬರ್ 11: ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿರುವ ಕಾಂಗ್ರೆಸ್ ಮುಖಂಡ (Congress Worker) ಗಣೇಶಗೌಡ ಹತ್ಯೆ ಪ್ರಕರಣದ (Muder case) ಆರೋಪಿಗಳು ಲಾಕ್ ಆಗಿದ್ದಾರೆ. ಕೊಲೆ ಬಳಿಕ ತಮಿಳುನಾಡಿನ ಮಧುರೈನಲ್ಲಿ ತಲೆಮರೆಸಿಕೊಂಡಿದ್ದ 6 ಆರೋಪಿಗಳನ್ನು ಬಂಧಿಸಿದ್ದಾರೆ. ಇದುವರೆಗೆ ಗಣೇಶ್ ಹತ್ಯೆಯಲ್ಲಿ 12 ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಖಾಕಿ ಯಶಸ್ವಿಯಾಗಿದೆ. ಪೊಲೀಸರ ಈ ರಣಬೇಟೆ ರೋಚಕವಾಗಿತ್ತು.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ, ಗ್ರಾಮ ಪಂಚಾಯಿತಿ ಸದಸ್ಯ, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕನಾಗಿದ್ದ ಗಣೇಶ್ ಗೌಡ ಹತ್ಯೆ ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಕಾಫಿನಾಡಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಹತ್ಯೆ ಬಳಿಕ ತಮಿಳುನಾಡಿನ ಮಧುರೈನಲ್ಲಿ ತಲೆಮರೆಸಿಕೊಂಡಿದ್ದ 6 ಆರೋಪಿಗಳನ್ನು ಇದೀಗ ಸೆರೆಹಿಡಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ಗಲಾಟೆ, ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ
ಸಖರಾಯಪಟ್ಟಣದಲ್ಲಿ ಡಿಸೆಂಬರ್ 5ರ ರಾತ್ರಿ ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಹತ್ಯೆ ನಡೆದಿತ್ತು. ಬ್ಯಾನರ್ ಬಿಚ್ಚುವ ವೇಳೆ ನಡೆದ ಗಲಾಟೆಯಿಂದ ಭಜರಂಗದಳದ ಕಾರ್ಯಕರ್ತರು ಕಾಂಗ್ರೆಸ್ ಮುಖಂಡನನ್ನ ಭೀಕರವಾಗಿ ಹತ್ಯೆ ಮಾಡಿದ್ದಾರೆಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಈ ಹತ್ಯೆ ಚಿಕ್ಕಮಗಳೂರು ಮಾತ್ರವಲ್ಲದೆ ಇಡೀ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿತ್ತು.
ಶಾಸಕರಾದ ತಮ್ಮಯ್ಯ, ಕೆ.ಎಸ್ ಆನಂದ್ ರಾತ್ರೋರಾತ್ರಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಹೋಗಿ ಮೃತ ಗಣೇಶ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಉಸ್ತುವಾರಿ ಸಚಿವ ಜಾರ್ಜ್ ಕೂಡ ಶವಾಗಾರಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳುವುದರ ಜೊತೆಗೆ ಗಣೇಶ್ ಹತ್ಯೆಯ ಹಂತಕರನ್ನ ಬಂಧಿಸಿ, ನ್ಯಾಯ ಕೊಡಿಸುವ ಭರವಸೆ ನೀಡಿದ್ದರು.
ಗಣೇಶ್ ಹತ್ಯೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದರು. ಕೊಲೆ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಸಂಜಯ್, ನಿತಿನ್, ನಾಗಭೂಷಣ್, ದರ್ಶನ್, ಅಜಯ್ ಮೇಲೆ ಎಫ್ಐಆರ್ ದಾಖಲಾಗಿತ್ತು. ಇನ್ನು ಗಣೇಶ್ ಹತ್ಯೆ ಹಂತಕರನ್ನ ಬೇಧಿಸಲು ಕಡೂರು ಇನ್‌ಸ್ಪೆಕ್ಟರ್ ರಫೀಕ್, ನೇತೃತ್ವದಲ್ಲಿ ಪೊಲೀಸರ ವಿಶೇಷ 4 ತಂಡಗಳನ್ನ ರಚನೆ ಮಾಡಿ, ಎಸ್ಪಿ ವಿಕ್ರಮ್ ಅಮಟೆ ಆದೇಶಿಸಿದ್ದರು.
ತಲೆಮರೆಸಿಕೊಂಡಿದ್ದ ಆರೋಪಿಗಳು ಮಧುರೈನಲ್ಲಿ ಲಾಕ್
ಗಲಾಟೆ ವೇಳೆ ಗಂಭೀರವಾಗಿ ಗಾಯಗೊಂಡಿದ್ದ A1 ಸಂಜಯ್ ಮತ್ತು A3 ನಾಗಭೂಷಣ್ಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ತನಿಖೆಗಿಳಿದ ಪೊಲೀಸರಿಗೆ ಹತ್ಯೆ ಪ್ರಕರಣದಲ್ಲಿ ಮಿಥುನ್ ಭಾಗಿಯಾಗಿರುವುದು ಖಾತ್ರಿಯಾಗ್ತಿದ್ದಂತೆ ಆತನನ್ನು ಅರೆಸ್ಟ್ ಮಾಡಲಾಗಿತ್ತು. ಒಟ್ಟು 6 ಜನ ಆರೋಪಿಗಳನ್ನ ಬಂಧಿಸಿದ್ದ ಪೊಲೀಸರಿಗೆ ಪ್ರಮುಖ 3 ಆರೋಗಳು ತಲೆಮರೆಸಿಕೊಂಡಿದ್ದು, ಅವರನ್ನ ಹುಡುಕುವುದು ದೊಡ್ಡ ತಲೆನೋವಾಗಿತ್ತು. ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದ ಇನ್‌ಸ್ಪೆಕ್ಟರ್ ರಫೀಕ್ ತಂಡ ಮಧುರೈನಲ್ಲಿ ತಲೆಮರೆಸಿಕೊಂಡಿದ್ದವರನ್ನ ಲಾಕ್ ಮಾಡಿದೆ.
ಕಾಂಗ್ರೆಸ್ ಮುಖಂಡ ಗಣೇಶ್ ಹತ್ಯೆ ಮಾಡಿ ತಮಿಳುನಾಡಿನ ಮಧುರೈನಲ್ಲಿ ತಲೆ ಮರೆಸಿಕೊಂಡಿದ್ದ ಹತ್ಯೆಯ ಪ್ರಮುಖ ಆರೋಪಿ ಸೇರಿದಂತೆ 6 ಜನರನ್ನು ಸಖರಾಯಪಟ್ಟಣ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ತಮಿಳುನಾಡಿನ ಮಧುರೈನಲ್ಲಿ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿ ರಾಜ್ಯಕ್ಕೆ ಕರೆತಂದಿದ್ದಾರೆ.
ಒಟ್ಟು 12 ಆರೋಪಿಗಳ ಬಂಧನ
ಬಂಧಿತರಲ್ಲಿ ಪ್ರಕರಣದ A2 ನಿತಿನ್, A4 ದರ್ಶನ್, A5 ಅಜಯ್ ಸೇರಿದಂತೆ ದರ್ಶನ್ ನಾಯ್ಕ, ಯೋಗೇಶ್ ಮತ್ತು ಫೈಸಲ್ ಇದ್ದಾರೆ. ಈ ಹಿಂದೆ A1 ಸಂಜಯ್, A3 ನಾಗಭೂಷಣ್, A6 ಮಿಥುನ್ ಸೇರಿದಂತೆ ಆರು ಆರೋಪಿಗಳು ಬಂಧಿತರು. ಇದೀಗ ಬಂಧನಕ್ಕೊಳಗಾದ ಆರು ಆರೋಪಿಗಳನ್ನು ಕಡೂರು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಬಂಧಿತರನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ಇದರಲ್ಲಿ A2 ಆರೋಪಿ ನಿತಿನ್ ಆಪ್ತ ಸ್ನೇಹಿತ ಫೈಸಲ್ ಕೂಡ ಭಾಗಿಯಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಗಣೇಶ್ ಗೌಡನ ಹತ್ಯೆ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು 12 ಜನರ ಬಂಧನವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಗಣೇಶ್ ಮರ್ಡರ್ ಕೇಸ್ನಲ್ಲಿ ಬಜರಂಗದಳ ಕಾರ್ಯಕರ್ತ ಅರೆಸ್ಟ್
ಒಟ್ಟನಿಲ್ಲಿ ಬ್ಯಾನರ್ ಬಿಚ್ಚಿವ ವೇಳೆ ಬಜರಂಗದಳ ಕಾರ್ಯಕರ್ತರು, ಕಾಂಗ್ರೆಸ್ ಮುಖಂಡ ಗಣೇಶ್ ನಡುವೆ ನಡೆದ ಗಲಾಟೆಯೇ ಹತ್ಯೆಗೆ ಕಾರಣ ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆಯಾದರೂ, ಹತ್ಯೆಗೆ ಹಳೆಯ ದ್ವೇಷ, ವೈಯಕ್ತಿಕ ಹಗೆತನ ಕಾರಣ ಎಂದು ಶಂಕೆ ವ್ಯಕ್ತವಾಗಿದೆ. ಪೊಲೀಸರ ತನಿಖೆಯ ಬಳಿಕವೇ ಮತ್ತಷ್ಟು ಸತ್ಯ ಹೊರಬರಬೇಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




