ಎಐ ಬಳಸಿ ಯುವತಿಯ ಅಶ್ಲೀಲ ವಿಡಿಯೋ, ಹಣಕ್ಕೆ ಡಿಮ್ಯಾಂಡ್​​: ಇಬ್ಬರು ಆರೋಪಿಗಳು ಅಂದರ್​​

ಎಐ (AI) ತಂತ್ರಜ್ಞಾನ ಬಳಸಿ ಯುವತಿಯ ಅಶ್ಲೀಲ ವಿಡಿಯೋ ಸೃಷ್ಟಿಸಿ, ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ. ಮೈತುಂಬ ಸಾಲ ಮಾಡಿಕೊಂಡಿದ್ದ ಆರೋಪಿಗಳು ಹಣದ ಆಸೆಗೆ ಬಿದ್ದು ಈ ರೀತಿ ಕೃತ್ಯ ಎಸಗಿರೋದು ತನಿಖೆ ವೇಳೆ ಬಯಲಾಗಿದ್ದು, ಸಂತ್ರಸ್ತ ಯುವತಿ ಮತ್ತು ಆರೋಪಿಗಳು ಒಂದೇ ಗ್ರಾಮದವರು ಎಂಬ ವಿಷಯವೂ ಬೆಳಕಿಗೆ ಬಂದಿದೆ.

ಎಐ ಬಳಸಿ ಯುವತಿಯ ಅಶ್ಲೀಲ ವಿಡಿಯೋ, ಹಣಕ್ಕೆ ಡಿಮ್ಯಾಂಡ್​​: ಇಬ್ಬರು ಆರೋಪಿಗಳು ಅಂದರ್​​
ಬಂಧಿತ ಆರೋಪಿಗಳು
Image Credit source: Tv9 Kannada
Edited By:

Updated on: Jun 12, 2026 | 6:07 PM

ಚಿಕ್ಕಮಗಳೂರು, ಜೂನ್​​ 12: ಯುವತಿಯೋರ್ವಳ ಫೋಟೋವನ್ನು ಪೇಸ್​​ಬುಕ್​ನಿಂದ ಪಡೆದು ಅದನ್ನು ಬಳಸಿ ಅಶ್ಲೀಲ ವಿಡಿಯೋ ಕ್ರಿಯೇಟ್ ಮಾಡಿ ಹಣಕ್ಕೆ ಬ್ಲ್ಯಾಕ್​​ಮೇಲ್​​ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ. AI, ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್ ಬಳಸಿ ಮಾಡಿದ ವಿಡಿಯೋವನ್ನು ಯುವತಿಯ ತಾಯಿಗೆ ಕಳುಹಿಸಿದ್ದ ಆರೋಪಿಗಳು, ದುಡ್ಡಿಗಾಗಿ ಪೀಡಿಸಿದ್ದರು. ಹಣ ನೀಡದಿದ್ದರೆ ಜಾಲತಾಣದಲ್ಲಿ ವಿಡಿಯೋ ಹಾಕುವುದಾಗಿ ಬೆದರಿಕೆ ಹಾಕಿದ್ದರು. ನೊಂದ ಯುವತಿಯ ಕಡೆಯವರು ಲಕ್ಕವಳ್ಳಿ ಪೊಲೀಸರಿಗೆ ನೀಡಿದ್ದ ದೂರಿನ ಅಧಾರದಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಅಕ್ಷಯ್ ಹಾಗೂ ಸಾಹುಲ್ ಎಂಬವರನ್ನು ಅರೆಸ್ಟ್​​ ಮಾಡಲಾಗಿದೆ.

ಯೋಗೇಶ್​​ ಎಂಬ ಹೆಸರಲ್ಲಿ ಬ್ಲ್ಯಾಕ್​​ಮೇಲ್​

ಬಾವಿಕೆರೆ ಗ್ರಾಮದ 25 ವರ್ಷದ ಯುವತಿಯ ಪೋಟೋವನ್ನ ಫೇಸ್ಬುಕ್​​ನಿಂದ ಪಡೆದುಕೊಂಡಿದ್ದ ಆರೋಪಿಗಳು ಅಶ್ಲೀಲ ವಿಡಿಯೋ ಕ್ರಿಯೇಟ್ ಮಾಡಿದ್ದರು. ಆ ಬಳಿಕ ಯುವತಿಯ ತಾಯಿಗೆ ಬೆಂಗಳೂರು ಮೂಲದ ಯೋಗೇಶ್ ಎಂಬ ಹೆಸರಿನಲ್ಲಿ ಪದೇಪದೇ ಕರೆ ಮಾಡಿ ಹಣ ಕೇಳಿದ್ದರು. ಆರೋಪಿಗಳು ನಿರಂತರ ಬ್ಲ್ಯಾಕ್​​ಮೇಲ್​​ ಮಾಡಲಾರಂಭಿಸಿದಾಗ ಯುವತಿ ಕಡೆಯವರು ಈ ಸಂಬಂಧ ಯೋಗೇಶ್​​ ಎಂಬ ಹೆಸರನ್ನೇ ಉಲ್ಲೇಖಿಸಿ ದೂರು ನೀಡಿದ್ದರು. ಆದರೆ ಪೊಲೀಸ್​​ ತನಿಖೆ ವೇಳೆ ಆರೋಪಿಗಳ ಕಳ್ಳಾಟ ಬಯಲಾಗಿದ್ದು, ಹಣಕ್ಕಾಗಿ ಬ್ಲ್ಯಾಕ್​​ಮೇಲ್​​ ಮಾಡುತ್ತಿದ್ದ ಅಸಲಿ ಆರೋಪಿಗಳು ಅದೇ ಬಾವಿಕೆರೆ ಗ್ರಾಮದ ಸಾಹುಲ್ ಮತ್ತು ಅಕ್ಷಯ್​​ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಮಧ್ಯರಾತ್ರಿ ಹುಡುಗಿಯರ ಹಾಸ್ಟೆಲ್​​ಗೆ ನುಗ್ಗಿದ ಯುವಕ; ಕಳ್ಳತನಕ್ಕೆಂದು ಹೋದವನೀಗ ಖಾಕಿ ಅತಿಥಿ!

ಇನ್ನು ಆರೋಪಿಗಳು ಮೈತುಂಬ ಸಾಲಮಾಡಿಕೊಂಡಿದ್ದರು. ಹೀಗಾಗಿ ಹೇಗಾದರೂ ಹಣ ಮಾಡಬೇಕೆಂಬ ಆಸೆಗೆ ಬಿದ್ದು ಈ ರೀತಿಯ ಕೆಲಸಕ್ಕೆ ಕೈಹಾಕಿದ್ದರು. ಈ ವಿಚಾರವನ್ನು ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದು, ಮಾಡಬಾರದ್ದು ಮಾಡಲು ಹೋದವರೀಗ ಜೈಲು ಸೇರಿದ್ದಾರೆ. ಒಳ್ಳೆ ಕೆಲಸಗಳಿಗೆ ಬಳಕೆಯಾಗಬೇಕಿದ್ದ ತಂತ್ರಜ್ಞಾನವನ್ನು ಇಂತಹ ಕೆಟ್ಟ ಕೆಲಸಕ್ಕೆ ಬಳಕೆ ಮಾಡಿಕೊಂಡು ಹಣ ಮಾಡಲು ಹೋದವರೀಗ ತಕ್ಕ ಶಾಸ್ತಿಯಾಗಿದೆ ಎಂಬ ಮಾತುಗಳು ಗ್ರಾಮದಲ್ಲಿ ಕೇಳಿಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us