ಭೂಮಿ ಮೇಲೆ ಆಕಾಶದ ಕೆಳಗಿದ್ದೇನೆ, ತಾಕತ್ ಇದ್ರೆ ಹುಡುಕಿ: ಕುಡುಕನ ಸವಾಲು, ಶೃಂಗೇರಿ ಪೊಲೀಸರು ಕಂಗಾಲು!
ಶೃಂಗೇರಿಯಲ್ಲಿ ಮದ್ಯವ್ಯಸನಿಯೊಬ್ಬ ಪೊಲೀಸರು ಹಾಗೂ ಆ್ಯಂಬುಲೆನ್ಸ್ ಸಿಬ್ಬಂದಿಯನ್ನು ಯಾಮಾರಿಸಿದ್ದಾನೆ. ಕುಡುಕನ ಕರೆಯೊಂದರಿಂದ 40 ಕಿಲೋಮೀಟರ್ ದೂರದಿಂದ ಬಂದ ಆ್ಯಂಬುಲೆನ್ಸ್, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂತಿರುಗಬೇಕಾಗಿ ಬಂದಿದೆ. ಗುಂಪು ಘರ್ಷಣೆ ಆತಂಕದಲ್ಲಿ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಕಂಗಾಲಾಗಿದ್ದಾರೆ. ಅಷ್ಟಕ್ಕೂ ಶೃಂಗೇರಿಯಲ್ಲಿ ನಡೆದಿದ್ದೇನು? ಇಲ್ಲಿದೆ ನೋಡಿ ವಿವರ.

ಶೃಂಗೇರಿ, ಮಾರ್ಚ್ 21: ಕುಡುಕನೊಬ್ಬ ಮಾಡಿದ ಅವಾಂತರದಿಂದ ಗುರುವಾರ ರಾತ್ರಿ ಶೃಂಗೇರಿ (Sringeri) ಪೊಲೀಸರು ಬೇಸ್ತು ಬೀಳುವಂತಾಗಿದೆ. ಕುಡುಕನ ಕಿರಿಕಿರಿಯಿಂದ ಆಂಬುಲೆನ್ಸ್ ಸಿಬ್ಬಂದಿ ಹಾಗೂ ಪೊಲೀಸರು (Sringeri Police) ರಾತ್ರಿ ಇಡೀ ಪರದಾಟ ಪಟ್ಟಿದ್ದಾರೆ. ಕೊನೆಗೂ, ಶೃಂಗೇರಿ ಬಸ್ ನಿಲ್ದಾಣದಲ್ಲಿ ಗುಂಪು ಘರ್ಷಣೆಯಾಗಿದೆ ಎಂದು ಯಾಮಾರಿಸಿದ್ದ ಕುಡುಕನನ್ನು ಹಿಡಿಯುವಲ್ಲಿ ಪೊಲೀಸರೇ ಯಶಸ್ವಿಯಾಗಿದ್ದಾರೆ. ಪೊಲೀಸರಿಗೆ ಕರೆ ಮಾಡಿದ ಕುಡುಕ ಹೇಳಿದ್ದೇನು? ಆಮೇಲೆ ಪೊಲೀಸರು ಏನು ಮಾಡಿದರು? ರಾತ್ರಿ ಕಿರಿಕ್ ಮಾಡಿದ ಕುಡುಕನನ್ನು ಆಮೇಲೆ ಪೊಲೀಸರು ಏನು ಮಾಡಿದರು? ವಿವರಗಳು ಇಲ್ಲಿವೆ.
ಶೃಂಗೇರಿಯಲ್ಲಿ ನಡೆದಿದ್ದೇನು?
ಹಗರಿಬೊಮ್ಮನಹಳ್ಳಿಯಿಂದ ಕೂಲಿ ಕೆಲಸಕ್ಕೆ ಎಂದು ಶೃಂಗೇರಿಗೆ ಬಂದಿದ್ದ ಮದ್ಯವ್ಯಸನಿ ಬಸವರಾಜ್ ಎಂಬಾತ ಪೊಲೀಸರಿಗೆ ಕರೆ ಮಾಡಿ, ‘ಶೃಂಗೇರಿ ಬಸ್ ನಿಲ್ದಾಣದಲ್ಲಿ ಗುಂಪು ಘರ್ಷಣೆ ಆಗಿದೆ’ ಎಂದು ಹೇಳಿದ್ದಾನೆ. ಅಲ್ಲದೆ, ಅಂಬುಲೆನ್ಸ್ ಸಿಬ್ಬಂದಿಗೆ ಕರೆ ಮಾಡಿ, ‘ಗುಂಪು ಘರ್ಷಣೆಯಲ್ಲಿ ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ತಕ್ಷಣವೇ ಬನ್ನಿ’ ಎಂದು ಹೇಳಿದ್ದಾನೆ. ಈತನ ಕರೆಗೆ ಓಗೊಟ್ಟ ಆಂಬುಲೆನ್ಸ್ ಸಿಬ್ಬಂದಿ ತರಾತುರಿಯಿಂದ ಸ್ಥಳಕ್ಕೆ ಧಾವಿಸಿದ್ದಾರೆ.
ಮತ್ತೊಂದೆಡೆ, ಪೊಲೀಸರು ಕೂಡ ಶೃಂಗೇರಿ ಬಸ್ ನಿಲ್ದಾಣಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆದರೆ ಗುಂಪು ಘರ್ಷಣೆಯ ಯಾವುದೇ ಸುಳಿವು ಕೂಡ ಅವರಿಗೆ ಸಿಗಲಿಲ್ಲ. ಹೀಗಾಗಿ ಕರೆ ಮಾಡಿ ತಿಳಿಸಿದ ವ್ಯಕ್ತಿಗೆ ಪುನಃ ಕಾಲ್ ಮಾಡಿದ್ದಾರೆ.
ಕರೆ ಮಾಡಿದ ಪೊಲೀಸರಿಗೇ ಸವಾಲ್ ಹಾಕಿದ ಆಸಾಮಿ
ಪೊಲೀಸರಿಂದ ಕರೆ ಬಂದ ಕೂಡಲೇ ಮಾತನಾಡಿದ ಕುಡುಕ ಬಸವರಾಜ್, ‘ಭೂಮಿ ಮೇಲೆ ಆಕಾಶದ ಕೆಳಗಿದ್ದೇನೆ. ತಾಕತ್ತಿದ್ದರೆ ನನ್ನನ್ನು ಹುಡುಕಿ’ ಎಂದು ಸವಾಲು ಹಾಕಿದ್ದಾನೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ತಡರಾತ್ರಿ 1 ಗಂಟೆ ವರೆಗೆ ಪಬ್ ತೆರೆಯಲು ಅವಕಾಶ: ಡಿಕೆ ಶಿವಕುಮಾರ್ ಭರವಸೆ
ಕೊನೆಯಲ್ಲಿ ಅದ್ಹೇಗೋ ಕುಡುಕ ಬಸವರಾಜ್‌ನನ್ನು ವಶಕ್ಕೆ ಪಡೆದ ಶೃಂಗೇರಿ ಪೊಲೀಸರು ಬುದ್ಧಿವಾದ ಹೇಳಿ ಬಿಟ್ಟು ಕಳುಹಿಸಿದ್ದಾರೆ. ಕೊನೆಗೂ ಪ್ರಕರಣ ಸುಖಾಂತ್ಯವಾಗಿದೆ.