AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ 30 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು: ಇನ್ನೂ 15 ಪ್ರಕರಣಗಳು ಬಾಕಿ

Chikkamagaluru News: ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ಕಳೆದ ಒಂದು ವರ್ಷದಲ್ಲಿ ಒತ್ತುವರಿಯಾಗಿದ್ದ 30 ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ಮರುಸ್ವಾಧೀನಪಡಿಸಿಕೊಂಡಿದೆ . ಅತಿಕ್ರಮಣ ಮಾಡಿದ ಜಾಗದಲ್ಲಿದ್ದ ಅಡಿಕೆ ಮತ್ತು ಕಾಫಿ ತೋಟಗಳನ್ನೂ ತೆರವುಗೊಳಿಸಲಾಗಿದೆ. ಇನ್ನೂ 15 ಪ್ರಕರಣಗಳು ಬಾಕಿ ಉಳಿದಿದ್ದು, ಉಪಗ್ರಹ ಚಿತ್ರಗಳ ಮೂಲಕ ಇಲಾಖೆ ಕಣ್ಗಾವಲು ಇರಿಸಿದೆ ಎಂದು ಡಿಸಿಎಫ್ ತಿಳಿಸಿದ್ದಾರೆ.

ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ 30 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು: ಇನ್ನೂ 15 ಪ್ರಕರಣಗಳು ಬಾಕಿ
ಅತಿಕ್ರಮಣವಾಗಿದ್ದ 30 ಎಕರೆ ಅರಣ್ಯ ಭೂಮಿ ಮರುಸ್ವಾಧೀನ Image Credit source: new indian express
ಪ್ರಸನ್ನ ಹೆಗಡೆ
|

Updated on:Jun 30, 2026 | 1:07 PM

Share

ಮುಖ್ಯಾಂಶಗಳು

  • ಕುದುರೆಮುಖದಲ್ಲಿ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ
  • ಅತಿಕ್ರಮಣವಾಗಿದ್ದ 30 ಎಕರೆ ಅರಣ್ಯ ಭೂಮಿ ಮರುಸ್ವಾಧೀನ
  • ಈ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳು ಇನ್ನೂ ಬಾಕಿ

ಚಿಕ್ಕಮಗಳೂರು, ಜೂನ್​​ 30: ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ 13 ಅತಿಕ್ರಮಣಗಳನ್ನು ಕಳೆದ ಒಂದು ವರ್ಷದ ಅವಧಿಯಲ್ಲಿ ತೆರವುಗೊಳಿಸಿ ಸುಮಾರು 30 ಎಕರೆ ಅರಣ್ಯ ಭೂಮಿಯನ್ನು ಮರುಸ್ವಾಧೀನಪಡಿಸಿಕೊಂಡಿದೆ. ಮೂಲಗಳ ಪ್ರಕಾರ, ಈ ಅತಿಕ್ರಮಣ ಪ್ರಕರಣಗಳನ್ನು 2001ರಿಂದ ವಿವಿಧ ಹಂತಗಳಲ್ಲಿ ಗುರುತಿಸಲಾಗಿತ್ತು. 2015ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಭೂಮಿ ತೆರವುಗೊಳಿಸುವಂತೆ ಆದೇಶಿಸಿದ್ದರು. ಬಳಿಕ ಕೆಲವರು ಮೇಲ್ಮನವಿ ಸಲ್ಲಿಸಿದ್ದರಿಂದ, 2019ರಲ್ಲಿ ಅಂತಿಮ ತೆರವು ಆದೇಶ ಹೊರಡಿಸಲಾಗಿತ್ತು.

ಇನ್ನೂ ವನ್ಯಜೀವಿ ವಿಭಾಗದ ಈ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ಅರಣ್ಯ ಭೂಮಿ ಅತಿಕ್ರಮಣ ಪ್ರಕರಣಗಳು ತೆರವುಗೊಳ್ಳಬೇಕಿವೆ ಎಂದು ಮೂಲಗಳು ತಿಳಿಸಿವೆ. ಅತಿಕ್ರಮಣದಾರರು ಹೆಚ್ಚಿನ ಭೂಮಿಯಲ್ಲಿ ಅಡಿಕೆ ಹಾಗೂ ಕಾಫಿ ಬೆಳೆ ಬೆಳೆದಿದ್ದು, ಕೆಲವರು ವಾಸಿಸಲು ಕಟ್ಟಡಗಳನ್ನೂ ನಿರ್ಮಿಸಿದ್ದರು. ಆ ಪೈಕಿ ಬಹುತೇಕರು ಸಣ್ಣ ರೈತ ಕುಟುಂಬಗಳಾಗಿದ್ದು, ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಇನ್ನೆರಡು ಪ್ರಕರಣಗಳಲ್ಲಿ ಹೋಂಸ್ಟೇ ನಡೆಸಲಾಗುತ್ತಿದ್ದು, ಅವು ನ್ಯಾಯಾಲಯದ ವಿಚಾರಣೆಯಲ್ಲಿವೆ ಎಂದು ಕುದುರೆಮುಖ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಎಂ. ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅರೇ ಇದೇನಿದು! ರೈತರ ಭೂಮಿಯನ್ನೇ ಒತ್ತುವರಿ ಮಾಡಿದ ಅರಣ್ಯ ಇಲಾಖೆ; ಅಚ್ಚರಿ ಎನ್ನಿಸಿದ್ರೂ ಸತ್ಯ

ಅತಿಕ್ರಮಣ ಮಾಡಿದ ಜಾಗದಲ್ಲಿದ್ದ ಅಡಿಕೆ ಮತ್ತು ಕಾಫಿ ತೋಟಗಳನ್ನು ತೆರವುಗೊಳಿಸಲಾಗಿದೆ. ಸಾಮಾನ್ಯವಾಗಿ ರಾಷ್ಟ್ರೀಯ ಉದ್ಯಾನವನದ ಒಳಭಾಗದಲ್ಲಿ ಹೊಸ ಗಿಡಗಳನ್ನು ನೆಡುವುದಿಲ್ಲ. ಬದಲಾಗಿ, ಮರು ಅತಿಕ್ರಮಣ ತಡೆಯಲು ಜಾನುವಾರು ನಿರೋಧಕ ಕಂದಕ ನಿರ್ಮಿಸಿ, ಭೂಮಿ ಅರಣ್ಯ ಇಲಾಖೆಯ ವಶದಲ್ಲಿದೆ ಎಂಬ ಫಲಕಗಳನ್ನು ಅಳವಡಿಸಲಾಗುತ್ತದೆ ಎಂದು ಶಿವರಾಮ್ ವಿವರಿಸಿದ್ದಾರೆ. ಅರಣ್ಯ ಭೂಮಿಯ ಅತಿಕ್ರಮಣ ಪತ್ತೆಗೆ ಇಲಾಖೆ ಉಪಗ್ರಹ ಚಿತ್ರಗಳ ಮೂಲಕ ಭೂಬಳಕೆ ಬದಲಾವಣೆಗಳನ್ನು ಪರಿಶೀಲಿಸುತ್ತಿದೆ. ಜೊತೆಗೆ, ಸಿಬ್ಬಂದಿ ಪ್ರತಿ ತಿಂಗಳು ಎರಡು ಬಾರಿ ಇ-ಗಸ್ತು ಆ್ಯಪ್ ಬಳಸಿ ಅರಣ್ಯ ಪ್ರದೇಶವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಬೀಟ್ ಅರಣ್ಯಾಧಿಕಾರಿಗಳು ಹಾಗೂ ಅರಣ್ಯ ರಕ್ಷಕರು ಗಡಿ ಪ್ರದೇಶಗಳಲ್ಲಿ ನಿರಂತರ ಗಸ್ತು ನಡೆಸಿ ಅತಿಕ್ರಮಣ ಮತ್ತು ವನ್ಯಜೀವಿ ಸಂರಕ್ಷಣೆಗೆ ನಿಗಾ ವಹಿಸುತ್ತಿದ್ದಾರೆ ಎಂದು ಡಿಸಿಎಫ್ ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:04 pm, Tue, 30 June 26

Follow Us