
ಚಿಕ್ಕಮಗಳೂರು, ನವೆಂಬರ್ 29: ಮತ್ತಾವರ ಪ್ಲಾಂಟೇಶನ್ ಮತ್ತು ನೆಲ್ಲೂರು ಗುಡ್ಡ ಪ್ರದೇಶದಲ್ಲಿ ಓಡಾಟ ನಡೆಸಿದ್ದ ಒಂಟಿ ಸಲಗದ ಸೆರೆಗೆ ಅರಣ್ಯ ಇಲಾಖೆ ನಡೆಸಿದ್ದ ಆಪರೇಷನ್ ಗಜ ಕಾರ್ಯಚರಣೆಗೆ ಹಿನ್ನಡೆಯಾಗಿದ್ದು, ಮಾಕೋನಹಳ್ಳಿ ಬಳಿ ಬೀಡುಬಿಟ್ಟಿರುವ 15 ಕಾಡಾನೆಗಳ ಹಿಂಡನ್ನು ಒಂಟಿ ಸಲಗ ಸೇರಿಕೊಂಡಿದೆ. 22 ಕಿಲೋ ಮೀಟರ್ ಕ್ರಮಿಸಿ ತನ್ನ ಗುಂಪು ಸೇರುವಲ್ಲು ಯಶಸ್ವಿಯಾಗಿದೆ. ಈಗ ಒಟ್ಟು 16 ಆನೆಗಳ ಹಿಂಡು ಚಿಕ್ಕಮಗಳೂರು ಹೊರವಲಯದ ಮಾಕೋನಹಳ್ಳಿ , ತುದಿಯಲ ಗ್ರಾಮದಲ್ಲಿ ಸಂಚಾರ ನಡೆಸುತ್ತಿವೆ.
ಸೆರೆ ಕಾರ್ಯಾಚರಣೆಯ ಸುಳಿವು ಸಿಗುತ್ತಿದ್ದಂತೆ ಪುಂಡಾನೆ ಮತ್ತಾವರ ಪ್ಲಾಂಟೇಶನ್ ಮತ್ತು ನೆಲ್ಲೂರು ಗುಡ್ಡ ಪ್ರದೇಶದಿಂದ ಮೊನ್ನೆ ರಾತ್ರಿಯೇ ಕಾಲ್ಕಿತ್ತಿತ್ತು. ನಾಪತ್ತೆಯಾಗಿರುವ ಆನೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ನಡೆಸಿದಾಗ ಮೂಡಿಗೆರೆ ತಾಲೂಕಿನ ನಂದೀಪುರ ಕಾಫಿತೋಟದಲ್ಲಿ ಕಂಡುಬಂದಿತ್ತು. ಇದ್ದ ಜಾಗದಿಂದ ಸುಮಾರು 20 ಕಿಲೋಮೀಟರ್ ದೂರವನ್ನು ಸಾಗಿದ್ದ ಒಂಟಿ ಸಲಗದ ಚಲನವಲನಗಳ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಟ್ಟಿದ್ದರು. ಹೀಗಿದ್ದರೂ ತನ್ನ ಗುಂಪನ್ನು ಮರಳಿ ಸೇರುವಲ್ಲಿ ಆನೆ ಯಶಸ್ಸು ಕಂಡಿದೆ. ಇನ್ನು ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ 16 ಕಾಡಾನೆಗಳ ಹಿಂಡಿನ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಸೆರೆ ಕಾರ್ಯಾಚರಣೆ ಸುಳಿವು ಸಿಗುತ್ತಿದ್ದಂತೆ ಒಂಟಿ ಸಲಗ ಎಸ್ಕೇಪ್: ಸುಮಾರು 20 ಕಿ.ಮೀ. ದೂರದಲ್ಲಿ ಪತ್ತೆ
ಬಿಳಿಗಿರಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ನಲ್ಲಿ ಕಿಡಿಗೇಡಿಗಳು ಕುಚೇಷ್ಟೆ ನಡೆಸಿದ್ದು, ಚಾಮರಾಜನಗರ ತಾಲೂಕಿನ ಪುಣಜನೂರು ರಸ್ತೆಯಲ್ಲಿ ಆನೆಯನ್ನ ಚೇಡಿಸಿದ್ದಾರೆ. ರಾತ್ರಿ 9 ಗಂಟೆಗೆ ಪುಣಜನೂರು ಚೆಕ್ ಪೋಸ್ಟ್ ಬಂದ್ ಆಗಲಿದೆ. ಹೀಗಾಗಿ ಆ ಬಳಿಕ ಅನಧಿಕೃತ ಪ್ರವೇಶ ಮಾಡಿರುವ ಆರೋಪವೂ ಕೇಳಿಬಂದಿದೆ. ಕಾಡಾನೆಯನ್ನು ಕೆಣಕಿದ್ದಲ್ಲದೆ, ಆ ದೃಶ್ಯವನ್ನು ಯುವಕರು ಮೊಬೈಲ್ನಲ್ಲಿ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ಅವರ ಹುಚ್ಚಾಟದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ಬೆನ್ನಲ್ಲೇ ಯುವಕರ ವಿರುದ್ದ ಕ್ರಮ ಕೈಗೊಳ್ಳುವಂತೆ ಪರಿಸರವಾದಿಗಳು ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.