ಶಬರಿಮಲೆ, ಕ್ರಿಸ್‌ಮಸ್ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕೆ ಮಂಗಳೂರು–ಕೊಲ್ಲಂ ನಡುವೆ ವಿಶೇಷ ರೈಲು
ಶಬರಿಮಲೆ ಯಾತ್ರೆ ಹಾಗೂ ಕ್ರಿಸ್‌ಮಸ್ ಹಬ್ಬದ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ನೈಋತ್ಯ ರೈಲ್ವೆ ಡಿಸೆಂಬರ್ 4ರಿಂದ 26ರವರೆಗೆ ಮಂಗಳೂರು ಸೆಂಟ್ರಲ್ ಮತ್ತು ಕೊಲ್ಲಂ ನಡುವೆ ವಿಶೇಷ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳನ್ನು ಘೋಷಿಸಿದೆ. ರೈಲು ಸಂಚರಿಸುವ ಸಮಯ, ನಿಲುಗಡೆ ಸೇರಿದಂತೆ ಇನ್ನಿತರ ಪ್ರಮುಖ ಮಾಹಿತಿಗಳು ಇಲ್ಲಿವೆ.

ಮಂಗಳೂರು, ನವೆಂಬರ್ 29: ಶಬರಿಮಲೆ ಯಾತ್ರೆ ಹಾಗೂ ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದ್ದು, ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ನೈಋತ್ಯ ರೈಲ್ವೆ (SWR) ಮಂಗಳೂರು ಸೆಂಟ್ರಲ್ ಮತ್ತು ಕೊಲ್ಲಂ ನಡುವೆ ವಿಶೇಷ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳನ್ನು ಘೋಷಿಸಿದೆ. ರೈಲ್ವೆ ಪ್ರಕಟಣೆಯ ಪ್ರಕಾರ, ಡಿಸೆಂಬರ್ 4ರಿಂದ ಡಿಸೆಂಬರ್ 26, 2026ರವರೆಗೆ ಎರಡೂ ಮಾರ್ಗಗಳಲ್ಲಿ ವಿಶೇಷ ರೈಲುಗಳು ಸಂಚರಿಸಲಿವೆ.
ರೈಲಿನ ಸಮಯ
ರೈಲು ಸಂಖ್ಯೆ 06231 (ಮಂಗಳೂರು ಸೆಂಟ್ರಲ್–ಕೊಲ್ಲಂ) ಡಿಸೆಂಬರ್ 4ರಿಂದ ಡಿಸೆಂಬರ್ 25ರವರೆಗೆ ಪ್ರತಿ ಶುಕ್ರವಾರ ಸಂಚರಿಸಲಿದೆ. ಈ ರೈಲು ಮಂಗಳೂರು ಸೆಂಟ್ರಲ್‌ನಿಂದ ಸಂಜೆ 5.55ಕ್ಕೆ ಹೊರಟು, ಮರುದಿನ ಬೆಳಗ್ಗೆ 7.15ಕ್ಕೆ ಕೊಲ್ಲಂ ತಲುಪಲಿದೆ. ಅದೇ ರೀತಿ, ರೈಲು ಸಂಖ್ಯೆ 06232 (ಕೊಲ್ಲಂ–ಮಂಗಳೂರು ಸೆಂಟ್ರಲ್) ಡಿಸೆಂಬರ್ 5ರಿಂದ ಡಿಸೆಂಬರ್ 26ರವರೆಗೆ ಪ್ರತಿ ಶನಿವಾರ ಸಂಚರಿಸಲಿದೆ. ಈ ರೈಲು ಕೊಲ್ಲಂನಿಂದ ಬೆಳಗ್ಗೆ 9.15ಕ್ಕೆ ಹೊರಟು, ಅದೇ ದಿನ ರಾತ್ರಿ 9.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ಇದನ್ನೂ ಓದಿ: ದೇಶದ ಮೊದಲ ‘ಸಸ್ಟೈನಬಲ್ ಡೇಟಾ ಸೆಂಟರ್’ ಸ್ಥಾಪನೆಗೆ ತಣ್ಣೀರುಬಾವಿ ಜಾಗ ಪರಿಶೀಲಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಎಲ್ಲೆಲ್ಲಿ ರೈಲು ನಿಲುಗಡೆ?
ಎರಡೂ ಮಾರ್ಗಗಳ ರೈಲುಗಳು ಕಾಸರಗೋಡು, ಕಣ್ಣಂಗಾಡ್, ಪಯ್ಯನ್ನೂರು, ಕಣ್ಣೂರು, ತಲಶ್ಶೇರಿ, ವಡಕರ, ಕೋಯಿಕ್ಕೋಡ್, ತಿರೂರು, ಶೋರನೂರು, ತ್ರಿಶ್ಶೂರು, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಾಶೇರಿ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕ್ಕರ, ಕಾಯಂಕುಳಂ, ಕರುನಾಗಪ್ಪಳ್ಳಿ ಮತ್ತು ಶಾಸ್ತಾಂಕೋಟ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ. ಈ ವಿಶೇಷ ರೈಲುಗಳು ಒಟ್ಟು 18 ಬೋಗಿಗಳನ್ನು ಹೊಂದಿರಲಿವೆ. ಪ್ರಯಾಣಿಕರು ರೈಲುಗಳ ವೇಳಾಪಟ್ಟಿ ಹಾಗೂ ಇತರ ಮಾಹಿತಿಗಾಗಿ ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ www.enquiry.indianrail.gov.in, NTES ಮೊಬೈಲ್ ಆ್ಯಪ್ ಅಥವಾ ರೈಲ್ವೆ ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಬಹುದು ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




