AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರಿನಲ್ಲಿ ಮತ್ತೆ ಮುನ್ನಲೆಗೆ ಬಂದ ಜಾಮಿಯಾ ಮಸೀದಿ-ನೆಲ್ಲೂರು ಮಠ ನಡುವಿನ ಜಾಗ ವಿವಾದ

ನೆಲ್ಲೂರು ಮಠ - ಜಾಮಿಯಾ ಮಸೀದಿ ನಡುವಿನ ಎರಡು ದಶಕದ ಕಾನೂನು ಹೋರಾಟ. ಕಾನೂನು ಹೋರಾಟದ ನಡುವೆಯೂ ಇಂದು ಬೆಳ್ಳಂಬೆಳಗ್ಗೆ ಏಕಾಏಕಿ ಜಾಮಿಯಾ ಮಸೀದಿ ಕಮಿಟಿ ವಿವಾದಿತ ಸ್ಥಳದಲ್ಲಿದ್ದ ಮನೆ ಮತ್ತು ಅಂಗಡಿಗಳನ್ನ ತೆರವುಗೊಳಿಸಿದ್ದು. ಕೆಡವಿದ ಜಾಗದಲ್ಲೇ ಮತ್ತೆ ಮನೆ ಮತ್ತು ಅಂಗಡಿ ಕಟ್ಟಿ ಕೊಡಿ ಇಲ್ಲ ನಾವೇ ಕಟ್ತೀವಿ ಎಂದು ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಸವಾಲ್ ಹಾಕಿ ತೊಡೆ ತಟ್ಟಿದೆ.

ಚಿಕ್ಕಮಗಳೂರಿನಲ್ಲಿ ಮತ್ತೆ ಮುನ್ನಲೆಗೆ ಬಂದ ಜಾಮಿಯಾ ಮಸೀದಿ-ನೆಲ್ಲೂರು ಮಠ ನಡುವಿನ ಜಾಗ ವಿವಾದ
Chikkamagaluru
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Mar 04, 2025 | 5:18 PM

Share

ಚಿಕ್ಕಮಗಳೂರು, (ಮಾರ್ಚ್​ 04): ನಗರದ ಹೃದಯ ಭಾಗದಲ್ಲಿರುವ ಜಾಗಕ್ಕೆ ನೆಲ್ಲೂರು ಮಠದ ಮನೆ ಮತ್ತು ಜಾಮಿಯಾ ಮಸೀದಿ ನಡುವೆ ಹಗ್ಗಜಗ್ಗಾಟ ನಡೆದಿದ್ದು, ಇದೀಗ ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಜಾಗದ ವಿಚಾರವಾಗಿ ಜಾಮಿಯಾ ಮಸೀದಿ ಮತ್ತು ನೆಲ್ಲೂ ಮಠದ ನಡುವೆ ಕಳೆದ ಎರಡು ದಶಕಗಳಿಂದ ಕಾನೂನು ಹೋರಾಟ ನಡೆಯುತ್ತಿದೆ. ಆದ್ರೆ ಇದರ‌ ನಡುವೆ ಹೈಕೋರ್ಟ್ ನಲ್ಲಿ ತಮ್ಮ ಪರವಾಗಿ ಆದೇಶ ಬಂದಿದೆ ಎಂದು ಹೇಳಿಕೊಂಡು ಇಂದು (ಮಾರ್ಚ್ 04) ಬೆಳ್ಳಂಬೆಳಗ್ಗೆ ಜಾಮಿಯಾ ಮಸೀದಿ ಕಮಿಟಿ ಸುಮಾರು 200 ಹೆಚ್ಚು ಯುವಕರೊಂದಿಗೆ ಬಂದು ಏಕಾಏಕಿ ವಿವಾದಿತ ಮಠದ ಮನೆಯ ಜಾಗದಲ್ಲಿದ್ದ ಮನೆ ಮತ್ತು ಅಂಗಡಿಯನ್ನ ನೆಲಸಮ ಮಾಡಿದೆ. ಇದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಆಕ್ರೊಶಕ್ಕೆ ಕಾರಣವಾಗಿದೆ‌.

ಇನ್ನೂ ಈ ಆಸ್ತಿ ನೆಲ್ಲೂರು ಮಠಕ್ಕೆ ಸೇರಿದ್ದ ಎಂದು ನೆಲ್ಲೂರು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ರೆ ಮತ್ತೊಂದು ಕಡೆ ಈ ಜಾಗ ನಮಗೆ ಸೇರಿದ್ದು ಮಳಿಗೆಗಳ ಬಾಡಿಗೆ ನೀಡದವರ ಮಳಿಗೆಗಳನ್ನ ಹೈ ಕೋರ್ಟ್ ಆದೇಶದಂತೆ ತೆರವು ಮಾಡಿದ್ದೇವೆ ಎಂದು ಜಾಮಿಯಾ ಮಸೀದಿ ಕಮಿಟಿಯ ವಾದ. ಯಾವಾಗ ಜಾಮಿಯಾ‌ ಮಸೀದಿ ಕಮಿಟಿ ವಿವಾದಿತ ಜಾಗದಲ್ಲಿದ್ದ ಮನೆ ಮತ್ತು ಅಂಗಡಿಯನ್ನ ತೆರವುಗೊಳಿಸಲು ಮುಂದಾಯ್ತೋ ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಮುಂದಾಗಬಹುದಾ ಎಲ್ಲ ಘಟನೆಗಳನ್ನ ಗಮನದಲ್ಲಿಟ್ಟುಕೊಂಡು ಕೂಡಲೇ ತೆರವು ಕಾರ್ಯಾಚರಣೆಯನ್ನ ಸ್ಥಗಿತಗೊಳಿಸಿದೆ.

ವಿವಾದಿತ ಜಾಗ ಸೇರಿದಂತೆ‌ ನಗರದ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಸ್ಥಳಗಳಲ್ಲಿ ಬಿಗಿ ಭದ್ರತೆಯನ್ನ‌ ಕೈಗೊಂಡಿದ್ದು. ಎಸ್ಪಿ ವಿಕ್ರಮ್ ಅಮಟೆ ನೆಲೂರು ಮಠದ ಮನೆಯವರು, ಹಿಂದೂಪರ ಸಂಘಟನೆಗಳ ಮುಖಂಡರು, ಬಿಜೆಪಿ ಮುಖಂಡರು ಹಾಗೂ ಜಾಮಿಯಾ ಮಸೀದಿ‌ ಕಮಿಟಿಯೊಂದಿಗೆ‌ ಸುಧೀರ್ಘ ಸಭೆ ನಡೆಸಿ ಎರಡೂ ಕಡೆಯವರಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸರ ಅನುಮತಿ, ನಗರಸಭೆಯ ಅನುಮತಿಯನ್ನೂ ಪಡೆದುಕೊಳ್ಳದೆ ತೆರವು ಕಾರ್ಯಾಚರಣೆಗೆ ಮುಂದಗಿದ್ದಕ್ಕೆ ಜಾಮಿಯಾ ಮಸೀದಿ ಕಮಿಟಿಯವರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇತ್ತ ಬಿಜೆಪಿ ಹಾಗೂ ಹಿಂದೂಪರ ಸಂಘಟ‌ನೆಗಳು ಇಂದು ಕೆಡವಿದ ಜಾಗದಲ್ಲೇ ಮನೆ ಮತ್ತು ಅಂಗಡಿಯನ್ನ ಕಟ್ಟಿ ಕೊಡ್ಬೇಕು.. ಜಾಮಿಯಾ ಮಸೀದಿ ಕಟ್ಟಿ ಕೊಡದಿದ್ರೆ ಜಿಲ್ಲಾಡಳಿತವೇ ಕಟ್ಟಿಸಿಕೊಡಲಿ. ಇಲ್ಲವಾದಲ್ಲಿ ನಾಳೆ (ಮಾರ್ಚ್ 05) ಬೆಳಗ್ಗೆ ನಾವೇ ಕಟ್ಟಿ ಕೊಳ್ಳುತ್ತೇವೆ. ಅದ್ಯಾರು ನಮ್ಮನ್ನ ತಡೆಯುತ್ತಾರೋ ನೋಡುತ್ತೇವೆ ಎಂದು ಸವಾಲು ಹಾಕಿದ್ದಾರೆ.

ಜಾಮಿಯಾ‌ ಮಸೀದಿಯ ಆತುರದ ನಿರ್ಧಾರ ಬಿಜೆಪಿ, ಹಿಂದೂಪರ ಸಂಘಟನೆಗಳಷ್ಟೇ ಅಲ್ಲದೆ ಪೊಲೀಸ್ ಇಲಾಖೆಯ ಕೆಂಗಣ್ಣಿಗೂ ಗುರಿಯಾಗಿದೆ‌. ಸದ್ಯ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ 5 KSRP ತುಕಡಿ ನಿಯೋಜನೆ ಮಾಡಲಾಗಿದ್ದು. ಮಠದ ಕುಟುಂಬಸ್ಥರು ,ಹಿಂದೂ ಸಂಘಟನೆ, ಜಾಮಿಯಾ ಕಮಿಟಿ ,ವಕ್ಫ್ ಅಧಿಕಾರಿಗಳ ಜೊತೆ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಆಮ್ಟೆ ಸಭೆ ಮಾಡಿ ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ.

ಎರಡು ದಶಕಗಳಿಂದ ನೆಲ್ಲೂರು ಮಠ ಹಾಗೂ ಜಾಮಿಯಾ ಮಸೀದಿ ನಡುವೆ ವಿವಾದಕ್ಕೆ ಕಾರಣಾವಾಗಿದ್ದ ಜಾಗ ಇಂದು ಅಕ್ಷರಶಃ ರಣಭೂಮಿಯಾಗಿ ಮಾರ್ಪಟ್ಟಿದೆ. ಪೊಲೀಸರ ಜಾಣ್ಮೆ ಮತ್ತು ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಮಹಾ ದುರಂತವೊಂದು ತಪ್ಪಿದಂತಾಗಿದ್ದು, ನಗರದಾದ್ಯಂತ ಖಾಕಿ ಹದ್ದಿನ ಕಣ್ಣಿಟ್ಟಿದ್ರೂ ಕೂಡಾ ಯಾವ ಸಮಯದಲ್ಲಿ ಏನಾಗುತ್ತೆ ಅನ್ನೋದೆ ಗೊತ್ತಾಗದಂತಾಗಿದೆ. ಕೋಮುಸೂಕ್ಷ್ಮ ಜಿಲ್ಲೆ ಕಾಫಿನಾಡು ಬೂದಿ ಮುಚ್ಚಿದ ಕೆಂಡದಂತಿದೆ.