ಬೆದರಿಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಚಿಕ್ಕಮಗಳೂರು ಪೋಸ್ಟ್ ಆಫೀಸ್ನಿಂದ ಸಿಟಿ ರವಿಗೆ ಪತ್ರ ರವಾನೆ
ಬಿಜೆಪಿ MLC ಸಿ.ಟಿ ರವಿಯ ಚಿಕ್ಕಮಗಳೂರಿನ ನಿವಾಸಕ್ಕೆ ಬಂದ ಆ ಒಂದು ಪತ್ರ ಸಂಚಲನ ಸೃಷ್ಟಿ ಮಾಡಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಸದನದಲ್ಲಿ ಸಿ.ಟಿ ರವಿ ಬಳಸಿದ್ದಾರೆ ಎನ್ನಲಾದ ಆ ಪದಕ್ಕೆ ಕ್ಷಮೆ ಕೇಳಬೇಕು. ಇಲ್ವ ರವಿ ಮತ್ತು ಪುತ್ರ ಸೂರ್ಯನ ಹತ್ಯೆ ಮಾಡುವುದಾಗಿ ಬೆದರಿಕೆ ಪತ್ರ ಬಂದಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದು, ಪತ್ರ ಎಲ್ಲಿಂದ ಬಂದಿದೆ ಎನ್ನುವುದನ್ನು ಪತ್ತೆ ಮಾಡಿದ್ದಾರೆ.
ಚಿಕ್ಕಮಗಳೂರು, (ಜನವರಿ 12): ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ MLC ಸಿ.ಟಿ ರವಿ ಬಳಸಿದ್ದಾರೆ ಎನ್ನಲಾದ ಆ ಒಂದು ಪದ ರಾಜಕೀಯ ವಾಗ್ವಾದದ ಜೊತೆಗೆ ಬೆದರಿಕೆ ಪತ್ರದವರೆಗೂ ಬಂದಿದೆ. ಕಳೆದ ತಿಂಗಳು ಬೆಳಗಾವಿಯಲ್ಲಿ ನಡೆದ ಸದನದಲ್ಲಿ ಸಿ.ಟಿ ರವಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆ ಪದ ಬಳಕೆ ಮಾಡಿದ್ರು ಎಂಬ ಆರೋಪ ಕೇಳಿ ಬಂದು ಕೇಸ್ ದಾಖಲಾಗಿ ಸಿ.ಟಿ ರವಿ ಬಂಧನ ಕೂಡವಾಗಿ ರಾಜಕೀಯ ವಾಗ್ವಾದಕ್ಕೂ ಕಾರಣವಾಗಿತ್ತು.ಇದೀಗ ವಿಚಾರ ತಣ್ಣಗಾಯ್ತು ಅನ್ನುವಷ್ಟರಲ್ಲಿ ಸಿ.ಟಿ ರವಿ ಅವರ ಚಿಕ್ಕಮಗಳೂರು ನಗರದ ಬಸವನಹಳ್ಳಿ ನಿವಾಸಕ್ಕೆ ಅನಾಮಧೇಯ ಪತ್ರ ಬಂದಿದೆ. ಪತ್ರದಲ್ಲಿ ಹೆಬ್ಬಾಳ್ಕರ್ ಗೆ 15 ದಿನದೊಳಗೆ ಕಾಲುಹಿಡಿದು ಕ್ಷಮೆ ಕೇಳ್ಬೇಕು. ಇಲ್ಲ ಮಗ ಸೂರ್ಯ ಸೇರಿದಂತೆ ರವಿಯನ್ನ ಹತ್ಯೆ ಮಾಡುವುದಾಗಿ ಪತ್ರ ಬಂದಿದ್ದು, ಈ ಬಗ್ಗೆ ಸಿ.ಟಿ ರವಿ ಪಿಎ ಚೇತನ್ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಚಿಕ್ಕಮಗಳೂರಿನ ವಿಜಯಪುರದ ಅಂಚೆ ಕಚೇರಿಯಿಂದ ಪತ್ರ ರವಾನೆಯಾಗಿರುವುದು ಬೆಳಕಿಗೆ ಬಂದಿದೆ.
ಜನವರಿ 9ರಂದು ಚಿಕ್ಕಮಗಳೂರಿನ ಬಸವನಹಳ್ಳಿ ರಸ್ತೆಯಲ್ಲಿರುವ ಸಿ.ಟಿ.ರವಿ ಮನೆಗೆ ಬೆದರಿಕೆ ಪತ್ರ ಬಂದಿದ್ದು, ಅದು ಸಿಟಿ ರವಿ ಅವರ ತವರು ಕ್ಷೇತ್ರ ಚಿಕ್ಕಮಗಳೂರಿನ ವಿಜಯಪುರದ ಅಂಚೆ ಕಚೇರಿಯಿಂದ ಬಂದಿರುವುದು ಕಂಡುಬಂದಿದೆ. ಹೀಗಾಗಿ ಪೊಲೀಸರು, ಪತ್ರ ಕಳುಹಿಸಿದ ವ್ಯಕ್ತಿ ಯಾರು ಎನ್ನುವುದನ್ನು ಪತ್ತೆ ಮಾಡಲು ಪೋಸ್ಟ್ ಆಫೀಸ್ ಸುತ್ತಮುತ್ತಲಿನ ಸಿಸಿಕ್ಯಾಮರಾಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ ಕೇಸ್: ಸಿಟಿ ರವಿಗೆ ಬೆದರಿಕೆ ಪತ್ರ
ಸಿ ಟಿ ರವಿಗೆ ಬೆದರಿಕೆ ಪತ್ರ ಪ್ರಕರಣದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ತನಿಖೆ ಮಾಡಿಸುತ್ತೇವೆ. ಯಾರೇ ಪತ್ರ ಬರೆದಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಸರ್ಕಾರದ ವಿರುದ್ಧ ಮುಗಿ ಬೀಳಲು ಹಾಗೂ ಇನ್ನಷ್ಟು ಸಿಂಪತಿ ಗಿಟ್ಟಿಸಿಕೊಳ್ಳಲು ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರ ಹೆಸರಿನಲ್ಲೇ ಬಿಜೆಪಿ ಕಾರ್ಯಕರ್ತನೇ ಈ ರೀತಿ ಪತ್ರ ಬರೆದಿರಬಹುದು ಎಂಬ ಅನುಮಾನಗಳು ಸಹ ವ್ಯಕ್ತವಾಗುತ್ತಿವೆ. ಇದರ ಮಧ್ಯ ಇದೀಗ ಚಿಕ್ಕಮಗಳೂರಿನ ಅಂಚೆ ಕಚೇರಿಯಿಂದಲೇ ಪತ್ರ ಪೋಸ್ಟ್ ಆಗಿರುವುದು ಬಾರೀ ಸಂಚಲನಕ್ಕೆ ಕಾರಣವಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ.
ಸಿಟಿ ರವಿ ಸದನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಳಸಿದ್ರೂ ಎನ್ನಲಾದ ಆ ಒಂದು ಪದ ರಾಜಕೀಯವಾಗಿ ಕಿತ್ತಾಟಕ್ಕೂ ಕಾರಣವಾಗಿ ಕೊನೆಗೆ ಬೆದರಿಕೆ ಪತ್ರದ ವರೆಗೂ ಬಂದು ನಿಂತಿದ್ದು, ಮುಂದೆ ಇದು ಇನ್ಯಾವ ಹಂತಕ್ಕೆ ತಲುಪುತ್ತೋ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:06 am, Sun, 12 January 25