ಚಿತ್ರದುರ್ಗ: ಮತಾಂತರ ಆರೋಪ; ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ದೂರಿದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್
ಕ್ರಿಶ್ಚಿಯನ್ ಧರ್ಮಕ್ಕೆ 40-50 ಕುಟುಂಬಗಳನ್ನು ಮತಾಂತರ ಮಾಡಲಾಗಿದೆ. ಜನರಿಂದ ಈ ಬಗ್ಗೆ ದೂರು ಕೂಡ ಬಂದಿದೆ ಎಂದು ಶಾಸಕ ಗೂಳಿಹಟ್ಟಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಚಿತ್ರದುರ್ಗ: ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಮತಾಂತರದ ಆರೋಪಗಳು ಕೇಳಿಬರುತ್ತಿವೆ. ಅದರಂತೆ ಇಂದು (ಅಕ್ಟೋಬರ್ 1) ಚಿತ್ರದುರ್ಗದಲ್ಲಿಯೂ ಮತಾಂತರದ ಆರೋಪಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಚಿತ್ರದುರ್ಗ ಜಿಲ್ಲೆಯ ಬಲ್ಲಾಳಸಮುದ್ರ ಗ್ರಾಮದಲ್ಲಿ ಮತಾಂತರ ನಡೆದಿರುವ ಬಗ್ಗೆ ಶಾಸಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಆರೋಪಿಸಿರುವುದೇ ಆಗಿದೆ.
ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ಮತಾಂತರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸುಡುಗಾಡು ಸಿದ್ಧ ಸಮುದಾಯದ ಜನರನ್ನು ಮತಾಂತರ ಮಾಡಲಾಗುತ್ತಿದೆ. ಕ್ರಿಶ್ಚಿಯನ್ ಧರ್ಮಕ್ಕೆ 40-50 ಕುಟುಂಬಗಳನ್ನು ಮತಾಂತರ ಮಾಡಲಾಗಿದೆ. ಜನರಿಂದ ಈ ಬಗ್ಗೆ ದೂರು ಕೂಡ ಬಂದಿದೆ ಎಂದು ಶಾಸಕ ಗೂಳಿಹಟ್ಟಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಈಗಾಗಲೇ ಮತಾಂತರದ ಬಗ್ಗೆ ಅನೇಕ ಕಡೆಗಳಲ್ಲಿ ದೂರುಗಳು ದಾಖಲಾಗಿವೆ. ಅವುಗಳು ಈ ಕೆಳಗಿನಂತಿವೆ. ಬೆಂಗಳೂರು: 70 ರಿಂದ 80 ಮಕ್ಕಳನ್ನು ಸೇರಿಸಿ ಕ್ರೈಸ್ತ ಪ್ರಾರ್ಥನೆ ಮಾಡಿದ ವಿಡಿಯೋ ವೈರಲ್ ಬೆಂಗಳೂರು:ನಗರದಲ್ಲಿ ಮತಾಂತರದ ಆರೋಪ ಕೇಳಿಬಂದಿದ್ದು, ಆರ್ಎಸ್ಎಸ್ (RSS) ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದಾರೆ. ನಾರಾಯಣಸ್ವಾಮಿ ಎಂಬುವವರ ಮನೆಯಲ್ಲಿ ಸುಮಾರು 70 ರಿಂದ 80 ಮಕ್ಕಳನ್ನು ಸೇರಿಸಿ ಕ್ರೈಸ್ತ ಪ್ರಾರ್ಥನೆ ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಈ ಕುರಿತು ಕಳೆದ ಭಾನುವಾರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಮತಾಂತರಕ್ಕೆ ಪ್ರಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.
ಆರ್ಎಸ್ಎಸ್ ಕಾರ್ಯಕರ್ತರಿಂದ ಮಾಹಿತಿ ಪಡೆದ ಬ್ಯಾಡರಹಳ್ಳಿ ಪೊಲೀಸರು, ನಾರಾಯಣಸ್ವಾಮಿ ಮನೆಗೆ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ಮಾಡಿದ್ದಾರೆ. ಕಳೆದ ಹತ್ತು ವರ್ಷದಿಂದ ಆ ಮನೆಯಲ್ಲಿ ಕೇವಲ ಪ್ರಾರ್ಥನೆ ಮಾಡಿದ್ದಾರಷ್ಟೇ. ಆದರೆ ಮತಾಂತರ ಮಾಡಿಲ್ಲವೆಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಕೊವಿಡ್ ನಿಯಮ ಉಲ್ಲಂಘಿಸಿ ಪ್ರಾರ್ಥನೆ ಹಿನ್ನೆಲೆ ನಾರಯಣಸ್ವಾಮಿ ವಿರುದ್ಧ ಎನ್ಡಿಎಮ್ಎ (NDMA) ಕೇಸ್ ದಾಖಲಿಸಲಾಗಿದೆ.
ಪ್ರಾರ್ಥನ ಮಂದಿರದ ಮೇಲೆ ಕ್ರಮಕ್ಕೆ ಈಗಾಗಲೇ ಬಿಬಿಎಂಪಿಗೆ ಮಾಹಿತಿ ನೀಡಲಾಗಿದೆ. ಅಲ್ಲದೇ ಪ್ರಾರ್ಥನೆ ನಡೆಸುತ್ತಿದ್ದ ಮನೆ ಮಾಲೀಕ ನಾರಾಯಣಸ್ವಾಮಿಗೆ ನೋಟಿಸ್ ನೀಡಲಾಗಿದೆ.
ಯಾದಗಿರಿ, ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಮತಾಂತರದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಅಲ್ಲಲ್ಲಿ ಮತಾಂತರದ ಘಟನೆಗಳು ನಡೆಯುತ್ತಿವೆ. ಇಂಥದ್ದಕ್ಕೆಲ್ಲ ಅವಕಾಶ ಕೊಡದಂತೆ ಡಿಸಿಗೆ ಸೂಚಿಸಲಾಗಿದೆ. ಬಲವಂತದ ಮತಾಂತರ ತಡೆಯಲು ಕಾನೂನು ತರುತ್ತೇವೆ ಎಂದು ಹೇಳಿದ್ದಾರೆ. ಈ ಹಿಂದೆಯೂ ಕಡೆ ಅನೇಕ ಕಡೆ ಮತಾಂತರದ ಆರೋಪ ಕೇಳಿ ಬಂದಿತ್ತು.
ಇದನ್ನೂ ಓದಿ: ಮತಾಂತರಕ್ಕೆ ಯತ್ನಿಸಿದ್ದ ನಾಲ್ವರ ವಿರುದ್ಧ ಎಫ್ಐಆರ್ ಪ್ರಕರಣ; ಪ್ರತಿದೂರು ನೀಡಲು ಮುಂದಾದ ಕ್ರೈಸ್ತ ಪಾದ್ರಿಗಳು
ಬೆಂಗಳೂರು: ಮತಾಂತರದ ಆರೋಪ; 70 ರಿಂದ 80 ಮಕ್ಕಳನ್ನು ಸೇರಿಸಿ ಕ್ರೈಸ್ತ ಪ್ರಾರ್ಥನೆ ಮಾಡಿದ ವಿಡಿಯೋ ವೈರಲ್
Published On - 7:54 am, Fri, 1 October 21