ಚಿತ್ರದುರ್ಗದಲ್ಲಿ ಅದ್ಧೂರಿ ಬಿಎಸ್​ವೈ ಅಭಿಮಾನೋತ್ಸವ: ಯಡಿಯೂರಪ್ಪರ 50 ವರ್ಷಗಳ ರಾಜಕೀಯ ಪಯಣ ಕೊಂಡಾಡಿದ ಅಮಿತ್​ ಶಾ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ 50 ವರ್ಷಗಳ ರಾಜಕೀಯ ಜೀವನ ಪೂರ್ಣ ಹಿನ್ನೆಲೆ ಚಿತ್ರದುರ್ಗದಲ್ಲಿ ಇಂದು ಬಿಎಸ್ ಯಡಿಯೂರಪ್ಪ ಅಭಿಮಾನೋತ್ಸವ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಯಡಿಯೂರಪ್ಪರನ್ನು ಹಾಡಿ ಹೊಗಳಿದರು. ಇನ್ನು ರಾಜ್ಯ ರಾಜಕೀಯ ನಾಯಕರು ಕೂಡ ಭಾಗವಹಿಸಿದ್ದರು.

ಚಿತ್ರದುರ್ಗದಲ್ಲಿ ಅದ್ಧೂರಿ ಬಿಎಸ್​ವೈ ಅಭಿಮಾನೋತ್ಸವ: ಯಡಿಯೂರಪ್ಪರ 50 ವರ್ಷಗಳ ರಾಜಕೀಯ ಪಯಣ ಕೊಂಡಾಡಿದ ಅಮಿತ್​ ಶಾ
ಯಡಿಯೂರಪ್ಪ, ಅಮಿತ್ ಶಾ
Image Credit source: tv9 kannada
Edited By:

Updated on: May 09, 2026 | 7:32 PM

ಚಿತ್ರದುರ್ಗ, ಮೇ 09: ರಾಜಕಾರಣದಲ್ಲಿ ಕೆಲವರು ನಿರ್ಮಿತ‌ ರಸ್ತೆಯಲ್ಲಿ ನಡೆಯುತ್ತಾರೆ. ಇನ್ನು ಕೆಲವರು ಖುದ್ದಾಗಿ ರಸ್ತೆ ನಿರ್ಮಾಣ‌ ಮಾಡಿ ಇತಿಹಾಸ ಸೃಷ್ಟಿಸುತ್ತಾರೆ. ದಕ್ಷಿಣ ಭಾರತದಲ್ಲಿ ಬಿಎಸ್​​ ಯಡಿಯೂರಪ್ಪ (BS Yediyurappa) ಹೆಸರು ಸುವರ್ಣಾಕ್ಷರದಲ್ಲಿ ಉಳಿಯಲಿದೆ. ರಾಜಕೀಯಕ್ಕೆ ಬರುವ ಯುವಕರು ಬಿಎಸ್​​ ಯಡಿಯೂರಪ್ಪ ಸಂಘರ್ಷ ಅರಿಯಿರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.

ಮುಖ್ಯಾಂಶಗಳು

  • ಚಿತ್ರದುರ್ಗದಲ್ಲಿಂದು ನಡೆದ ಅದ್ಧೂರಿ ಬಿಎಸ್​ವೈ ಅಭಿಮಾನೋತ್ಸವ
  • ಕೇಂದ್ರ ಗೃಹ ಸಚಿವ ಅಮಿತ್​ ಶಾ ಸೇರಿದಂತೆ ರಾಜ್ಯ ರಾಜಕೀಯ ನಾಯಕರು ಭಾಗಿ
  • ಬಿಎಸ್​​ ಯಡಿಯೂರಪ್ಪರನ್ನ ಕೊಂಡಾಡಿದ ಅಮಿತ್​ ಶಾ

ಬಿಎಸ್​ ಯಡಿಯೂರಪ್ಪರಿಂದ ಕಲಿಯುವುದು ಬಹಳಷ್ಟಿದೆ: ಅಮಿತ್​ ಶಾ

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ 50 ವರ್ಷಗಳ ರಾಜಕೀಯ ಜೀವನ ಪೂರ್ಣ ಹಿನ್ನೆಲೆ ಇಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಮಠದ ಸಮೀಪ ಬಿಎಸ್​ವೈ ಅಭಿಮಾನೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಇಚ್ಛಾಶಕ್ತಿ ಮತ್ತು ಸಂಘದ ಸಂಸ್ಕಾರ ಯಡಿಯೂರಪ್ಪ ಅವರ ವ್ಯಕ್ತಿತ್ವ ಎಂದರು.

ಇದನ್ನೂ ಓದಿ: ಬಿಎಸ್​​ವೈ ಅಭಿಮಾನೋತ್ಸವ: ಯಡಿಯೂರಪ್ಪ ಬರ್ತಿದ್ದಂತೆ ಕಾರ್ಯಕರ್ತರಿಂದ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ

ಶಿಕಾರಿಪುರದಿಂದ ಶಾಸಕರಾಗಿ ಸೇವೆ ಸಲ್ಲಿಸಿದ ಯಡಿಯೂರಪ್ಪ, ಬಸ್ ಸಿಗದಿದ್ದರೆ ಸೈಕಲ್ ಏರಿ ಇಡೀ ರಾಜ್ಯ ಸುತ್ತಿ ಪಕ್ಷ ಕಟ್ಟಿದ್ದಾರೆ. ರೈತರ ಮನದಲ್ಲಿ ಅವರು ಆಳವಾಗಿ ಬೇರೂರಿದ್ದಾರೆ. ಜನ ತಮ್ಮನ್ನು ಭೇಟಿಯಾದವರ ಬಗ್ಗೆ ಡೈರಿಯಲ್ಲಿ ಬರೆದುಕೊಳ್ಳುತ್ತಾರೆ. ಅವರಿಂದ ಕಲಿಯುವುದು ಬಹಳಷ್ಟಿದೆ ಎಂದು ಅಮಿತ್ ಶಾ ಶ್ಲಾಘಿಸಿದರು.

ರಾಜ್ಯದಲ್ಲಿ ಅನೇಕ ಕಡೆ ನಾನು ಹೋಗಿದ್ದೇನೆ. ಎಲ್ಲ ಕಡೆ ಯಡಿಯೂರಪ್ಪ ಅವರ ಕೆಲಸ-ಕಾರ್ಯಗಳು ದಾಖಲಾಗಿವೆ. ಸಂಗೊಳ್ಳಿ ರಾಯಣ್ಣ ಸಮಾಧಿ ಸ್ಥಳಕ್ಕೆ ನಾನು ಭೇಟಿ ನೀಡಿದ್ದೆ. ಆ ಸ್ಥಳದ ಬಗ್ಗೆ ಅಲ್ಲಿ ಸಂಪೂರ್ಣ ವಿವರಣೆ ದಾಖಲಾಗಿತ್ತು. ಅದನ್ನು ಬಿ.ಎಸ್​.ಯಡಿಯೂರಪ್ಪ ಮಾಡಿದ್ದಾರೆ. ಲಿಂಗಾಯತ, ದಲಿತ, ಒಬಿಸಿ ಸೇರಿದಂತೆ ಎಲ್ಲ ವರ್ಗಗಳ ಸೌಹಾರ್ದತೆಯೇ ಯಡಿಯೂರಪ್ಪ ಅವರ ಕೆಲಸ ಎಂದು ಅವರು ಬಣ್ಣಿಸಿದರು.

ಯಡಿಯೂರಪ್ಪರ ಜೀವನ ಸಂಘರ್ಷದಿಂದ ತುಂಬಿತ್ತು

ಯಡಿಯೂರಪ್ಪ ಅವರ 50 ವರ್ಷಗಳ ಸಾರ್ವಜನಿಕ ಜೀವನ ಸಂಘರ್ಷದಿಂದ ತುಂಬಿತ್ತು. ಅವರಷ್ಟು ಸಂಘರ್ಷದ ಜೀವನ ದಕ್ಷಿಣ ಭಾರತದಲ್ಲಿ ಯಾರೂ ಅನುಭವಿಸಿಲ್ಲ. ರೈತರ ಕಲ್ಯಾಣವೇ, ರಾಜ್ಯದ ಕಲ್ಯಾಣ ಎನ್ನುವ ಕೆಲಸ ಯಡಿಯೂರಪ್ಪ ಮಾಡಿದ್ದಾರೆ. ರೈತರ ಹೋರಾಟಕ್ಕೆ, ತುರ್ತು ಪರಿಸ್ಥಿತಿ ಸಂಧರ್ಭದಲ್ಲಿ ಜೈಲುವಾಸ ಅನುಭವಿಸಿದರು. ಯಡಿಯೂರಪ್ಪ ಅವರು ಇಲ್ಲದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟವಾಗುತ್ತಿತ್ತು. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆ ಮಾಡಿ ಡಿಸಿಎಂ ಮತ್ತು ಸಿಎಂ ಆದರು. ಇದೆಲ್ಲದರ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಹೀಗಾಗಿ ನಾನು ಅವರ ಭಾಷಣ ಸಂಪೂರ್ಣ ಕೇಳಿಸಿಕೊಂಡೇ ಹೋಗುತ್ತೇನೆ ಎಂದರು.

ವೀರ ಮದಕರಿ ನಾಯಕರ ಸ್ಮಾರಕ ಮಾಡೋಣ ಎಂದ ಅಮಿತ್​ ಶಾ 

ಇನ್ನು ಯಡಿಯೂರಪ್ಪ ಅವರ ಕಾರಣದಿಂದ ಇಂದು ಎಲ್ಲಾ ಮಠ ಮಂದಿರದ ಸ್ವಾಮೀಜಿಗಳು ಒಂದೇ ವೇದಿಕೆ ಮೇಲೆ ಯಾವುದೇ ಜಾತಿ ಭೇದ ಭಾವ ಇಲ್ಲದೇ ಸೇರಿದ್ದಾರೆ. ಎಲ್ಲರು ಕೂಡ ಶಿಕ್ಷಣ ಹಾಗೂ ಹಿಂದುತ್ವಕ್ಕೆ ಒತ್ತು ಕೊಟ್ಟಿದ್ದಾರೆ. ಇದು ಚಿತ್ರದುರ್ಗದ ವೀರ ಮದಕರಿ ನಾಯಕರು ಆಳಿದ ಜಾಗ, ಅವರ ಸ್ಮಾರಕ ನಾವು ಮಾಡೋಣ, ಪ್ರಧಾನಿ ಮೋದಿ ಇದ್ದಾರೆ. ಮದಕರಿ ನಾಯಕರು ಹೈದರ್ ಅಲಿಯನ್ನು ಯುದ್ಧದಲ್ಲಿ ಸೋಲಿಸಿದ್ದರು. ಇಲ್ಲಿ ಪ್ರತಿ ಮಹಿಳೆಗೂ ಓಬವ್ವ ಪ್ರೇರಣೆ. ನಾನು ಮನಸಾರೆ ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:23 pm, Sat, 9 May 26

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us