ಚಿತ್ರದುರ್ಗ ಜಿಲ್ಲಾಡಳಿತ ಭವನ ವಿವಾದ: ಉದ್ಘಾಟನೆ ಸಮಯದಲ್ಲೇ ಅವೈಜ್ಞಾನಿಕ ಕಟ್ಟಡವೆಂದು ರಿಜೆಕ್ಟ್

ಚಿತ್ರದುರ್ಗದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣದ ಕುರಿತು ವಿವಾದವೊಂದು ಸೃಷ್ಟಿಯಾಗಿದೆ. ಕಣಿವೆ ಪ್ರದೇಶದಲ್ಲಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಭವನ ಅವೈಜ್ಞಾನಿಕವೆಂದು ಜಿಲ್ಲಾಡಳಿತವೇ ತಿರಸ್ಕರಿಸಿದೆ. ಆ ಮೂಲಕ ಸರ್ಕಾರದ ಕೋಟ್ಯಂತರ ರೂ ಹಣವನ್ನು ನೀರಲ್ಲಿ ಹೋಮ ಮಾಡಿದಂತಾಗಿದೆ. ತೋಟಗಾರಿಕೆ ಇಲಾಖೆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಲು ಮುಂದಾಗಿರುವುದು ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಚಿತ್ರದುರ್ಗ ಜಿಲ್ಲಾಡಳಿತ ಭವನ ವಿವಾದ: ಉದ್ಘಾಟನೆ ಸಮಯದಲ್ಲೇ ಅವೈಜ್ಞಾನಿಕ ಕಟ್ಟಡವೆಂದು ರಿಜೆಕ್ಟ್
ಜಿಲ್ಲಾಡಳಿತ ಭವನ
Image Credit source: tv9 kannada
Edited By:

Updated on: Mar 01, 2026 | 6:48 PM

ಚಿತ್ರದುರ್ಗ, ಮಾರ್ಚ್​​ 01: ಚಿತ್ರದುರ್ಗದಲ್ಲಿ (Chitradurga) ನೂತನ ಜಿಲ್ಲಾಡಳಿತ ಭವನ ಆಗಬೇಕೆಂಬುದು ದುರ್ಗದ ಜನರ ಬಹು ಕಾಲದ ಕನಸು. ಹಾಗಾಗಿ ಕಣಿವೆ ಪ್ರದೇಶದಲ್ಲಿ ಜಿಲ್ಲಾಡಳಿತ ಭವನ ಕಟ್ಟಡವೇನೋ ನಿರ್ಮಾಣವಾಗಿದೆ. ಆದರ  ಉದ್ಘಾಟನೆಗೂ ಮುನ್ನವೇ ಅವೈಜ್ಞಾನಿಕ ಕಟ್ಟಡ ಎಂಬ ಕಾರಣಕ್ಕೆ ಜಿಲ್ಲಾಡಳಿತವೇ ತಿರಸ್ಕರಿಸಿ ಮಾಡಿದ್ದು, ಬೇರೆಡೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ಆ ಮೂಲಕ ಕೋಟ್ಯಂತರ ರೂ ನೀರಲ್ಲಿ ಹೋಮ ಮಾಡಿದಂತಾಗಿದೆ. ಸದ್ಯ ಹೊಸ ವಿವಾದವೊಂದು ಸೃಷ್ಟಿ ಆಗಿದೆ.

ಕೋಟೆನಾಡು ಚಿತ್ರದುರ್ಗದಲ್ಲಿ ಒಂದೇ ಸೂರಿನಡಿ ಎಲ್ಲಾ ಕಚೇರಿಗಳು ಇರುವಂತ ಜಿಲ್ಲಾಡಳಿತ ಭವನ ನಿರ್ಮಾಣ ಆಗಬೇಕೆಂಬುದು ದುರ್ಗದ ಜನರ ಬಹುಕಾಲದ ಕನಸು. ಅಂತೆಯೇ 2020-21ರಲ್ಲಿ ಚಿತ್ರದುರ್ಗ ಬಳಿಯ ಕಣಿವೆ ಪ್ರದೇಶದಲ್ಲಿ ಜಾಗ ಗುರುತಿಸಿ ಜಿಲ್ಲಾಡಳಿತ ಭವನ ಕಟ್ಟಡ ಶುರು ಮಾಡಲಾಗಿತ್ತು. ಆರೇಳು ತಿಂಗಳ ಹಿಂದೆ ಕಟ್ಟಡ ಪೂರ್ಣಗೊಂಡಿದ್ದರೂ ಉದ್ಘಾಟನೆ ಭಾಗ್ಯ ಮಾತ್ರ ಕಂಡಿಲ್ಲ.

ಇದನ್ನೂ ಓದಿ: ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ವಿಳಂಬ: ಸಿಡಿದೆದ್ದ ರೈತರಿಂದ ನಾಳೆ ಬಂದ್‌ಗೆ ಕರೆ

ಅವೈಜ್ಞಾನಿಕ ಕಟ್ಟಡ, ಸೂಕ್ತ ಮೂಲಕ ಸೌಕರ್ಯಗಳ ಕೊರತೆ ಹಾಗೂ ನಗರದಿಂದ ಮೂರ್ನಾಲ್ಕು ಕಿ.ಮೀ ದೂರ ಎನ್ನುವ ಕಾರಣಕ್ಕೆ ಜಿಲ್ಲಾಡಳಿತವೇ ರಿಜೆಕ್ಟ್ ಮಾಡಿದೆ. ಉಸ್ತುವಾರಿ ಸಚಿವ ಡಿ ಸುಧಾಕರ್, ಶಾಸಕ ಕೆಸಿ ವಿರೇಂದ್ರ ಪಪ್ಪಿ ನಿರ್ಮಾಣವಾದ ಕಟ್ಟಡ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಬಿಟ್ಟುಕೊಡಲು ನಿರ್ಧರಿಸಿದ್ದು, ಈಗಾಗಲೇ ಹಸ್ತಾಂತರಿಸಿದ್ದಾರೆ. ಚಿತ್ರದುರ್ಗ ನಗರದಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿ ಜಾಗದಲ್ಲಿ ಆರು ಎಕರೆ ಪ್ರದೇಶದಲ್ಲಿ ಹೊಸ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಪ್ಲ್ಯಾನ್​​ ಮಾಡಲಾಗಿದ್ದು, ತೋಟಗಾರಿಕೆ ಇಲಾಖೆ ಸಚಿವ ಎಸ್​​.ಎಸ್ ಮಲ್ಲಿಕಾರ್ಜುನ್​​​ ಕೂಡ ಸೈ ಎಂದಿದ್ದಾರೆ.

ಪರಿಸರ ಪ್ರಿಯರು ಹಾಗೂ ಬಿಜೆಪಿ ನಾಯಕರು ವಿರೋಧ

ಇನ್ನು ದುರ್ಗದ ಪರಿಸರ ಪ್ರಿಯರು ಹಾಗೂ ಬಿಜೆಪಿ ನಾಯಕರು ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ತೋಟಗಾರಿಕೆ ಇಲಾಖೆ ಪ್ರದೇಶದಲ್ಲಿ ನೂರಾರು ಗಿಡ ಮರಗಳಿವೆ, ಸಸಿಗಳನ್ನು ಬೆಳೆಸಲಾಗುತ್ತದೆ. ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಅಲ್ಲದೆ ರೈತರಿಗೆ ಅನುಕೂಲಕರವಾಗಿದೆ. ಆರು ಎಕರೆಯಷ್ಟು ಪ್ರದೇಶದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ ಸರಿಯಲ್ಲ. ಕಟ್ಟಡ ನಿರ್ಮಾಣಕ್ಕಾಗಿ ಗಿಡ ಮರಗಳಿಗೆ ಕೊಡಲಿ ಪೆಟ್ಟು ನೀಡಬೇಕಾಗುತ್ತದೆ. ಪರಿಸರ ಹಾನಿ ಮಾಡಿ ಕಟ್ಟಡ ನಿರ್ಮಾಣ ಅಗತ್ಯವಿಲ್ಲ ಎಂದಿದ್ದಾರೆ.

ಸಂಸದ ಗೋವಿಂದ ಕಾರಜೋಳ ಹೇಳಿದ್ದಿಷ್ಟು 

ಅಲ್ಲದೆ ಮುಂದಿನ 50 ವರ್ಷದ ಪ್ಲ್ಯಾನ್​ ಇಟ್ಟುಕೊಂಡು ಸೂಕ್ತ ಸ್ಥಳದಲ್ಲಿ ವಿಶಾಲವಾದ ಕಟ್ಟಡ ನಿರ್ಮಿಸಬೇಕು. ಈಗಾಗಲೇ ಹತ್ತಾರು ಕೋಟಿ ರೂ ಖರ್ಚು ಮಾಡಿ ಕಣಿವೆ ಪ್ರದೇಶದಲ್ಲಿ ನಿರ್ಮಿಸಲಾದ ಜಿಲ್ಲಾಡಳಿತ ಭವನ ಕಟ್ಟಡವನ್ನೇ ಬಳಸಬೇಕು. ಆಡಳಿತ ಭವನ ಮೆಡಿಕಲ್ ಕಾಲೇಜಿಗೆ ಸೂಕ್ತ ಆಗದು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದಲ್ಲೊಂದು ವಿಶೇಷ ಗ್ರಾಮ: ಮಾರಮ್ಮ ಜಾತ್ರೆಗೆ ಪ್ರತಿ ರಸ್ತೆಗೆ ಮುಳ್ಳಿನ ಬೇಲಿ ಹಾಕಿ ದಿಗ್ಭಂಧನ

ಒಟ್ಟಾರೆ ಚಿತ್ರದುರ್ಗ ನಗರದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ ಈಗ ವಿವಾದ ಸೃಷ್ಟಿಸಿದೆ. ಜಿಲ್ಲಾಡಳಿತ, ಸರ್ಕಾರ ಮತ್ತು ಅಧಿಕಾರಿಗಳು ಸೂಕ್ತ ಪ್ಲ್ಯಾನ್​ ಇಲ್ಲದೆ ಹತ್ತಾರು ಕೋಟಿ ರೂ ವೆಚ್ಚದಲ್ಲಿ ಈಗಾಗಲೇ ಕಣಿವೆ ಬಳಿ ಕಟ್ಟಡ ನಿರ್ಮಿಸಿದ್ದಾರೆ. ಕಟ್ಟಡ ನಿರ್ಮಾಣದ ಬಳಿಕ ರಿಜೆಕ್ಟ್ ಮಾಡುತ್ತಿರುವುದು ವಿವಾದ ಹುಟ್ಟುಹಾಕಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ಕೊನೆಯದಾಗಿ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:43 pm, Sun, 1 March 26

Follow Us