ಚಿತ್ರದುರ್ಗ ಭೀಕರ ಬಸ್ ಅಪಘಾತ: ಮೃತಪಟ್ಟ ಪ್ರಯಾಣಿಕರಲ್ಲಿ ಗೋಕರ್ಣದವರೇ ಹೆಚ್ಚು
ಚಿತ್ರದುರ್ಗದ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 9 ಮಂದಿ ಸಜೀವ ದಹನವಾಗಿದ್ದಾರೆ. ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಸ್ಲೀಪರ್ ಬಸ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಮೃತರಲ್ಲಿ ಹೆಚ್ಚಿನವರು ಗೋಕರ್ಣದ ಪ್ರಯಾಣಿಕರು ಎನ್ನಲಾಗಿದೆ. ಗಾಯಾಳುಗಳನ್ನು ರಕ್ಷಿಸಲಾಗಿದೆ.

ಚಿತ್ರದುರ್ಗ, ಡಿಸೆಂಬರ್ 25: ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ನಸುಕಿನ 3 ಗಂಟೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Bus Accident) ಕನಿಷ್ಠ 9 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಸೀಬರ್ಡ್ ಸ್ಲೀಪರ್ ಕೋಚ್ ಬಸ್‌ಗೆ, ಎದುರಿನಿಂದ ಬರುತ್ತಿದ್ದ ಕಂಟೇನರ್ ಲಾರಿ ಡಿವೈಡರ್ ಹಾರಿ ಬಂದು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಲಾರಿ ಡಿಕ್ಕಿ ಹೊಡೆದ ತಕ್ಷಣ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬಸ್ನಲ್ಲಿದ್ದವರ ಪೈಕಿ ಹೆಚ್ಚಿನವರು ಗೋಕರ್ಣದವರಾಗಿದ್ದು, ಹೀಗಾಗಿ ಮೃತಪಟ್ಟವರಲ್ಲಿ ಹೆಚ್ಚಿನವರು ಅಲ್ಲಿನವರೇ ಇರಬಹುದು ಎಂದು ಶಂಕಿಸಲಾಗಿದೆ.
ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಹೊರಟಿದ್ದ ಖಾಸಗಿ ಸೀಬರ್ಡ್ ಸ್ಲೀಪರ್ ಬಸ್, ಶಿವಮೊಗ್ಗ ಮತ್ತು ಹೊನ್ನಾವರ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ತೆರಳುತ್ತಿತ್ತು. 32 ಆಸನ ಸಾಮರ್ಥ್ಯದ ಬಸ್‌ನಲ್ಲಿ 29 ಆಸನಗಳು ಕಾಯ್ದಿರಿಸಲಾಗಿದ್ದು, 25 ಪ್ರಯಾಣಿಕರು ಗೋಕರ್ಣಕ್ಕೆ, ಇಬ್ಬರು ಕುಮಟಾಕ್ಕೆ ಮತ್ತು ಇಬ್ಬರು ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದರು. ಅಪಘಾತದ ಮಾಹಿತಿ ದೊರೆತ ತಕ್ಷಣ ಚಿತ್ರದುರ್ಗ ಜಿಲ್ಲೆಯ ಡಿವೈಎಸ್ಪಿ ಶಿವಕುಮಾರ್, ರೂರಲ್ ಇನ್ಸ್‌ಪೆಕ್ಟರ್ ಆನಂದ್, ಇನ್ಸ್‌ಪೆಕ್ಟರ್ ಗುಂಡಪ್ಪ, ಹಾಗೂ ಚಿತ್ರದುರ್ಗ ಎಸ್.ಪಿ. ರಣದೀಪ್ ಮಂಡಾರು ಮತ್ತು ತುಮಕೂರಿನ ಎಸ್.ಪಿ. ಅಶೋಕ್ ಸ್ಥಳಕ್ಕೆ ದಾವಿಸಿ ರಕ್ಷಣಾ ಕಾರ್ಯಗಳನ್ನು ನಡೆಸಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿದರು. 9 ಮಂದಿ ಗಾಯಾಳುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳನ್ನು ಹಿರಿಯೂರು, ಶಿರಾಗೆ ಸಮೀಪದ ಆಸ್ಪತ್ರೆಗಳಿಗೆ ಹಾಗೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಿಸಲ್ಪಟ್ಟವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ 30 ಕಿಲೋಮೀಟರ್ ಟ್ರಾಫಿಕ್ ಜಾಮ್
ದುರಂತ ಸಂಭವಿಸಿದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸುಮಾರು 30 ಕಿಲೋಮೀಟರ್‌ಗಳಷ್ಟು ಉದ್ದಕ್ಕೆ ಸಂಚಾರ ದಟ್ಟಣೆ ಉಂಟಾಗಿದೆ. ಮುಂಬೈಗೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಬೆಂಕಿ ನಂದಿಸುವ ಕಾರ್ಯಾಚರಣೆ ಮತ್ತು ಸುಟ್ಟು ಕರಕಲಾದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಭರದಿಂದ ಸಾಗಿದೆ. ಮೃತದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಗುರುತು ಪತ್ತೆ ಹಚ್ಚುವುದು ಕಷ್ಟಕರವಾಗಿದೆ. ಘಟನೆಗೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮತ್ತೊಂದು ಘನಘೋರ ದುರಂತ: ಚಿತ್ರದುರ್ಗ ಹೆದ್ದಾರಿಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್, 17ಕ್ಕೂ ಹೆಚ್ಚು ಜನ ಸಜೀವ ದಹನ
ಬಸ್‌ನಲ್ಲಿ 15 ಮಹಿಳೆಯರು ಹಾಗೂ 14 ಪುರುಷರು ಪ್ರಯಾಣಿಸುತ್ತಿದ್ದ ಮಾಹಿತಿ ದೊರೆತಿದೆ. ಮಂಜುನಾಥ್, ಸಂಧ್ಯಾ, ಶಶಾಂಕ್, ದಿಲೀಪ್, ಪ್ರೀತೀಶ್ವರನ್, ವಿ.ಬಿಂದು, ಕೆ.ಕವಿತಾ, ಅನಿರುದ್ಧ್ ಬೆನರ್ಜಿ, ಅಮೃತಾ, ಇಶಾ, ಸೂರಜ್, ಮಾನಸ, ಮಿಲನಾ, ಹೇಮರಾಜ್ಕುಮಾರ್, ಕಲ್ಪನಾ ಪ್ರಜಾಪತಿ, ಎಂ.ಶಶಿಕಾಂತ್, ವಿಜಯ್ ಭಂಡಾರಿ, ನವ್ಯಾ, ಅಭಿಷೇಕ್, ಹೆಚ್.ಕಿರಣ್ ಪಾಲ್, ಎಂ.ಕೀರ್ತನ್, ಜಿ.ನಂದಿತಾ, ಹೆಚ್.ದೇವಿಕಾ, ಮೇಘರಾಜ್, ಎಸ್.ಎನ್.ಮಸ್ರತ್ಉನ್ನೀಸಾ, ಸಯಿದ್ ಜಮೀರ್ ಗೌಸ್, ಎಸ್ಗಗನಶ್ರೀ, ರಶ್ಮಿ ಮಹಲೆ, ಆರ್.ರಕ್ಷಿತಾ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದವರು ಎನ್ನಲಾಗಿದೆ. ಮೃತರ ಗುರುತು ಪತ್ತೆ ಕಾರ್ಯ ಇನ್ನಷ್ಟೇ ಆಗಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:15 am, Thu, 25 December 25



