ಉದ್ಯಮಿಗೆ ಬೆದರಿಸಿ ಹಣ ಸುಲಿಗೆ: ಚಿತ್ರದುರ್ಗ ನಗರಸಭೆ ಮಾಜಿ ಸದಸ್ಯ ಅಂದರ್, ಮತ್ತೋರ್ವ ವಶಕ್ಕೆ

ಪುಣೆ ಮೂಲದ ಉದ್ಯಮಿಗೆ ಬೆದರಿಸಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಚಿತ್ರದುರ್ಗ ನಗರಸಭೆ ಮಾಜಿ ಸದಸ್ಯನನ್ನು ಬಂಧಿಸಲಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಆಮಿಷವೊಡ್ಡಿ ಉದ್ಯಮಿಯೋರ್ವರಿಂದ ಹಣ ಪಡೆದು ನಂತರ ಬೆದರಿಸಲಾಗಿತ್ತು. ಹಲವು ವಂಚನೆ ಪ್ರಕರಣಗಳಲ್ಲಿ ಆರೋಪಿ ಈ ಹಿಂದೆ ಜೈಲಿಗೆ ಹೋಗಿ ಬಂದಿದ್ದರೂ ಬುದ್ಧಿ ಕಲಿಯದೆ ಹಳೇ ಚಾಳಿ ಮುಂದುವರಿಸಿದ್ದ. ಈತನ ಕೃತ್ಯಕ್ಕೆ ಮಂಗಳೂರಿನ ಕುಖ್ಯಾತ ವಂಚಕನೊಬ್ಬ ಕೂಡ ಸಾಥ್​​ ನೀಡಿದ್ದು, ಆತನನ್ನೂ ವಶಕ್ಕೆ ಪಡೆಯಲಾಗಿದೆ.

ಉದ್ಯಮಿಗೆ ಬೆದರಿಸಿ ಹಣ ಸುಲಿಗೆ: ಚಿತ್ರದುರ್ಗ ನಗರಸಭೆ ಮಾಜಿ ಸದಸ್ಯ ಅಂದರ್, ಮತ್ತೋರ್ವ ವಶಕ್ಕೆ
ಆರೋಪಿಗಳಾದ ಚಂದ್ರಶೇಖರ್ ಮತ್ತು ರೋಷನ್​​ ಸಾಲ್ಡಾನ
Image Credit source: Tv9 Kannada
Edited By:

Updated on: Apr 08, 2026 | 7:23 PM

ಚಿತ್ರದುರ್ಗ, ಏಪ್ರಿಲ್​​ 08: ​​ಮಹಾರಾಷ್ಟ್ರದ ಪುಣೆ ಮೂಲದ ಉದ್ಯಮಿಯಿಂದ ಹಣ ಸುಲಿಗೆ ಮಾಡಿದ ಪ್ರಕರಣ ಸಂಬಂಧ ಚಿತ್ರದುರ್ಗ ಪೊಲೀಸರು ನಗರಸಭೆಯ ಮಾಜಿ ಸದಸ್ಯ ಚಂದ್ರಶೇಖರ್ ಅಲಿಯಾಸ್ ಖೋಟಾ ನೋಟು ಚಂದ್ರನನ್ನು ಬಂಧಿಸಿದ್ದಾರೆ. ಈತನಿಗ ಸಾಥ್​​ ನೀಡಿದ್ದ ಮಂಗಳೂರು ಮೂಲದ ಕುಖ್ಯಾತ ವಂಚಕ ರೋಷನ್ ಸಾಲ್ಡಾನ ಎಂಬಾತನನ್ನೂ ವಶಕ್ಕೆ ಪಡೆಯಲಾಗಿದ್ದು, ಆರೋಪಿ ಚಂದ್ರನಿಗೆ ಸಂಬಂಧಿತ ಬ್ಯಾಂಕ್ ಅಕೌಂಟ್​​ನಲ್ಲಿದ್ದ 50 ಲಕ್ಷ ರೂಪಾಯಿ ಹಣವನ್ನು ಫ್ರೀಜ್ ಮಾಡಿಸಲಾಗಿದೆ. ಆ ಮೂಲಕ ರಾಜ್ಯ, ಹೊರರಾಜ್ಯದ ಉದ್ಯಮಿಗಳಿಗೆ ವಂಚಿಸುತ್ತಿದ್ದ ಜಾಲ ಬೇಧಿಸಿರುವ ಪೊಲೀಸರು, ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಚಿತ್ರದುರ್ಗ ನಗರಸಭೆಗೆ ಸತತ ಎರಡು ಸಲ ಜೆಡಿಎಸ್​​ನಿಂದ ಸದಸ್ಯನಾಗಿ ಆಯ್ಕೆ ಆಗಿದ್ದ ಚಂದ್ರಶೇಖ ಅಸಲಿ ದಂಧೆಯೇ ವಂಚನೆ. ಖೋಟಾ ನೋಟು, ಹಣ ಡಬ್ಲಿಂಗ್ ದಂಧೆಯ ಕಿಂಗ್ ಪಿನ್ ಆಗಿರುವ ಈ ಚಂದ್ರ, ಅನೇಕ ಪ್ರಕರಣಗಳ ಆರೋಪಿ ಕೂಡ ಹೌದು. ಇದೇ ವಿಚಾರವಾಗಿ ಅನೇಕ ಸಲ ಜೈಲಿಗೆ ಹೋಗಿ ಬಂದರೂ ಈತ ತನ್ನ ಕರಾಳ ದಂಧೆ ಮಾತ್ರ ಬಿಟ್ಟಿರಲಿಲ್ಲ. ಇದೀಗ ಹೊಸ ರೀತಿಯ ವಂಚನೆಗೆ ಮುಂದಾಗಿದ್ದ ಆರೋಪಿ, ಕಡಿಮೆ ಬಡ್ಡಿ ದರದಲ್ಲಿ ಕೋಟಿಗಟ್ಟಲೆ ಹಣ ಸಾಲ ನೀಡುವುದಾಗಿ ನಂಬಿಸಿ ಉದ್ಯಮಿಗಳನ್ನು ಬುಟ್ಟಿಗೆ ಬೀಳಿಸುತ್ತಿದ್ದ. ವರ್ಷಕ್ಕೆ ಶೇ.3ರ ಬಡ್ಡಿ ದರದಲ್ಲಿ ಐವತ್ತು ಕೋಟಿ, ನೂರು ಕೋಟಿ ಫೈನಾನ್ಸ್ ನೀಡುವುದಾಗಿ ನಂಬಿಸಲು ಏಜಂಟರನ್ನೇ ನೇಮಿಸಿಕೊಂಡಿದ್ದ.

ಇದನ್ನೂ ಓದಿ: ನಾಪತ್ತೆಯಾಗಿದ್ದ ಕಾಂಗ್ರೆಸ್​​ ಮುಖಂಡ ಶವವಾಗಿ ಪತ್ತೆ; ನಡೀತಾ ಭೀಕರ ಕೊಲೆ?

ಇನ್ನು ಇದೇ ರೀತಿ ಪುಣೆ ಮೂಲದ ಉದ್ಯಮಿ ಗುರುರಾಜ್ ಚರಂತಿಮಠ ಎಂಬುವರಿಗೆ ಕರೆ ಮಾಡಿದ್ದ ಈತನ ಸಹಚರ ರೋಷನ್ ಸಾಲ್ಡಾನ, ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿದ್ದ. 52 ಕೋಟಿ ರೂ.ಫೈನಾನ್ಸ್ ಮಾಡಲು ಕಾಗದಪತ್ರ ಮತ್ತು ಭದ್ರತೆಗಾಗಿ 75 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ. ಅದರಂತೆ 50 ಲಕ್ಷ ರೂಪಾಯಿಯನ್ನು RTGS ಮೂಲಕ ಗುರುರಾಜ್​​ ನೀಡಿದ್ದರು. ಬಳಿಕ 25 ಲಕ್ಷ ರೂಪಾಯಿ ನಗದು ನೀಡಲೆಂದು ಆಗಮಿಸಿದವರನ್ನು ಚಿತ್ರದುರ್ಗದ ಕೋಟೆ ರಸ್ತೆಯಲ್ಲಿರುವ ಚಂದ್ರಶೇಖರ್ ಮನೆಗೆ ಕರೆಸಿಕೊಳ್ಳಲಾಗಿತ್ತು. ಅಲ್ಲಿ ಚಾಕು ತೋರಿಸಿ ಬೆದರಿಸಿದ್ದ ಆರೋಪಿಗಳು ಹಣ ಕಿತ್ತುಕೊಂಡು ಕಳುಹಿಸಿದ್ದರು. 2023ರ ಮೇ ತಿಂಗಳ 26ರಂದು ಈ ಘಟನೆ ನಡೆದಿತ್ತಾದ್ದರೂ ನಿನ್ನೆ ಅಂದರೆ 2026ರ ಏಪ್ರಿಲ್​​ 07ರಂದು ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us