ಕೃಷಿ ಜೊತೆಗೆ ಉಪಕಸಬುಗಳಿಂದ ಭರ್ಜರಿ ಲಾಭ: ಜೇನು ಕೃಷಿ ಮಾಡುವ ಮೂಲಕ ಮಾದರಿಯಾದ ಚಿತ್ರದುರ್ಗ ರೈತ
ಚಿತ್ರದುರ್ಗದಲ್ಲಿ ಕೃಷಿಯ ಜತೆಗೆ ಉಪಕಸಬುಗಳ ಮೂಲಕ ಭರ್ಜರಿ ಲಾಭವೂ ಗಳಿಸಬಹುದು ಎಂಬುದಕ್ಕೆ ರೈತರೊಬ್ಬರು ಮಾದರಿ ಆಗಿದ್ದಾರೆ.
ಚಿತ್ರದುರ್ಗ: ಬಯಲುಸೀಮೆಯ ಚಿತ್ರದುರ್ಗ ಜಿಲ್ಲೆಯಲ್ಲಿ ಅನೇಕ ರೈತರು (farmer) ಕೃಷಿಯಿಂದ ಕೈಸುಟ್ಟುಕೊಳ್ಳುತ್ತಾರೆ. ಆದ್ರೆ, ಕೃಷಿಯ ಜತೆಗೆ ಉಪಕಸಬುಗಳ ಮೂಲಕ ಭರ್ಜರಿ ಲಾಭವೂ ಗಳಿಸಬಹುದು ಎಂಬುದಕ್ಕೆ ರೈತರೊಬ್ಬರು ಮಾದರಿ ಆಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕುಡಿನೀರಕಟ್ಟೆ ಗ್ರಾಮದ ರೈತ ಮಂಜುನಾಥ್ ಸಹ ಜಿಲ್ಲೆಯ ಬಹುತೇಕ ರೈತರಂತೆ ಇತರೆ ಕೃಷಿ ಕಾಯಕದಲ್ಲಿ ಆರಂಭದಲ್ಲಿ ಕೈಸುಟ್ಟುಕೊಂಡಿದ್ದರು. ಹೀಗಾಗಿ, ಅಡಿಕೆ, ತೆಂಗು ಜತೆಗೆ ಮಿಶ್ರ ಕೃಷಿ ಕೈಗೊಂಡಿದ್ದಾರೆ. ಪಪ್ಪಾಯಿ, ಸೀಬೆ, ಸೀತಾಫಲ, ರಾಮಫಲ ಸೇರಿದಂತೆ ಇತರೆ ತೋಟಗಾರಿಕೆ ಬೆಳೆ ಬೆಳೆದಿದ್ದಾರೆ. ಅಂತೆಯೇ ಕೃಷಿಗೂ ಉಪಯೋಗ ಮತ್ತು ಕೈತುಂಬ ಕಾಸು ಗಳಿಕೆಯ ಜೇನು ಕೃಷಿಯನ್ನೂ ಕೈಗೆತ್ತಿಕೊಂಡಿದ್ದಾರೆ.
ಕಳೆದ ಮೂರು ವರ್ಷದಿಂದ ತೋಟದ ಮನೆಯ ಟೆರೇಸಿನ ಮೇಲೆ ಮತ್ತು ಗೋಡೆಗಳಿಗೆ ಜೇನು ಸಾಕಣೆಯ ಬಾಕ್ಸ್ ಫಿಟ್ ಮಾಡುವ ಮೂಲಕ ವಿಶೇಷವಾಗಿ ಜೇನು ಕೃಷಿಯಲ್ಲಿ ತೊಡಗಿದ್ದಾರೆ. ಆ ಮೂಲಕ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದೇವೆ. ಜೇನು ಕೃಷಿಗೆ ಹೆಚ್ಚಿನ ಶ್ರಮ ಬೇಕಾಗಲ್ಲ. ಉಪಾಯದಿಂದ ಕೆಲಸ ಮಾಡಿದರೆ ತೋಟದಲ್ಲಿನ ಇತರೆ ಬೆಳೆಗೂ ಜೇನು ಸಾಕಣೆಯಿಂದ ಅನುಕೂಲ ಆಗುತ್ತದೆ. ಅಂತೆಯೇ ಸಾಕಷ್ಟು ಹಣವೂ ಗಳಿಕೆ ಆಗುತ್ತದೆ ಅಂತಾರೆ ರೈತ ಮಂಜುನಾಥ್.
ಇದನ್ನೂ ಓದಿ: ಕೋಟೆನಾಡಿನಲ್ಲಿ ಅದ್ದೂರಿಯಾಗಿ ನಡೆದ ಬುಡಕಟ್ಟು ಸಂಸ್ಕೃತಿ ಉತ್ಸವದ ಝಲಕ್ ಇಲ್ಲಿದೆ ನೋಡಿ
ಇನ್ನು ರೈತ ಮಂಜುನಾಥ್ ಅವರ ಮಿಶ್ರ ಕೃಷಿ ಹಾಗೂ ಜೇನು ಕೃಷಿಯ ಉಪ ಕಸುಬು ವೀಕ್ಷಣೆಗೆ ಅನೇಕ ರೈತರು ತೋಟಕ್ಕೆ ಭೇಟಿ ನೀಡುತ್ತಾರೆ. ತೋಟದ ಮನೆ ಬಳಸಿಕೊಂಡು ಜೇನು ಸಾಕಣೆ ಮಾಡಿದ್ದು ಜೇನು ಉತ್ಪನ್ನಗಳ ಮೂಲಕ ಜಿಲ್ಲೆಯಲ್ಲೇ ರೈತ ಮಂಜುನಾಥ್ ಹೆಸರಾಗಿದ್ದಾರೆ. ಅಂತೆಯೇ ಈ ಜೇನು ಸಾಕಣೆಯಿಂದಾಗಿ ತೋಟದಲ್ಲಿನ ಇತರೆ ಬೆಳೆಗಳ ಇಳುವರಿ ಶೇ.10ರಷ್ಟು ಹೆಚ್ಚಾಗಿದೆ ಅಂತಾರೆ ಇವ್ರು.
ಇದನ್ನೂ ಓದಿ: Chitradurga: 32 ವರ್ಷಗಳ ಬಳಿಕ ಕೋಟೆನಾಡಲ್ಲಿ ವಿಶೇಷ ಜಾತ್ರೆ ಸಂಭ್ರಮ, ಇಡೀ ಊರಲ್ಲಿ ಪಾದರಕ್ಷೆ ನಿಷೇಧ
ಒಟ್ಟಾರೆಯಾಗಿ ಕೈಕೆಸರಾದರೆ ಬಾಯಿ ಮೊಸರು ಎಂಬ ಮಾತಿಲ್ಲ ಸತ್ಯವಾಗಿದೆ. ರೈತ ಮಂಜುನಾಥ್ ಕುಟುಂಬದ ಪರಿಶ್ರಮ ಸಾರ್ಥಕವಾಗಿದೆ. ರೈತ ಮಂಜುನಾಥ್ ಬಯಲು ಸೀಮೆಯ ರೈತರ ಪಾಲಿಗೆ ಮಾದರಿ ರೈತರಾಗಿದ್ದು ಅನೇಕ ರೈತರಿಗೆ ಸ್ಪೂರ್ತಿಯ ಚಿಲುಮೆ ಆಗಿದ್ದಾರೆಂದರೆ ಅತಿಶಯೋಕ್ತಿ ಆಗದು.
ವರದಿ: ಬಸವರಾಜ ಮುದನೂರ್, tv9, ಚಿತ್ರದುರ್ಗ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.