ಕೊರೊನಮ್ಮ ತೊಲಗಮ್ಮ: ಕೊರೊನಾ ಮುಕ್ತಿಗೆ ಕೋಟೆನಾಡಿನಲ್ಲಿ ವಿಶಿಷ್ಟ ಆಚರಣೆ
ಚಿತ್ರದುರ್ಗ: ಮಹಾಮಾರಿ ಕೊರೊನಾ ವ್ಯಾಪಕವಾಗಿ ಹರಡುತ್ತಲೇ ಸಾಗಿದ್ದು ಜನರಲ್ಲಿ ಭಾರೀ ಆತಂಕ ಮೂಡಿಸಿದೆ. ಕೊರೊನಾ ವೈರಸ್ನಿಂದ ಮುಕ್ತಿಗಾಗಿ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಜನ ಕೊರೊನಮ್ಮ ಆಚರಣೆಯ ಮೊರೆ ಹೋಗಿದ್ದಾರೆ. ಕೆಲ ಗ್ರಾಮೀಣ ಪ್ರದೇಶದಲ್ಲಿ, ಹಟ್ಟಿಗಳಲ್ಲಿ ಸಾಂಪ್ರದಾಯಿಕ ಆಚರಣೆ ಮೂಲಕ ಕೊರೊನಮ್ಮ ತೊಲಗಮ್ಮ ಎಂದು ವಿಶಿಷ್ಟ ಆಚರಣೆ ಮಾಡಲಾಗುತ್ತಿದೆ. ಗ್ರಾಮೀಣ ಜನರ ವಿಶಿಷ್ಟ ಪೂಜೆ: ಚಿತ್ರದುರ್ಗ ತಾಲೂಕಿನ ಚಿಕ್ಕಪ್ಪನಹಳ್ಳಿ, ಚಳ್ಳಕೆರೆ ತಾಲೂಕಿನ ಎತ್ತಿನಗೌಡರಹಟ್ಟಿ, ದೊರೆಹಟ್ಟಿ ಸೇರಿದಂತೆ ಕೆಲ ಗ್ರಾಮ, ಹಟ್ಟಿಗಳಲ್ಲಿ ಪ್ರತಿ ವಾರ ಒಂದೊಂದು ಹಟ್ಟಿಗಳಲ್ಲಿ ಕೊರೊನಾ ದೇವಿಗೆ […]

ಚಿತ್ರದುರ್ಗ: ಮಹಾಮಾರಿ ಕೊರೊನಾ ವ್ಯಾಪಕವಾಗಿ ಹರಡುತ್ತಲೇ ಸಾಗಿದ್ದು ಜನರಲ್ಲಿ ಭಾರೀ ಆತಂಕ ಮೂಡಿಸಿದೆ. ಕೊರೊನಾ ವೈರಸ್ನಿಂದ ಮುಕ್ತಿಗಾಗಿ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಜನ ಕೊರೊನಮ್ಮ ಆಚರಣೆಯ ಮೊರೆ ಹೋಗಿದ್ದಾರೆ. ಕೆಲ ಗ್ರಾಮೀಣ ಪ್ರದೇಶದಲ್ಲಿ, ಹಟ್ಟಿಗಳಲ್ಲಿ ಸಾಂಪ್ರದಾಯಿಕ ಆಚರಣೆ ಮೂಲಕ ಕೊರೊನಮ್ಮ ತೊಲಗಮ್ಮ ಎಂದು ವಿಶಿಷ್ಟ ಆಚರಣೆ ಮಾಡಲಾಗುತ್ತಿದೆ.
ಗ್ರಾಮೀಣ ಜನರ ವಿಶಿಷ್ಟ ಪೂಜೆ: ಚಿತ್ರದುರ್ಗ ತಾಲೂಕಿನ ಚಿಕ್ಕಪ್ಪನಹಳ್ಳಿ, ಚಳ್ಳಕೆರೆ ತಾಲೂಕಿನ ಎತ್ತಿನಗೌಡರಹಟ್ಟಿ, ದೊರೆಹಟ್ಟಿ ಸೇರಿದಂತೆ ಕೆಲ ಗ್ರಾಮ, ಹಟ್ಟಿಗಳಲ್ಲಿ ಪ್ರತಿ ವಾರ ಒಂದೊಂದು ಹಟ್ಟಿಗಳಲ್ಲಿ ಕೊರೊನಾ ದೇವಿಗೆ ವಿಶಿಷ್ಟ ಪೂಜೆ ಸಲ್ಲಿಸಲಾಗುತ್ತಿದೆ. ಈ ಹಿಂದೆ ಮಲೇರಿಯಾ, ಪ್ಲೇಗ್ನಂಥ ಭೀಕರ ಕಾಯಿಲೆಗಳು ಹರಡಿದ್ದ ಸಂದರ್ಭದಲ್ಲೂ ಸಹ ಪುರಾತನರು ಮಾರಿ ಆಚರಣೆ ಮಾಡುವ ಮೂಲಕ ಕಂಟಕ ನಿವಾರಣೆ ಕಂಡುಕೊಂಡಿದ್ದರುಎಂಬುದು ಗ್ರಾಮೀಣ ಭಾಗದ ಜನರ ನಂಬಿಕೆ ಆಗಿದೆ.
ಭೀಕರ ಬರಗಾಲ ಆವರಿಸಿದ ಸಂದರ್ಭದಲ್ಲಿ ಬರಗಾಲಮ್ಮ, ಗಾಳಿ ಮಾರಮ್ಮ, ಹೋಳಿಗೆಯಮ್ಮ ದೇವಿ ಆಚರಣೆ ಆಚರಿಸುತ್ತಿದ್ದರು. ಪ್ಲೇಗ್, ಮಲೇರಿಯಾದಂಥ ಸಾಂಕ್ರಾಮಿಕ ರೋಗಗಳು ಕಾಡಿದಾಗ ಪ್ಲೇಗಮ್ಮ ಸೇರಿದಂತೆ ಗಾಳಿ ಮಾರಮ್ಮ, ಹೋಳಿಗೆಯ್ಮ ಆಚರಣೆ ಆಚರಿಸುವ ಮೂಲಕ ಸಂಕಟವನ್ನು ದೂರಾಗಿಸುವಂತೆ ಶಕ್ತಿ ದೇವತೆ ಮೊರೆ ಹೋಗುತ್ತಿದ್ದರು. ಅಂತೆಯೇ ಸಂಕಟಗಳು ದೂರಾಗಿರುವ ಉದಾಹರಣೆಗಳು ಸಹ ಸಾಕಷ್ಟಿವೆ ಎಂಬುದು ಈ ಭಾಗದ ಜನರ ನಂಬಿಕೆಯ ನುಡಿ.
ಗ್ರಾಮದ ಜನ ಉಪವಾಸ: ಆಚರಣೆಯ ದಿನ ಇಡೀ ಗ್ರಾಮದ ಜನ ಉಪವಾಸ ವೃತದಲ್ಲಿರುತ್ತಾರೆ. ಕೆಲವರು ಮಡಿಯಲ್ಲಿ ತೆರಳಿ ಹುತ್ತದ ಮಣ್ಣು ತಂದು ಕೊರೊನಮ್ಮ ದೇವಿಯ ಉತ್ಸವ ಮೂರ್ತಿ ತಯಾರಿಸುತ್ತಾರೆ. ಕೊರೊನಾ ಮಾರಿಗೆ ಅರಿಶಿಣ, ಕುಂಕುಮ, ಹಾಲು, ತುಪ್ಪ, ಗೋಗಂಜಲು ಲೇಪಿಸಿ ಬಳೆ ತೊಡಿಸಿ ಹೂ, ಹಣ್ಣು ನೈವೇದ್ಯ ಅರ್ಪಿಸುತ್ತಾರೆ. ಕಾಯಿ ಒಡೆದು ವಿಶಿಷ್ಟ ಪೂಜೆ ಸಲ್ಲಿಸಿ ಊರಲ್ಲಿ ಮೆರವಣಿಗೆ ಮಾಡುತ್ತಾರೆ. ಮೂರು ದಿಕ್ಕಿನ ಕಡೆದೆ ದೇವಿಯನ್ನು ಕೊಂಡೊಯ್ದು ಗ್ರಾಮದ ಗಡಿ ದಾಟಿಸಲಾಗುತ್ತದೆ. ಆ ಮೂಲಕ ಜನರನ್ನು ಕಾಡುತ್ತಿರುವ ಮಹಾಮಾರಿ ತೊಲಗುತ್ತಾಳೆ ಎಂಬುದು ಜನರ ನಂಬಿಕೆ.