AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಲೋಕಾರ್ಪಣೆ ಯಾವಾಗ? ವಿ.ಸೋಮಣ್ಣ ಮಹತ್ವದ ಮಾಹಿತಿ

ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಯೋಜನೆ ಮದ್ಯ ಕರ್ನಾಟಕದ ಜನರ ದಶಕಗಳ ಕನಸು. ಆದ್ರೆ, ಚುನಾವಣೆ ವೇಳೆ ಅಂಗೈಯಲ್ಲೇ ಸ್ವರ್ಗ ತೋರಿಸುವ ರಾಜಕಾರಣಿಗಳು ಗೆದ್ದ ಬಳಿಕ ನಿರ್ಲಕ್ಷ ತೋರುತ್ತ ಬಂದಿದ್ದಾರೆ. ಇದೀಗ ತುಮಕೂರು ಸಂಸದರೇ ಕೇಂದ್ರದಲ್ಲಿ ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿದ್ದು, ನೇರ ರೈಲು ಮಾರ್ಗದ ಕನಸು ಚಿಗುರಿದೆ. ಇಂದು ರೈಲ್ವೆ ಯೋಜನೆ ಬಗ್ಗೆ ಮೂರು ಜಿಲ್ಲೆಗಳಲ್ಲಿ ಸಭೆ ನಡೆಸಿದ್ದು, ರೈಲ್ವೆ ಯೋಜನೆ ಕನಸು ಗರಿಗದರಿದೆ. ಈ ಕುರಿತು ವರದಿ ಇಲ್ಲಿದೆ.

ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಲೋಕಾರ್ಪಣೆ ಯಾವಾಗ? ವಿ.ಸೋಮಣ್ಣ ಮಹತ್ವದ ಮಾಹಿತಿ
ವಿ.ಸೋಮಣ್ಣ
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Oct 02, 2024 | 9:13 PM

Share

ಚಿತ್ರದುರ್ಗ, ಅ.02: ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗಕ್ಕಾಗಿ ದಶಕಗಳಿಂದ ಕರ್ನಾಟಕದ ಜನರು ಹೋರಾಟ ನಡೆಸುತ್ತಿದ್ದಾರೆ. ಇದೀಗ ತುಮಕೂರು ಸಂಸದರೇ ಕೇಂದ್ರದಲ್ಲಿ ರಾಜ್ಯ ರೈಲ್ವೆ ಇಲಾಖೆ ಸಚಿವರಾಗಿದ್ದು ಜನರ ಕನಸು ಚಿಗುರಿದ. ಹೌದು, ಸುಮಾರು ಎರಡು ದಶಕಕ್ಕೂ ಹೆಚ್ಚು ಸಮಯದಿಂದ ಕರ್ನಾಟಕದ ಜನರು ನೇರ ರೈಲು ಮಾರ್ಗಕ್ಕಾಗಿ ರೈಲ್ವೆ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟ ನಡೆಸುತ್ತ ಬಂದಿದ್ದಾರೆ. ಪರಿಣಾಮ ನೇರ ರೈಲು ಮಾರ್ಗ ಯೋಜನೆಗೆ ಚಾಲನೆ ಸಿಕ್ಕಿದೆಯಾದರೂ ಇನ್ನೂ ಭೂಸ್ವಾಧೀನ ಪ್ರಕ್ರಿಯೆಯೇ ಬಹುತೇಕ ಪೂರ್ಣಗೊಂಡಿಲ್ಲ ಎಂಬ ಆರೋಪವಿದೆ.

ಇನ್ನು ಈ ಕುರಿತು ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಸಚಿವ ಸೋಮಣ್ಣ ನೇತೃತ್ವದಲ್ಲಿ ಸಭೆ ನಡೆದಿದೆ. ಈ ವೇಳೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಸೋಮಣ್ಣ, ‘2140 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. 2400ಎಕರೆ ಭೂಸ್ವಾಧೀನ ಪ್ರಕ್ರಿಯೆ ಅಗತ್ಯವಿತ್ತು. ಬಹುತೇಕ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು ಸುಮಾರು 280ಎಕರೆ ಮಾತ್ರ ಬಾಕಿ ಉಳಿದಿದೆ. ಹೀಗಾಗಿ, 2026ರ ವೇಳೆಗೆ ಯೋಜನೆ ಪೂರ್ಣಗೊಳಿಸುತ್ತೇವೆ. ಪ್ರಧಾನಿ ಮೋದಿ ಅವರ ಮೂಲಕ ಚಾಲನೆ ನೀಡುವ ಕೆಲಸ ಮಾಡುತ್ತೇವೆಂದು ಭರವಸೆ ನೀಡಿದರು.

ಇದನ್ನೂ ಓದಿ:ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸೇವೆ

ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ್, ಡಿಸಿ ಟಿ.ವೆಂಕಟೇಶ್ ಮತ್ತು ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್ ಸಭೆ ಬಳಿಕ ಪ್ರತಿಕ್ರಿಯಿಸಿ ‘ಮೂರು ಹಂತದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ಇನ್ನುಳಿದ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ ಕೊಡುತ್ತೇವೆ. ಶೇ.90ರಷ್ಟು ಭೂಸ್ವಾಧೀನ ಪ್ರಕ್ರಿಯೆ ಆದಾಗ ಯೋಜನೆ ಆರಂಭಿಸಲಾಗುತ್ತದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಆಗಿದ್ದು ಕಾಮಗಾರಿ ಶುರುವಾಗಿದೆ ಎಂದು ಹೇಳಿದರು.

ಒಟ್ಟಾರೆಯಾಗಿ ಮಧ್ಯ ಕರ್ನಾಟಕದ ಜನರಲ್ಲಿ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ಕನಸು ಚಿಗುರಿದೆ. ಆ ಮೂಲಕ ರಾಜ್ಯದ ರಾಜಧಾನಿಗೆ ಕಡಿಮೆ ಖರ್ಚಿನಲ್ಲಿ ಕಡಿಮೆ ಸಮಯದಲ್ಲಿ ತಲುಪುವ ಸಮಯ ಸಮೀಪಿಸುತ್ತಿದೆ. ಅಷ್ಟೇ ಅಲ್ಲ, ರೈಲ್ವೆ ಕನೆಕ್ಟಿವಿಟಿ ಇಲ್ಲದೆ ಸೊರಗಿದ್ದ ಪ್ರವಾಸೋದ್ಯಮ, ವಾಣಿಜೋದ್ಯಮ ಬೆಳವಣಿಗೆಗೂ ಈ ಯೋಜನೆ ಸಹಕಾರಿ ಆಗಲಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೀಘ್ರ ನೇರ ರೈಲು ಮಾರ್ಗ ಯೋಜನೆ ಪೂರ್ಣಗೊಳಿಸಬೇಕಿದೆ ಎಂಬುದು ದುರ್ಗದ ಜನರ ಆಗ್ರಹವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ