ಮಹಾರಾಷ್ಟ್ರ ಡ್ಯಾಂನಿಂದ ಕರ್ನಾಟಕಕ್ಕೆ ನೀರು ಬಿಡುವ ವಿಚಾರ: ಸಮನ್ವಯ ಸಾಧಿಸಿ, ನೆರೆ ತಪ್ಪಿಸಲು ಎರಡು ರಾಜ್ಯಗಳೂ ಒಪ್ಪಿಗೆ

ಭೀಮಾ ನದಿಗೆ ಒಂದೇ ಬಾರಿಗೆ ನೀರು ಬಿಡದಂತೆ ನಾವು ಮನವಿ ಮಾಡಿದ್ದೆವು. ನಮ್ಮ ಮನವಿಗೆ ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ ನೀಡಿದೆ. ಹೀಗಾಗಿ ಡ್ಯಾಂನಿಂದ ನೀರು ಬಿಡುಗಡೆ ಮಾಡುವ ವೇಳೆಗೆ ಪರಿಸ್ಥಿತಿ ನಿರ್ವಹಿಸಿಸುವುದು ಅನುಕೂಲವಾಗಲಿದೆ.

ಮಹಾರಾಷ್ಟ್ರ ಡ್ಯಾಂನಿಂದ ಕರ್ನಾಟಕಕ್ಕೆ ನೀರು ಬಿಡುವ ವಿಚಾರ: ಸಮನ್ವಯ ಸಾಧಿಸಿ, ನೆರೆ ತಪ್ಪಿಸಲು ಎರಡು ರಾಜ್ಯಗಳೂ ಒಪ್ಪಿಗೆ
ಡ್ಯಾಂ ನಿರ್ವಹಣೆ ಕುರಿತು ಸಮನ್ವಯ ಸಾಧಿಸಲು ಕರ್ನಾಟಕ-ಮಹಾರಾಷ್ಟ್ರ ಸರ್ಕಾರಗಳ ಒಪ್ಪಿಗೆ

ಬೆಂಗಳೂರು: ಮಹಾರಾಷ್ಟ್ರದ ಡ್ಯಾಂನಿಂದ ನೀರು ಬಿಡುವ ಕುರಿತು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಪ್ರವಾಹ ನಿಯಂತ್ರಣ ಮತ್ತು ನಿರ್ವಹಣಾ ಸಮಿತಿಯ ಸಭೆಯಲ್ಲಿ ನೀರು ಬಿಡುಗಡೆಯ ಬಗ್ಗೆ ಕೂಡಲೇ ಮಾಹಿತಿ ನೀಡಲು ಮಹಾರಾಷ್ಟ್ರ ಸರ್ಕಾರ ಒಪ್ಪಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಗೆ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್, ಗೃಹ ಸಚಿವ ಬಸವರಾಜ ಬೊಮ್ಮಾಯಿ‌, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹಾಜರಾಗಿದ್ದು, ಇದರಲ್ಲಿ ಕೃಷ್ಣಾ ಮತ್ತು ಭೀಮಾ ಜಲಾನಯನ ಪ್ರದೇಶದಲ್ಲಿ ಪರಿಣಾಮಕಾರಿ ಪ್ರವಾಹ ನಿರ್ವಹಣೆಯ ಕುರಿತ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗಿದೆ.

ಮಹಾರಾಷ್ಟ್ರದ ಡ್ಯಾಂನಿಂದ ನೀರು ಬಿಟ್ಟ ನಂತರ ಅದು ಅಲ್ಲಿಂದ ರಾಜ್ಯಕ್ಕೆ ಬರಲು 42 ಗಂಟೆಗಳ ಸಮಯ ಬೇಕು. ಈ 42 ಗಂಟೆ ಅವಧಿಯಲ್ಲಿ ನಾವು ಇಲ್ಲಿನ ಡ್ಯಾಂಗಳ ನಿರ್ವಹಣೆ ಮಾಡಿಕೊಳ್ಳಬಹುದಾಗಿದೆ. ಅವರು ನೀರು ಬಿಡುವಾಗ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಇದಕ್ಕಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಭೀಮಾ ನದಿಗೆ ಒಂದೇ ಬಾರಿಗೆ ನೀರು ಬಿಡದಂತೆ ನಾವು ಮನವಿ ಮಾಡಿದ್ದೆವು. ನಮ್ಮ ಮನವಿಗೆ ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ ನೀಡಿದೆ. ಹೀಗಾಗಿ ಡ್ಯಾಂನಿಂದ ನೀರು ಬಿಡುಗಡೆ ಮಾಡುವ ವೇಳೆಗೆ ಪರಿಸ್ಥಿತಿ ನಿರ್ವಹಿಸಿಸುವುದು ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ, ಕೃಷ್ಣಾ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ಇರುವ ಪ್ರಕರಣದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಜಂಟಿಯಾಗಿ ಕಾನೂನು ಹೋರಾಟ ನಡೆಸಲು ಸದರಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ದೂಧ್​ಗಂಗಾ ಯೋಜನೆ ಕಾಮಗಾರಿ ಶೀಘ್ರವೇ ಪೂರ್ಣ
ದೂಧ್​ಗಂಗಾ ಯೋಜನೆ ಕಾಮಗಾರಿ ಶೀಘ್ರವೇ ಆಗಲಿದೆ. ಮಹಾರಾಷ್ಟ್ರದಿಂದ ಆಗಬೇಕಾದ ಕೆಲಸಗಳಿಗೂ ಒಪ್ಪಿಗೆ ಸಿಕ್ಕಿದೆ. 2 ವರ್ಷದಲ್ಲಿ ಕೆಲಸ ಪೂರ್ಣಗೊಳಿಸಲು ಒಪ್ಪಿಕೊಂಡಿದ್ದಾರೆ. ಇದರಿಂದ ಈ ಭಾಗದ ಜನರ ನೀರಾವರಿ ಸೌಲಭ್ಯ ಹೊಂದುವ ಆಕಾಂಕ್ಷೆ ನೆರವೇರಲಿದೆ. ಈ ವರ್ಷ ಬಜೆಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರ ಹಣ ಇಟ್ಟಿದೆ. ಹೀಗಾಗಿ ಕೆಲಸ ಚುರುಕಾಗಿ ಆಗಲಿದೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಸದರಿ ಅಭೆಯಲ್ಲಿ ಎರಡೂ ರಾಜ್ಯಗಳ ನಡುವೆ ಸಚಿವರು, ಕಾರ್ಯದರ್ಶಿಗಳ ಹಂತ ಹಾಗೂ ತಳಹಂತದ ಅಧಿಕಾರಿಗಳ ನಡುವೆ ಉತ್ತಮ ಸಂವಹನ, ಸಮನ್ವಯ ನಿರ್ವಹಿಸಲು ತೀರ್ಮಾನಿಸಲಾಗಿದೆ. ಎರಡೂ ರಾಜ್ಯಗಳ ನಡುವೆ ಮಳೆಯ ಪ್ರಮಾಣ, ಜಲಾಶಯಗಳಿಂದ ನೀರು ಬಿಡುಗಡೆ ಕುರಿತಂತೆ ಕ್ಷಣಕ್ಷಣದ ಮಾಹಿತಿ ಹಂಚಿಕೊಳ್ಳಲು ನಿರ್ಧರಿಸಲಾಗಿದೆ.

ಇದರೊಂದಿಗೆ ಬೇಸಿಗೆಯಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ 4 ಟಿಎಂಸಿ ನೀರು ಹಾಗೂ ಮಳೆಗಾಲದಲ್ಲಿ ಮಹಾರಾಷ್ಟ್ರಕ್ಕೆ ರಾಜ್ಯದಿಂದ ಅಷ್ಟೇ ಪ್ರಮಾಣದ ನೀರು ಒದಗಿಸುವ ಬಗ್ಗೆ ತಾಂತ್ರಿಕ ಸಮಿತಿ ರಚಿಸಲು ತೀರ್ಮಾನ ಮಾಡಲಾಗಿದೆ. ಮಹಾರಾಷ್ಟ್ರ ರಾಜ್ಯದ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್, ಕರ್ನಾಟಕದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಜಲಸಂಪನ್ಮೂಲ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕರ್ನಾಟಕ ಮತ್ತು ಮಹಾರಾಷ್ಟ್ರದ ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

CM BSY MEETING

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ

ಮೇಕೆದಾಟು ವಿಚಾರದಲ್ಲಿ ಪ್ರಕರಣ ವಜಾ ಆಗಿದೆ
ಮೇಕೆದಾಟು ವಿಚಾರದ ಬಗ್ಗೆ ಮಾತನಾಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅದಕ್ಕೆ ಸಂಬಂಧಿಸಿದ ಪ್ರಕರಣ ವಜಾ ಆಗಿದೆ. ಎನ್‌ಜಿಟಿ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ವಜಾಗೊಳಿಸಿದೆ. ಆದಷ್ಟು ಬೇಗ ಯೋಜನೆ ಆರಂಭ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಸ್ವರ್ಗ ಸೃಷ್ಟಿ ಮಾಡುವುದು ಬೇಡ, ಬಾಕಿ ಉಳಿದಿರುವ ಯೋಜನೆ ಪೂರ್ಣಗೊಳಿಸಿ
ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ, ಮೇಕೆದಾಟು ಯೋಜನೆಗಿದ್ದ ಅಡ್ಡಿ ನಿವಾರಣೆಯಾಗಿದೆ. ಈಗ ಕೇಂದ್ರದಿಂದ ಶೀಘ್ರ ಅನುಮತಿ ಪಡೆಯಬೇಕು. ಅನುಮತಿ ಪಡೆದು ಯೋಜನೆ ಜಾರಿಗೊಳಿಸಬೇಕು. ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಬೇಕಾಗಿದೆ. ಜತೆಗೆ, ಕೇಂದ್ರವೂ ಪರಿಸರ ಇಲಾಖೆ ಅನುಮತಿ ನೀಡಬೇಕು ಎಂದು ಟ್ವೀಟ್​ ಮಾಡುವ ಮೂಲಕ ಆಗ್ರಹಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಸ್ವರ್ಗ ಸೃಷ್ಟಿ ಮಾಡುವುದಾಗಿ ಬಿಜೆಪಿ ನಾಯಕರು ಹೇಳಿದ್ದರು. ಸ್ವರ್ಗ ಬೇಡ, ಅನಿಶ್ಚಿತತೆಯಲ್ಲಿ ತೂಗುತ್ತಿರುವ ಮೇಕೆದಾಟು ಯೋಜನೆಗೆ ಅನುಮತಿ ಪಡೆದರೆ ಸಾಕು. ನಮ್ಮ ನೆಲ, ಜಲ, ಧನ ಬಳಸಿ ನಮ್ಮವರ ದಾಹ ನೀಗಿಸಿ. ಯೋಜನೆ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಕುಹಕವಾಡಿದ್ದಾರೆ.

ಇದನ್ನೂ ಓದಿ:
ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆ: ರಾಜ್ಯದಲ್ಲಿ ಕೃಷ್ಣಾ ಸೇರಿ ಹಲವು ನದಿಗಳಲ್ಲಿ ನೆರೆ ಭೀತಿ 

ಮೇಕೆದಾಟು ಯೋಜನೆ; ರಾಷ್ಟ್ರೀಯ ಹಸಿರು ಪೀಠದಿಂದ ರಾಜ್ಯದ ಪರ ಆದೇಶ