ಕರ್ನಾಟಕದ 5 ನಗರಗಳಲ್ಲಿ ಸೇಫ್‌ ಸಿಟಿ ಯೋಜನೆ ಜಾರಿಗೆ ಗೃಹ ಸಚಿವ ಅಮಿತ್‌ ಶಾಗೆ ಸಿಎಂ ಸಿದ್ದರಾಮಯ್ಯ ಆಗ್ರಹ

| Updated By: ಗಣಪತಿ ಶರ್ಮ

Updated on: Jun 29, 2024 | 9:33 AM

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ರಾತ್ರಿ ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಸೇಫ್ ಸಿಟಿ ಯೋಜನೆ ಸೇರಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕರ್ನಾಟಕಕ್ಕೆ ಸಂಬಂಧಪಟ್ಟ ಹಲವು ಮನವಿಗಳನ್ನು ಕೇಂದ್ರ ಗೃಹ ಸಚಿವರಿಗೆ ಮುಖ್ಯಮಂತ್ರಿಗಳು ಸಲ್ಲಿಕೆ ಮಾಡಿದರು. ಆ ಕುರಿತ ಪೂರ್ಣ ವಿವರ ಇಲ್ಲಿದೆ.

ಕರ್ನಾಟಕದ 5 ನಗರಗಳಲ್ಲಿ ಸೇಫ್‌ ಸಿಟಿ ಯೋಜನೆ ಜಾರಿಗೆ ಗೃಹ ಸಚಿವ ಅಮಿತ್‌ ಶಾಗೆ ಸಿಎಂ ಸಿದ್ದರಾಮಯ್ಯ ಆಗ್ರಹ
ಅಮಿತ್‌ ಶಾ & ಸಿದ್ದರಾಮಯ್ಯ
Image Credit source: PTI
Follow us on

ನವದೆಹಲಿ, ಜೂನ್‌ 29: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ರಾಜ್ಯದ ಪೊಲೀಸ್‌ ಪಡೆಯ ಬಲವರ್ಧನೆಗೆ ಸಂಬಂಧಿಸಿದ ವಿವಿಧ ಪ್ರಸ್ತಾವನೆಗಳ ಮಂಜೂರಾತಿ ಕುರಿತಂತೆ ಗಮನ ಸೆಳೆದರು. ಕರ್ನಾಟಕ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರದಿಂದ ಅಗತ್ಯವಿರುವ ನೆರವಿನ ಕುರಿತ ಹಲವು ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು.

ಭಾರತ ಸರ್ಕಾರವು 80 ಕೋಟಿ ರೂ. ವೆಚ್ಚದಲ್ಲಿ ಇಂಡಿಯಾ ರಿವರ್ಸ್ ಬೆಟಾಲಿಯನ್ (India Reserve Battalion) ಸ್ಥಾಪನೆಗೆ ಅನುಮೋದನೆ ನೀಡಿದ್ದು, ಹೆಚ್ಚುವರಿಯಾಗಿ ಬಳ್ಳಾರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಎರಡು ಬೆಟಾಲಿಯನ್‌ ಸ್ಥಾಪನೆಗೆ ಅನುಮೋದನೆ ನೀಡುವಂತೆ ಕೋರಿದರು.

ಈ ಐದು ನಗರಗಳಲ್ಲಿ ಸೇಫ್‌ ಸಿಟಿ ಯೋಜನೆ

ನಿರ್ಭಯಾ ನಿಧಿಯಡಿಯಲ್ಲಿ ಬೆಂಗಳೂರು ನಗರದಂತೆಯೇ ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ಕಲಬುರಗಿ ನಗರಗಳಲ್ಲಿ ಸೇಫ್‌ ಸಿಟಿ ಯೋಜನೆಯನ್ನು ತಲಾ 200 ಕೋಟಿ ರೂ. ಗಳಂತೆ ಒಟ್ಟು 1000 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಕ್ಕೆ ಅನುಮೋದನೆ ನೀಡಬೇಕೆಂದು ಶಾ ಬಳಿ ಸಿದ್ದರಾಮಯ್ಯ ಆಗ್ರಹಿಸಿದರು.

ಹೈಕೋರ್ಟಿನ ಆದೇಶದಂತೆ ಬಂಧಿಸುವ ಅಧಿಕಾರ ಹೊಂದಿರುವ ಸಿಬ್ಬಂದಿಗೆ Body worn camera ಕಡ್ಡಾಯವಾಗಿರುವುದರಿಂದ ರಾಜ್ಯದಲ್ಲಿ ಇನ್ನೂ 175 ಕೋಟಿ ರೂ. ವೆಚ್ಚದಲ್ಲಿ 58,546 ಬಾಡಿ ವೋರ್ನ್ ಕ್ಯಾಮರಾ ಖರೀದಿಸುವ ಅಗತ್ಯವಿದ್ದು, 100 ಕೋಟಿ ರೂ. ನೆರವು ನೀಡುವಂತೆ ಮನವಿ ಸಲ್ಲಿಸಿರು.

ಪ್ರಸಕ್ತ ಸಾಲಿನಲ್ಲಿ ಬಾಡಿಗೆ ಕಟ್ಟದಲ್ಲಿರುವ ಹಾಗೂ ಶಿಥಿಲಾವಸ್ಥೆಯಲ್ಲಿರುವ 100 ಪೊಲೀಸ್‌ ಠಾಣೆಗಳಿಗೆ ಹೊಸ ಕಟ್ಟಡವನ್ನು ತಲಾ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 300 ಕೋಟಿ ರೂ. ಅಗತ್ಯವಿದೆ. ಇದಕ್ಕೆ ನೆರವು ಒದಗಿಸುವಂತೆಯೂ ಗೃಹ ಸಚಿವ ಅಮಿತ್‌ ಶಾ ಬಳಿ ಸಿದ್ದರಾಮಯ್ಯ ಕೋರಿದರು.

ಇದನ್ನೂ ಓದಿ: ಬಸನಗೌಡ ಪಾಟೀಲ್​ ಯತ್ನಾಳ್​ ಪತ್ರಕ್ಕೆ ಅಮಿತ್ ಶಾ ಸ್ಪಂದನೆ, ಹಲವರಿಗೆ ಶುರುವಾಯ್ತು ನಡುಕ!

ಪೊಲೀಸ್‌ ಕ್ಯಾಂಟೀನ್‌ ಸೌಲಭ್ಯ ಮಾದರಿಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿಗೂ ಕ್ಯಾಂಟೀನ್‌ ಸ್ಥಾಪನೆಗೆ ಅಗತ್ಯ ಅನುಮತಿಗಳನ್ನು ಒದಗಿಸುವುದು, ಪೊಲೀಸ್‌ ವಸತಿ ಗೃಹಗಳ ನಿರ್ಮಾಣಕ್ಕೆ ನೆರವು, ವಿಧಿವಿಜ್ಞಾನ ಪ್ರಯೋಗಾಲಯಗಳ ಆಧುನೀಕರಣಕ್ಕೆ ನೆರವು ಮತ್ತಿತರ ವಿಷಯಗಳ ಕುರಿತು ಸಹ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:33 am, Sat, 29 June 24