ಬಸನಗೌಡ ಪಾಟೀಲ್ ಯತ್ನಾಳ್ ಪತ್ರಕ್ಕೆ ಅಮಿತ್ ಶಾ ಸ್ಪಂದನೆ, ಹಲವರಿಗೆ ಶುರುವಾಯ್ತು ನಡುಕ!
ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬರೆದಿದ್ದ ಪತ್ರಕ್ಕೆ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಂದಿಸಿ ಉತ್ತರ ಬರೆದಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಸೇರಿದಂತೆ ಈ ಹಿಂದೆ ಕರ್ನಾಟಕದಲ್ಲಿ ನಡೆದ ಘಟನೆಗಳನ್ನು ಉಲ್ಲೇಖಿಸಿ ಪತ್ರ ಬರೆದಿದ್ದರು, ಇದೀಗ ಗೃಹ ಸಚಿವರ ಕಡೆಯಿಂದ ಸ್ಪಂದನೆ ಸಿಕ್ಕಿದ್ದು, ಹಲವರಿಗೆ ನಡುಕ ಶುರುವಾಗಿದೆ.
ವಿಜಯಪು, (ಜೂನ್ 28): ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಮನವಿ ಮಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪತ್ರಕ್ಕೆ ಕೇಂದ್ರ ಗೃಹ ಸಚಿವ ಸ್ಪಂದನೆ ಮಾಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಬಗ್ಗೆ ನಿಮ್ಮ ಪತ್ರ ಸ್ವೀಕಾರ ಮಾಡಿದ್ದೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಸನಗೌಡ ಪಾಟೀಲ್ ಯತ್ನಾಳ್ಗೆ ವಾಪಸ್ ಪತ್ರ ಬರೆದಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ, 2016ರಲ್ಲಿ ಮಡಿಕೇರಿಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ, 2019ರಲ್ಲಿ ಡಾ.ಜಿ.ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆ ಪ್ರಕರಣ, ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕೆಂದು ಯತ್ನಾಳ್ ಅಮಿತ್ ಶಾಗೆ ಪತ್ರ ಬರೆದಿದ್ದರು. ಇದೀಗ ಯತ್ನಾಳ್ ಪತ್ರಕ್ಕೆ ಅಮಿತ್ ಶಾ ಉತ್ತರ ಬರೆದಿದ್ದು, ಪ್ರಕರಣಗಳಲ್ಲಿ ಹೆಸರು ಕೇಳಿಬಂದವರಿಗೆ ನಡುಕು ಶುರುವಾದಂತಾಗಿದೆ.
ಅಮಿತ್ ಶಾಗೆ ಯತ್ನಾಳ್ ಬರೆದಿದ್ದ ಪತ್ರದಲ್ಲೇನಿತ್ತು?
ಕಾಂಗ್ರೆಸ್ ಅಧಿಕಾರದಲ್ಲಿ ಭ್ರಷ್ಟಾಚಾರ ನಡೆಸಲು ಸಹಕಾರ ಕೊಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತದೆ. ಇದರಿಂದ ಅನೇಕ ದಕ್ಷ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಟೋಬರ್ 2019ರಲ್ಲಿ ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ ಬೆಂಗಳೂರು ವಿವಿ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಜುಲೈ 2016ರಲ್ಲಿ ಕೆ.ಜೆ. ಜಾರ್ಜ್ ಹೆಸರು ಹೇಳಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೇ ಮೇ ತಿಂಗಳಲ್ಲಿ ಕೆಆರ್ಐಡಿಎಲ್ ಗುತ್ತಿಗೆದಾರ ಪಿ.ಎಸ್. ಗೌಡರ್ ಅಧಿಕಾರಿಗಳನ್ನು ದೂರಿ ದಾವಣಗೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡುವಂತೆ ಒತ್ತಡ ಹೇರಿದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಯತ್ನಾಳ್ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.
ಅಲ್ಲದೇ ವಾಲ್ಮೀಕಿ ಅಭಿವೃದ್ಧಿ ನಿಗಮದ 88.62 ಕೋಟಿ ನಗದು ವರ್ಗಾವಣೆ ವಹಿವಾಟನ್ನು ಅಕ್ರಮ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದೆ. ಈ ಸಂಬಂಧ ಬ್ಯಾಂಕ್ ಸಿಬಿಐಗೆ ದೂರು ನೀಡಿದೆ. ಜೊತೆಗೆ ಬ್ಯಾಂಕ್ ತನ್ನ ಮೂರು ಅಧಿಕಾರಿಗಳನ್ನು ಅಮಾನತು ಮಾಡಿದೆ. ಪ್ರಕರಣದ ಗಭೀರತೆಯನ್ನು ಪರಿಗಣಿಸಿ ಈ ಬಗ್ಗೆ ಸ್ವತಂತ್ರ ತನಿಖೆ ನಡೆಸುವ ಅಗತ್ಯ ಇದೆ. ಬ್ಯಾಂಕ್ ನೀಡಿದ ದೂರಿನ ಆಧಾರದ ಮೇಲೆ ಸಿಬಿಐ ಮಧ್ಯ ಪ್ರವೇಶಿಸಿ ತನಿಖೆ ನಡೆಸಬೇಕು ಎಂದು ಪತ್ರದ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದರು.
ಈ ಪತ್ರಕ್ಕೆ ಅಮಿತ್ ಶಾ ಸ್ಪಂದಿಸಿದ್ದು, ಇದೀಗ ಈ ಎಲ್ಲಾ ಪ್ರಕರಣ ತನಿಖೆ ನಡೆಸುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ