AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುರುಬರನ್ನ ಎಸ್​​ಟಿಗೆ ಸೇರ್ಪಡೆಗೆ ಉಗ್ರಪ್ಪ ಉಗ್ರಾವತಾರ, ಎಲ್ಲಾ ಗೊಂದಲಗೆ ತೆರೆ ಎಳೆದ ಸಿಎಂ

ಕುರುಬ ಸಮುದಾಯವನ್ನು ಎಸ್​​ಟಿಗೆ ಸೇರ್ಪಡೆಗೊಳಿಸಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಬಸವರಾಜ್ ಬೊಮ್ಮಾಯಿ ಅವರು ಕುರುಬ ಸಮುದಾಯವನ್ನು ಎಸ್​​ಟಿಗೆ ಸೇರ್ಪಡೆ ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ಇದೀಗ ಅದು ಮತ್ತೆ ಮುನ್ನೆಲೆಗೆ ಬಂದಿದ್ದು, ವಾಲ್ಮೀಕಿ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಕುರುಬರನ್ನ ಎಸ್​​ಟಿಗೆ ಸೇರ್ಪಡೆಗೆ ಉಗ್ರಪ್ಪ ಉಗ್ರಾವತಾರ, ಎಲ್ಲಾ ಗೊಂದಲಗೆ ತೆರೆ ಎಳೆದ ಸಿಎಂ
Siddaramaiah
ರಮೇಶ್ ಬಿ. ಜವಳಗೇರಾ
|

Updated on:Oct 07, 2025 | 6:09 PM

Share

ಬೆಂಗಳೂರು, (ಅಕ್ಟೋಬರ್ 07): ವಿಧಾನಸೌಧದಲ್ಲಿ ಇಂದು ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ (Valmiki Jayanti) ಕಾರ್ಯಕ್ರಮದಲ್ಲಿ ಕುರುಬ ಸಮುದಾಯವನ್ನು ಎಸ್​​ಟಿ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸಿದರೆ ಸುಮ್ಮನ ಇರುವುದಿಲ್ಲ ಎಂದು ಕಾರ್ಯಕ್ರಮದಲ್ಲೇ ಮಾಜಿ ಸಂಸದ ವಿ.ಎಸ್. ಉಗ್ರಪ್ಪ (V.S Ugrappa) ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆಯೇ ಗುಡುಗಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ (Siddaramaiah), ಕುರುಬರನ್ನು ಪರಿಶಿಷ್ಟ ಜಾತಿ (ಎಸ್‌ಟಿ) ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು ಬೊಮ್ಮಾಯಿ ಸರ್ಕಾರ, ಆ ಶಿಫಾರಸ್ಸಿನ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ಕೇಂದ್ರ ಸರ್ಕಾರ ಕೇಳಿದ್ದು ಅದಷ್ಟೇ ನಮ್ಮೆದುರಿಗಿದೆ. ಒಂದು ವೇಳೆ ಕುರುಬರನ್ನು ಎಸ್‌ಟಿಗೆ ಸೇರಿಸುವುದಾದರೆ ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು ಎನ್ನುವುದಕ್ಕೆ ನನ್ನ ಬೆಂಬಲ, ಸಹಮತವೂ ಇದೆ ಎಂದು ಸ್ಪಷ್ಟಪಡಿಸಿದರು.

ಈಗ ಕುರುಬರನ್ನು ಎಸ್‌ಟಿಗೆ ಸೇರಿಸಲು ಹೋರಾಟ ಮಾಡಿದವರು ನಾವಲ್ಲ. ಬಿಜೆಪಿಯ ಈಶ್ವರಪ್ಪ ಹೋರಾಟ ಮಾಡಿದರು. ಮುಖ್ಯಮಂತ್ರಿಯಾಗಿದ್ದ ಬೊಮ್ಮಾಯಿ ಅವರು ಈಶ್ವರಪ್ಪ ಅವರ ಮನವಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಆ ಶಿಫಾರಸ್ಸಿನ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ಕೇಂದ್ರ ಸರ್ಕಾರ ಕೇಳಿದೆ. ಅದಷ್ಟೇ ನಮ್ಮೆದುರಿಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಕುರುಬರ ಎಸ್​​ಟಿ ಸೇರ್ಪಡೆಗೆ ಕರ್ನಾಟಕದ ಶಿಫಾರಸಷ್ಟೇ ಸಾಕೇ? ಕೇಂದ್ರ ಅನುಸರಿಸುವ ಮುಂದಿನ ಹಂತಗಳೇನು?

“ವಾಲ್ಮೀಕಿ ಮತ್ತು ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ನಾನು ಮತ್ತು ಉಗ್ರಪ್ಪ ಅವರು ರಾಮಕೃಷ್ಣ ಹೆಗಡೆಯವರಿಗೆ ಮನವಿ ಮಾಡಿದ್ದೆವು. ಹೆಗಡೆಯವರು ನಮ್ಮ ಮನವಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೂ ಆಗ ಸೇರಿಸಲು ಆಗಲಿಲ್ಲ. ಆದರೆ, ಉಗ್ರಪ್ಪ ಅವರು ಸುಮ್ಮನೆ ಕೂರಲಿಲ್ಲ. ಉಗ್ರಪ್ಪ ಮತ್ತು ದೇವೇಗೌಡರ ನಡುವಿನ‌ ಒಡನಾಟ ಆಗಲೂ ಚೆನ್ನಾಗಿತ್ತು, ಈಗಲೂ ಚನ್ನಾಗಿದೆ. ದೇವೇಗೌಡರು ಮತ್ತು ಚಂದ್ರಶೇಖರ್ ಅವರ ಒಡನಾಡ ಚನ್ನಾಗಿತ್ತು. ಚಂದ್ರಶೇಖರ್ ಅವರು ಪ್ರಧಾನಿಯಾಗಿದ್ದಾಗ ಅವರನ್ನು ದೇವೇಗೌಡರ ಮೂಲಕ ಒಪ್ಪಿಸಿ ವಾಲ್ಮೀಕಿ ಸಮುದಾಯವನ್ನು ಎಸ್‌ಟಿಗೆ ಸೇರಿಸಿದರು. ವಾಲ್ಮೀಕಿ, ಬೇಡ ಮತ್ತು ನಾಯಕ‌ ಸಮುದಾಯಕ್ಕೆ ಮೀಸಲಾತಿ ದೊರಕಲು ಉಗ್ರಪ್ಪನವರೇ ಕಾರಣ ಎನ್ನುವುದನ್ನು ಮರೆಯಬಾರದು ಎಂದರು.

ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು

ಕುರುಬರನ್ನು ಎಸ್‌ಟಿಗೆ ಸೇರಿಸಿದರೆ ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು ಎನ್ನುವುದಕ್ಕೆ ನನ್ನ ಬೆಂಬಲ, ಸಹಮತವೂ ಇದೆ. ಯಾರೂ ಯಾರ ಅನ್ನದ ತಟ್ಟೆಗೆ ಕೈ ಹಾಕಬಾರದು. ಯಾರೂ ಯಾರ ಅವಕಾಶಗಳನ್ನೂ ಕಿತ್ತುಕೊಳ್ಳಬಾರದು ಎನ್ನುವುದು ನನ್ನ ಬದ್ಧತೆ. ಜೆ.ಹೆಚ್.ಪಟೇಲರು ಸಿಎಂ ಆಗಿದ್ದಾಗ ಬೆಸ್ತರು ಸೇರಿ ಹಲವು ಸಮುದಾಯಗಳನ್ನು ಎಸ್‌ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಹೋಗಿದೆ. ಇವತ್ತಿನವರೆಗೂ ಇದು ಸಾಧ್ಯವಾಗಿಲ್ಲ ಎಂದು ಹೇಳಿದರು.

ಸಿಎಂ ಮುಂದೆಯೇ ಗುಡುಗಿದ ಉಗ್ರಪ್ಪ

ವಾಲ್ಮೀಕಿ ಜಯಂತಿ ಸಂದರ್ಭದಲ್ಲಿ ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯ ಮುಂದೆಯೇ ವಿ.ಎಸ್​ ಉಗ್ರಪ್ಪ ಗುಡುಗಿದ್ದಾರೆ. “ಸಿದ್ದರಾಮಯ್ಯ ನವರೇ, ನಮ್ಮ ತಟ್ಟೆಯನ್ನು ಕಿತ್ತುಕೊಳ್ಳೋಕೆ ಹೋಗಬೇಡಿ. ನಮ್ಮ ಜೊತೆ ಸಹಪಂಥಿಯಲ್ಲಿ ಕೂರಬೇಕಾದರೆ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ. ಕುರುಬರನ್ನು ಎಸ್‌ಟಿಗೆ ಸೇರಿಸಿದರೆ ಸುಮ್ಮನೆ ಇರುವುದಿಲ್ಲ. ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡುತ್ತೇನೆ. 14 ಪರ್ಸೆಂಟ್ ಮೀಸಲಾತಿ ಮಾಡಿದರೆ ನಮಗೇನು ಅಭ್ಯಂತರವಿಲ್ಲ. ನಮಗೂ ರಾಜಕೀಯ ಮೀಸಲಾತಿ ಬೇಕು. ಇದಲ್ಲದೆ, “ಸಿದ್ದರಾಮಯ್ಯ ನವರೇ, ನಿಮಗೆ ಕೈ ಮುಗಿತ್ತೀನಿ. ಎಷ್ಟು ವರ್ಷ ಆದರೂ ನೀವು ಮಾಜಿ ಆಗಲೇಬೇಕು. ನಮ್ಮ ತಟ್ಟೆಗೆ ಕೈ ಹಾಕಿದರೆ, ಜನರ ಜೊತೆಯಲ್ಲಿ ನಿಂತು ಹೋರಾಟ ಮಾಡುತ್ತೇವೆ ಎಂದು ತೀಕ್ಷ್ಣವಾಗಿ ಎಚ್ಚರಿಸಿದ್ದಾರೆ.

ಇದೀಗ ಕುರುಬರನ್ನು ಎಸ್​​ಟಿ ಸೇರ್ಪಗೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಪರ ವಿರೋಧ ಚರ್ಚೆಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಎಲ್ಲಾ ಅಂತೆ ಕಂತೆಗಳಿಗೆ ತೆರೆ ಎಳೆದಿದ್ದಾರೆ.

Published On - 6:00 pm, Tue, 7 October 25