ಕುರುಬರ ಎಸ್​​ಟಿ ಸೇರ್ಪಡೆಗೆ ಕರ್ನಾಟಕದ ಶಿಫಾರಸಷ್ಟೇ ಸಾಕೇ? ಕೇಂದ್ರ ಅನುಸರಿಸುವ ಮುಂದಿನ ಹಂತಗಳೇನು?

ಕುರುಬ ಸಮುದಾಯವನ್ನು ಎಸ್​​ಟಿಗೆ ಸೇರ್ಪಡೆಗೊಳಿಸಲು ರಾಜ್ಯದ ಶಿಫಾರಸಷ್ಟೇ ಸಾಕೇ? ಕಾನೂನು ಹೇಳುವುದೇನು? ಸಮುದಾಯವೊಂದನ್ನು ಎಸ್​​ಟಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಈ ಬಗ್ಗೆ ಸಂವಿಧಾನದಲ್ಲಿ ಏನು ಉಲ್ಲೇಖವಿದೆ? ಮಾಹಿತಿ ಇಲ್ಲಿದೆ.

ಕುರುಬರ ಎಸ್​​ಟಿ ಸೇರ್ಪಡೆಗೆ ಕರ್ನಾಟಕದ ಶಿಫಾರಸಷ್ಟೇ ಸಾಕೇ? ಕೇಂದ್ರ ಅನುಸರಿಸುವ ಮುಂದಿನ ಹಂತಗಳೇನು?
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Jul 22, 2023 | 3:43 PM

ಮಣಿಪುರದಲ್ಲಿ ಮೈತಿ ಸಮುದಾಯವನ್ನು ಪರಿಶಿಷ್ಟ ಪಂಗಡ ಅಥವಾ ಎಸ್​ಟಿಗೆ (ST) ಸೇರ್ಪಡೆಗೊಳಿಸಿ ಮೀಸಲಾತಿ (Reservation) ನೀಡಲು ಶಿಫಾರಸು ಮಾಡುವಂತೆ ಮಣಿಪುರ ಹೈಕೋರ್ಟ್ ಸೂಚಿಸಿದ ನಂತರದ ಬೆಳವಣಿಗೆಗಳ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಪರಿಣಾಮವಾಗಿ ಭುಗಿಲೆದ್ದಿರುವ ಹಿಂಸಾಚಾರ ಇಡೀ ದೇಶದ ಗಮನ ಸೆಳೆದಿದೆ. ಲೋಕಸಭೆ ಚುನಾವಣೆಗೆ ತಿಂಗಳುಗಳು ಬಾಕಿ ಇರುವ ಹೊತ್ತಿನಲ್ಲಿ ನಡೆದ ಈ ವಿದ್ಯಮಾನ ರಾಷ್ಟ್ರ ರಾಜಕೀಯದಲ್ಲಿಯೂ ಕೋಲಾಹಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಕುರುಬ ಸಮುದಾಯವನ್ನು ಎಸ್​​ಟಿಗೆ ಸೇರ್ಪಡೆಗೊಳಿಸಿ ಮೀಸಲಾತಿ ನೀಡುವ ಬಗ್ಗೆ ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಿದೆ. ಆದರೆ, ಕುರುಬ ಸಮುದಾಯವನ್ನು ಎಸ್​​ಟಿಗೆ ಸೇರ್ಪಡೆಗೊಳಿಸಲು ರಾಜ್ಯದ ಶಿಫಾರಸಷ್ಟೇ ಸಾಕೇ? ಕಾನೂನು ಹೇಳುವುದೇನು? ಸಮುದಾಯವೊಂದನ್ನು ಎಸ್​​ಟಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಈ ಬಗ್ಗೆ ಸಂವಿಧಾನದಲ್ಲಿ ಏನು ಉಲ್ಲೇಖವಿದೆ? ಮಾಹಿತಿ ಇಲ್ಲಿದೆ.

ಸಮುದಾಯವೊಂದನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಆಡಳಿತಾತ್ಮಕವಾಗಿ ಬಹಳ ವಿಸ್ತೃತ ಪ್ರಕ್ರಿಯೆಯಾಗಿದೆ. ಇದು ಹಲವಾರು ವರ್ಷಗಳಿಂದ ವಿಕಸನಗೊಳ್ಳುತ್ತಾ ಬಂದಿದೆ. ಆಡಳಿತಾತ್ಮಕವಾಗಿ ಕನಿಷ್ಠ ಪ್ರಕ್ರಿಯೆ ಪೂರ್ಣಗೊಳ್ಳದ ಹೊರತು ಈ ವಿಷಯದ ಬಗ್ಗೆ ತೀರ್ಪು ನೀಡಲು ನ್ಯಾಯಾಲಯಗಳು ಸಂವಿಧಾನಾತ್ಮಕವಾಗಿ ಅಧಿಕಾರ ಹೊಂದಿಲ್ಲ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು ಎಂದು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಮಾಜಿ ಕಾರ್ಯದರ್ಶಿ ರಾಘವ್ ಚಂದ್ರ ಅವರು ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಪ್ರಕಟಿಸಿದ ವಿಶ್ಲೇಷಣೆಯಲ್ಲಿ ಉಲ್ಲೇಖಿಸಿದ್ದಾರೆ. ಮಣಿಪುರದಲ್ಲಿ ಮೈತಿ ಸಮುದಾಯವನ್ನು ಪರಿಶಿಷ್ಟ ಸಮುದಾಯಕ್ಕೆ ಸೇರ್ಪಡೆಗೊಳಿಸಿದ್ದು, ಆ ವಿಚಾರವಾಗಿ ಮಣಿಪುರ ಹೈಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ಅವರು ವಿಶ್ಲೇಷಣೆ ಮಾಡಿದ್ದಾರೆ.

ಎಸ್​ಟಿಗೆ ಸೇರ್ಪಡೆ ವಿಚಾರಕ್ಕೆ ಬಂದಾಗ ಸಂವಿಧಾನದಲ್ಲಿ ನಿರ್ದಿಷ್ಟ ಮಾನದಂಡಗಳನ್ನು ವ್ಯಾಖ್ಯಾನಿಸಿಲ್ಲ. ಹೀಗಾಗಿ ಮಣಿಪುರ ವಿಚಾರದಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಕೇಂದ್ರ ಸಚಿವ ಸಂಪುಟ ಸಮಿತಿ ಸುದೀರ್ಘ ಸಮಾಲೋಚನೆ ನಡೆಸಿದೆ. ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶದ ಸ್ಪಷ್ಟ ಶಿಫಾರಸ್ಸು ಇಲ್ಲದೆ ಎಸ್​​ಸಿ ಅಥವಾ ಎಸ್​​ಟಿ ಸೇರ್ಪಡೆ ವಿಚಾರವಾಗಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಕೇಂದ್ರ ಸರ್ಕಾರವು 2022ರಲ್ಲೇ ತೀರ್ಮಾನ ಕೈಗೊಂಡಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ.

ಮಣಿಪುರದ ವಿಷಯದಲ್ಲಿ, ಸಂವಿಧಾನದ 371 (ಸಿ) ಪರಿಚ್ಛೇದದ ದೃಷ್ಟಿಯಿಂದ, ರಾಜ್ಯ ಸರ್ಕಾರವು ಗುಡ್ಡಗಾಡು ಪ್ರದೇಶಗಳ ಸಮಿತಿಯ ಒಪ್ಪಿಗೆಯನ್ನು ಸಹ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ರಾಜ್ಯ ಸರ್ಕಾರದ ಸ್ಪಷ್ಟ ಶಿಫಾರಸಿನ ನಂತರವಷ್ಟೇ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ರಿಜಿಸ್ಟ್ರಾರ್ ಜನರಲ್ ಹಾಗೂ ಭಾರತೀಯ ಜನಗಣತಿ ಆಯುಕ್ತರು ಪ್ರಸ್ತಾವನೆಯನ್ನು ಪರಿಶೀಲಿಸುತ್ತಾರೆ. ರಿಜಿಸ್ಟ್ರಾರ್ ಜನರಲ್ ಮತ್ತು ರಾಜ್ಯ ಸರ್ಕಾರಗಳು ನಿಸ್ಸಂದೇಹವಾಗಿ ಶಿಫಾರಸು ಮಾಡಿದ ನಂತರವಷ್ಟೇ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ / ಹೊರಗಿಡುವಿಕೆ ಅಥವಾ ಮಾರ್ಪಾಡು ಮಾಡುವುದಕ್ಕಾಗಿ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಕಳುಹಿಸಿಕೊಡಲಾಗುತ್ತದೆ. ಜತೆಗೆ, ತಾಂತ್ರಿಕ ವಿಚಾರಗಳ ಪರಿಶೀಲನೆಗಾಗಿ ಬುಡಕಟ್ಟುಗಳ ರಾಷ್ಟ್ರೀಯ ಆಯೋಗಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದಾದ ನಂತರ, ಹೆಚ್ಚಿನ ಪರಿಶೀಲನೆಗಾಗಿ ಕೇಂದ್ರ ಗೃಹ ಸಚಿವ ಸಂಪುಟವು ರಾಜ್ಯದ ಅಧಿಕಾರಿಗಳ ಜೊತೆಗೆ ಮಾನವಶಾಸ್ತ್ರ, ಜನಾಂಗಶಾಸ್ತ್ರ ಮತ್ತು ಇತರ ಸಾಮಾಜಿಕ ವಿಜ್ಞಾನಗಳ ತಜ್ಞರ ಅಥವಾ ಸಂಸ್ಥೆಗಳ ಸಮಿತಿ ರಚನೆ ಮಾಡುವ ಸಾಧ್ಯತೆ ಇದೆ. ಈ ಸಮಿತಿಯಲ್ಲಿ ರಿಜಿಸ್ಟ್ರಾರ್ ಜನರಲ್ ಪ್ರತಿನಿಧಿಗಳನ್ನೂ ನಿಯೋಜಿಸಲಿದೆ. ಸಂಬಂಧಪಟ್ಟ ಪ್ರದೇಶಗಳಲ್ಲಿ ಜನರ ಜತೆ ಸಾರ್ವಜನಿಕ ಸಂವಾದ ಪ್ರಕ್ರಿಯೆಯನ್ನೂ ನಡೆಸಲಿದೆ.

ಇದನ್ನೂ ಓದಿ: Kuruba Community: ಕುರುಬ ಸಮುದಾಯವನ್ನು ಕಡೆಗಣಿಸಬೇಡಿ, ಕಾಂಗ್ರೆಸ್​ಗೆ ಸಿದ್ದರಾಮಾನಂದಪುರಿ ಸ್ವಾಮೀಜಿ ಎಚ್ಚರಿಕೆ

ರಾಜ್ಯ ಸರ್ಕಾರ ಹಾಗೂ ರಿಜಿಸ್ಟ್ರಾರ್ ಜನರಲ್ ಶಿಫಾರಸಿನ ಹೊರತಾಗಿಯೂ ರಾಷ್ಟ್ರೀಯ ಬುಡಕಟ್ಟು ಆಯೋಗ ಸಮ್ಮತಿ ಸೂಚಿಸದಿದ್ದಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಆ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟಕ್ಕೆ ಕಳುಹಿಸದೇ ಇರಬಹುದು ಎಂದು ರಾಘವ್ ಚಂದ್ರ ವಿಶ್ಲೇಷಿಸಿದ್ದಾರೆ.

ರಾಜ್ಯ ಸರ್ಕಾರ ಹಾಗೂ ರಿಜಿಸ್ಟ್ರಾರ್ ಜನರಲ್ ಶಿಫಾರಸುಗಳನ್ನು ರಾಷ್ಟ್ರೀಯ ಬುಡಕಟ್ಟು ಆಯೋಗ ಒಪ್ಪಿದರಷ್ಟೇ ಪ್ರಸ್ತಾವನೆ ಮುಂದಿನ ಹಂತಕ್ಕೆ ಹೋಗುತ್ತದೆ. ಸಚಿವಸಂಪುಟದಲ್ಲಿ ಅನುಮೋದನೆ ಪಡೆದು ಬಳಿಕ ಸಂಸತ್​ನಲ್ಲಿ ತಿದ್ದುಪಡಿ ಆದೇಶಕ್ಕೆ ಅನುಮೋದನೆ ಪಡೆಯಬೇಕಾಗುತ್ತದೆ.

ಇಷ್ಟೆಲ್ಲ ಪ್ರಕ್ರಿಯೆಗಳು ನಡೆಯಬೇಕಿರುವ ಕಾರಣ, ಕುರುಬ ಸಮುದಾಯವನ್ನು ಎಸ್​​ಟಿಗೆ ಸೇರ್ಪಡೆಗೊಳಿಸಿ ಮೀಸಲಾತಿ ನೀಡುವಂತೆ ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಿದ್ದರೂ ಅದು ತಕ್ಷಣಕ್ಕೆ ಜಾರಿಯಾಗುವುದು ಕಷ್ಟಸಾಧ್ಯ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:15 pm, Sat, 22 July 23