Karnataka Budget: ಜಿಎಸ್​ಟಿ ತರ್ಕಬದ್ಧಗೊಳಿಸಿದ್ದರಿಂದ ರಾಜ್ಯಕ್ಕೆ ರಾಜಸ್ವ ಸಂಗ್ರಹಣೆ ಕಡಿಮೆ- ಸಿದ್ದರಾಮಯ್ಯ

Karnataka Budget 2026: CM Siddaramaiah says Karnataka not got its right due in GST share from Centre: ಕೇಂದ್ರದ ತೆರಿಗೆ ನೀತಿಯ ಬದಲಾವಣೆ ಮತ್ತು ಜಿಎಸ್​ಟಿ ತರ್ಕಬದ್ಧಗೊಳಿಸುವಿಕೆಯಿಂದ ಕರ್ನಾಟಕ ರಾಜ್ಯಕ್ಕೆ ರಾಜಸ್ವ ಸಂಗ್ರಹಣೆಯಲ್ಲಿ ಕಡಿಮೆ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಜಿಎಸ್​ಟಿ ಸಂಗ್ರಹದಲ್ಲಿ ದೇಶದಲ್ಲೇ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ, ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನ್ಯಾಯಯುತ ಪಾಲು ಸಿಗುತ್ತಿಲ್ಲ ಎಂದು ಬಜೆಟ್ ಮಂಡಣೆಯ ವೇಳೆ ಮುಖ್ಯಮಂತ್ರಿಗಳು ಕಿಡಿಕಾರಿದ್ದಾರೆ.

Karnataka Budget: ಜಿಎಸ್​ಟಿ ತರ್ಕಬದ್ಧಗೊಳಿಸಿದ್ದರಿಂದ ರಾಜ್ಯಕ್ಕೆ ರಾಜಸ್ವ ಸಂಗ್ರಹಣೆ ಕಡಿಮೆ- ಸಿದ್ದರಾಮಯ್ಯ
ಜಿಎಸ್​ಟಿ

Updated on: Mar 06, 2026 | 11:29 AM

ಬೆಂಗಳೂರು, ಮಾರ್ಚ್ 6: ಕೇಂದ್ರ ಸರ್ಕಾರವು ಜಿಎಸ್​ಟಿ ತರ್ಕಬದ್ಧಗೊಳಿಸಿದ್ದರಿಂದ (GST Rationalization) ಮತ್ತು ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದರಿಂದ ರಾಜ್ಯಕ್ಕೆ ರಾಜಸ್ವ ಸಂಗ್ರಹಣೆ ಕಡಿಮೆ ಆಗಿದೆ. ಆದಾಗ್ಯೂ ರಾಜ್ಯ ಸರ್ಕಾರ ಮೂರು ವರ್ಷಗಳಿಂದ ವಿತ್ತೀಯ ಶಿಸ್ತು ಕಾಯ್ದುಕೊಂಡು ಜವಾಬ್ದಾರಿತನ ಮೆರೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ದಾಖಲೆಯ 4.48 ಲಕ್ಷ ಕೋಟಿ ರೂ ಮೊತ್ತದ ಮುಂಗಡಪತ್ರವನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಿದ ಸಿದ್ದರಾಮಯ್ಯ, ಜಿಎಸ್​ಟಿ ಹಂಚಿಕೆಯಲ್ಲಿ ರಾಜ್ಯಗಳಿಗೆ ಆಗಿರುವ ಅನ್ಯಾಯವನ್ನು ವಿವರಿಸಿದ್ದಾರೆ.

“ಕರ್ನಾಟಕವು ಸಂಪನ್ಮೂಲ ಕ್ರೋಢೀಕರಣ ಸಾಮರ್ಥ್ಯದೊಂದಿಗೆ ಮುಂದೆ ಸಾಗುತ್ತಿದೆ. ಆದಾಗ್ಯೂ ಕೇಂದ್ರ ಸರ್ಕಾರ ಜಾರಿಗೆ ತಂದ ತೆರಿಗೆ ನೀತಿ ಬದಲಾವಣೆಯಿಂದ ರಾಜ್ಯದ ರಾಜಸ್ವ ಸಂಗ್ರಹಣೆಗೆ ಸವಾಲುಗಳು ಎದುರಾಗಿವೆ. ಈ ಸವಾಲುಗಳ ನಡುವೆಯೂ ನಮ್ಮ ಸರ್ಕಾರ ಕೈಗೊಂಡ ಸಂಪನ್ಮೂಲ ಕ್ರೋಢೀಕರಣ ಕ್ರಮದಿಂದಾಗಿ ರಾಜಸ್ವ ಸಂಗ್ರಹಣೆಯಲ್ಲಿ ಸ್ಥಿರತೆ ಸಾಧಿಸಲಾಗಿದೆ. 2024-25ರ ರಾಜಸ್ವ ಸಂಗ್ರಹಣೆಗೆ ಹೋಲಿಸಿದರೆ 2025-26ರಲ್ಲಿ ರಾಜಸ್ವ ಸಂಗ್ರಹಣೆ ಶೇ. 8.2ರಷ್ಟು ಬೆಳವಣಿಗೆ ಸಾಧಿಸಿದೆ.

“ಸರಕು ಮತ್ತು ಸೇವಾ ತೆರಿಗೆಯು ರಾಜ್ಯದ ಪ್ರಮುಖ ರಾಜಸ್ವ ಆದಾಯವಾಗಿದೆ. ರಾಜ್ಯದ ಸ್ವಂತ ತೆರಿಗೆ ರಾಜಸ್ವದಲ್ಲಿ ಜಿಎಸ್​ಟಿ ಶೇ. 40 ಪಾಲು ಹೊಂದಿದೆ. ಜಿಎಸ್​ಟಿ ರಾಜಸ್ವ ಸಂಗ್ರಹದಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಕೇಂದ್ರವು ಜಿಎಸ್​ಟಿಯನ್ನು ತರ್ಕಬದ್ಧಗೊಳಿಸಿದ್ದರಿಂದ ರಾಜ್ಯದ ರಾಜಸ್ವ ಸಂಗ್ರಹಣೆ ಇಳಿಕೆ ಆಗಿದೆ. ಜಿಎಸ್​ಟಿ ತರ್ಕಬದ್ಧಗೊಳಿಸುವ ಮುನ್ನ 2025-26ರಲ್ಲಿ ಸರಾಸರಿ ಮಾಸಿಕ ಜಿಎಸ್​ಟಿ ಸಂಗ್ರಹಣೆಯು ಶೇ. 10ರಷ್ಟು ಬೆಳವಣಿಗೆ ದಾಖಲಿಸಿತ್ತು. ಜಿಎಸ್​ಟಿ ತರ್ಕಬದ್ಧಗೊಳಿಸಿದ ಬಳಿಕ ಜಿಎಸ್​ಟಿ ಮಾಸಿಕ ಸಂಗ್ರಹಣೆಯ ಬೆಳವಣಿಗೆ ಶೇ. 4ಕ್ಕೆ ಕಡಿಮೆ ಆಗಿದೆ. ಪ್ರಸಕ್ತ ಸಾಲಿನಲ್ಲಿ ಜಿಎಸ್​ಟಿ ಸಂಗ್ರಹಣೆಯಲ್ಲಿ 10,000 ಕೋಟಿ ರೂ ಕಡಿಮೆ ಆಗಿದೆ. ಮುಂದಿನ ವರ್ಷಕ್ಕೆ 15,000 ಕೋಟಿ ರೂ ರಾಜಸ್ವ ಪ್ರಕ್ರಿಯೆಯನ್ನು ಅಂದಾಜಿಸಲಾಗಿದೆ” ಎಂದು ಸಿಎಂ ವಿವರಿಸಿದ್ದಾರೆ.

ಇದನ್ನೂ ಓದಿ: ಮದ್ಯ ಪ್ರಿಯರಿಗೆ ಬಿಗ್​​ ಶಾಕ್​​ ನೀಡಿದ ಸಿದ್ದರಾಮಯ್ಯ: ಬಜೆಟ್​​​ನಲ್ಲಿ ಮಹತ್ವದ ನಿರ್ಧಾರ

“ರಾಷ್ಟ್ರೀಯ ಮಟ್ಟದಲ್ಲೂ ಸಹ ಜಿಎಸ್​ಟಿ ರಾಜಸ್ವ ಸಂಗ್ರಹಣೆ ನಿರಾಶಾದಾಯಕವಾಗಿದೆ. 2025-26ರ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯ ಅಂದಾಜಿನಲ್ಲಿ ಹೋಲಿಸಿದರೆ ಪರಿಷ್ಕೃತ ಅಂದಾಜಿನಲ್ಲಿ ಜಿಎಸ್​ಟಿ ಸಂಗ್ರಹಣೆಯು ಶೇ. 11ರಷ್ಟು ಇಳಿಕೆ ಇದೆ. 2026-27ರ ಆಯವ್ಯಯ ಅಂದಾಜಿನಲ್ಲಿ ಜಿಎಸ್​ಟಿ ರಾಜಸ್ವ ಸಂಗ್ರಹಣೆಯ ಅಂದಾಜು ಶೇ. 13ರಷ್ಟು ಇಳಿಕೆ ಆಗಿದೆ. 2024-26ರ ವಾಸ್ವವಿಕ ಸಂಗ್ರಹಣೆಗಿಂತಲೂ ಕಡಿಮೆ ಆಗಿದೆ. ದೇಶದ ಜಿಎಸ್​ಟಿ ಸಂಗ್ರಹಣೆಯು ಪ್ರಸಕ್ತ ಸಾಲಿನಲ್ಲಿ 1.3 ಲಕ್ಷ ಕೋಟಿ ರೂ, ಮತ್ತು ಮುಂದಿನ ವರ್ಷದಲ್ಲಿ 2 ಲಕ್ಷ ಕೋಟಿ ರೂ ಕೊರತೆ ಆಗಲಿದೆ. ಇದರ ಪರಿಣಾಮವಾಗಿ ರಾಜ್ಯಗಳಿಗೆ ನೀಡುವ ತೆರಿಗೆ ಹಂಚಿಕೆಯು ಕಡಿಮೆ ಆಗಲಿದೆ.

“ತೆರಿಗೆ ನೀತಿಯಲ್ಲಿ ಬದಲಾವಣೆ, ಜಿಎಸ್​ಟಿ ತರ್ಕಬದ್ಧಗೊಳಿಸುವಿಕೆಯಿಂದ ಕೇಂದ್ರ ಸರ್ಕಾರಕ್ಕಿಂತ ಹೆಚ್ಚಾಗಿ ರಾಜ್ಯಗಳ ರಾಜಸ್ವ ಸಂಗ್ರಹಣೆ ಮೇಲೆ ನೇರವಾಗಿ ಪ್ರಭಾವ ಬೀರಿದೆ. ರಾಜ್ಯಗಳ ರಾಜಸ್ವ ನಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಮಾದಕವಸ್ತುಗಳು ಮತ್ತು ಐಷಾರಾಮಿ ವಸ್ತುಗಳ ಮೇಲೆ ವಿಧಿಸುತ್ತಿರುವ ಸೆಸ್ ಮತ್ತು ಇತರ ತೆರಿಗೆಗಳ ಆದಾಯದ ಸಂಪೂರ್ಣ ಮೊತ್ತವೂ ಕೇಂದ್ರ ಸರ್ಕಾರಕ್ಕೆ ಸೇರಲಿದೆ” ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಿಎಸ್​ಟಿ ತರ್ಕಬದ್ಧಗೊಳಿಸುವಿಕೆಗೆ ರಾಜ್ಯದ ತಾತ್ವಿಕ ಬೆಂಬಲ: ಸಿದ್ದರಾಮಯ್ಯ

‘ಜಿಎಸ್​ಟಿ ತರ್ಕಬದ್ಧಗೊಳಿಸುವಿಕೆಯನ್ನು ರಾಜ್ಯ ಸರ್ಕಾರ ತಾತ್ವಿಕವಾಗಿ ಬೆಂಬಲಿಸುತ್ತದೆ. ಆದರೆ, ಇದರಿಂದ ರಾಜ್ಯಗಳಿಗೆ ಉಂಟಾಗುವ ರಾಜಸ್ವ ನಷ್ಟವನ್ನು ಪರಿಹರಿಸುವುದರ ಜೊತೆಗೆ, ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಕರ್ನಾಟಕವು ಇತರ ರಾಜ್ಯಗಳೊಂದಿಗೆ ಸೇರಿ ಜಿಎಸ್​ಟಿ ಮಂಡಳಿಗೆ ಜಂಟಿ ಜ್ಞಾಪನ ಪತ್ರ ಸಲ್ಲಿಸಿತ್ತು. ರಾಜ್ಯಗಳಿಗೆ ಜಿಎಸ್​ಟಿ ಪರಿಹಾರ ಕೊಡಬೇಕೆಂಬ ರಾಜ್ಯದ ಒತ್ತಾಯ ಮುಂದುವರಿಯಲಿದೆ. 14ನೇ ಹಣಕಾಸು ಆಯೋಗವು ರಾಜ್ಯದ ತೆರಿಗೆ ಪಾಲನ್ನು ಶೇ. 4.71 ಎಂದು ಶಿಫಾರಸು ಮಾಡಿತ್ತು. ಆದರೆ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯದ ತೆರಿಗೆ ಪಾಲು 3.647ಕ್ಕೆ ಇಳಿಕೆ ಆಗಿದೆ. ಇದು ಹಿಂದಿನ ಶಿಫಾರಸಿಗೆ ಹೋಲಿಸಿದರೆ ಶೇ. 23ರಷ್ಟು ಇಳಿಕೆ ಆಗಿದೆ’ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹೆಸರು ಬದಲಾವಣೆ ಮಾಡಿ ಸಿಎಂ ಘೋಷಣೆ

15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ 65,000 ಕೋಟಿ ರೂ ಆದಾಯ ನಷ್ಟ

15ನೇ ಹಣಕಾಸು ಆಯೋಗದ 6 ವರ್ಷದ ಅವಧಿಯಲ್ಲಿ ರಾಜ್ಯಕ್ಕೆ ತೆರಿಗೆ ನಷ್ಟ ಆಗಿರುವುದು 65,000 ಕೋಟಿ ರೂ. ಇದಲ್ಲದೇ 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿದ 5,495 ಕೋಟಿ ರೂ ವಿಶೇಷ ಅನುದಾನ ಮತ್ತು 6,000 ಕೋಟಿ ರೂಗಳ ರಾಜ್ಯ ಕೇಂದ್ರಿತ ಅನುದಾನವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿರುವುದಿಲ್ಲ. ರಾಜ್ಯಗಳಿಗೆ ನ್ಯಾಯಯುತ ತೆರಿಗೆ ಮಾಡಲು, ಸಮಾನತೆ ಮತ್ತು ಬೆಳವಣಿಗೆ ಎರಡಕ್ಕೂ ಪ್ರಾಮುಖ್ಯತೆ ನೀಡುವ ಸೂತ್ರವನ್ನು ಶಿಫಾರಸು ಮಾಡಬೇಕೆಂದು ರಾಜ್ಯವು 16ನೇ ಹಣಕಾಸು ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us