ಸಿಎಂ ಸಿದ್ದರಾಮಯ್ಯ ಬಣದ ಡಿನ್ನರ್​​ ಮೀಟಿಂಗ್​​ ವೇಳೆ ಏನೆಲ್ಲ ಚರ್ಚೆ?: ಇಲ್ಲಿದೆ ಇನ್​​ಸೈಡ್​​ ಮಾಹಿತಿ

ಬೆಳಗಾವಿ ಚಳಿಗಾಲದ ಅಧಿವೇಶನದ ನಡುವೆ ಸಿದ್ದರಾಮಯ್ಯ ಆಪ್ತವಲಯದ ಡಿನ್ನರ್ ಮೀಟಿಂಗ್ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವ ಬಗ್ಗೆ, ಅಹಿಂದಾ ಮತಗಳ ಪ್ರಾಮುಖ್ಯತೆ, ಡಿಸಿಎಂ ಡಿಕೆಶಿಗೆ ಕೌಂಟರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತಮ್ಮ ಬಣಕ್ಕೆ ಪಡೆಯುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ದೆಹಲಿಯಿಂದ ವರಿಷ್ಠರ ಬುಲಾವ್ ಸಾಧ್ಯತೆ ಹಿನ್ನೆಲೆಯಲ್ಲಿ ಮುಂದಿನ ರಾಜಕೀಯ ತಂತ್ರಗಳ ಕುರಿತು ಚರ್ಚೆ ನಡೆಸಲಾಗಿದೆ.

ಸಿಎಂ ಸಿದ್ದರಾಮಯ್ಯ ಬಣದ ಡಿನ್ನರ್​​ ಮೀಟಿಂಗ್​​ ವೇಳೆ ಏನೆಲ್ಲ ಚರ್ಚೆ?: ಇಲ್ಲಿದೆ ಇನ್​​ಸೈಡ್​​ ಮಾಹಿತಿ
ಡಿನ್ನರ್​​ ಮೀಟಿಂಗ್​​ ಬಂದ ನಾಯಕರು
Edited By:

Updated on: Dec 19, 2025 | 9:21 AM

ಬೆಳಗಾವಿ, ಡಿಸೆಂಬರ್​​ 19: ಚಳಿಗಾಲದ ಅಧಿವೇಶನದ ನಡುವೆ ರಾಜ್ಯ ಕಾಂಗ್ರೆಸ್​​ ಪಾಳಯದಲ್ಲಿ ಡಿನ್ನರ್​​ ಪಾಲಿಟಿಕ್ಸ್​​ ಜೋರಾಗಿ ನಡೆಯುತ್ತಿದೆ. ಸಚಿವ ಸತೀಶ್​​ ಜಾರಕಿಹೊಳಿ ಏರ್ಪಡಿಸಿದ್ದ ಡಿನ್ನರ್​​ನಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಅವರ ಆಪ್ತವಲಯ ಭಾಗಿಯಾಗಿದೆ. ಅನಾರೋಗ್ಯದ ನಡುವೆಯೂ ಸಿದ್ದರಾಮಯ್ಯ ಡಿನ್ನರ್​​ನಲ್ಲಿ ಭಾಗಿಯಾಗಿದ್ದಾರೆ. ಅಧಿವೇಶನ ಮುಗಿಯುತ್ತಿದ್ದಂತೆ ರಾಜ್ಯ ನಾಯಕರಿಗೆ ಹೈಕಮಾಂಡ್​​ ಬುಲಾವ್​​ ಸಾಧ್ಯತೆ ಹಿನ್ನಲೆ ರಾಜಕೀಯ ಚಟುವಟಿಕೆಗಳು ಮತ್ತೆ ಗರಿಗೆದರಿವೆ ಎನ್ನಲಾಗಿದೆ.

ಡಿನ್ನರ್​​ ಮೀಟಿಂಗ್​​ ವೇಳೆ ಏನೆಲ್ಲ ಚರ್ಚೆ?

ಊಟದ ಹೆಸರಲ್ಲಿ ಸಿದ್ದರಾಮಯ್ಯ ಬಣದ ನಾಯಕರೆಲ್ಲ ಒಟ್ಟಿಗೆ ಸೇರಿದ್ದರೂ ಹಲವು ರಾಜಕೀಯ ವಿಚಾರಗಳು ಈ ವೇಳೆ ಚರ್ಚೆಯಾಗಿವೆ. ಸಿದ್ದರಾಮಯ್ಯ ದೆಹಲಿಗೆ ಹೋಗುವ ಮುನ್ನ ಡಿಸಿಎಂ ಡಿ.ಕೆ. ಶಿವಕುಮಾರ್​​ ದೆಹಲಿಗೆ ಹೋಗುವ ಸಾಧ್ಯತೆ ಇದೆ. ಒಂದೊಮ್ಮೆ ಅಂದುಕೊಂಡಂತೆ ಆದ್ರೆ ಯಾವ ರೀತಿಯಾಗಿ ತಾವು ಮುಂದಿನ ನಿರ್ಧಾರ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ. ಅಲ್ಲದೆ ಸಿಎಂ ಸ್ಥಾನ ಬದಲಾವಣೆ ವಿಚಾರ ಬಂದ್ರೆ ಅದನ್ನು ಹೇಗೆ ನಿಭಾಯಿಸಬೇಕು, ಸಿಎಂ ಸ್ಥಾನ ಬದಲಾವಣೆ ಆದರೆ ಅದರಿಂದ ಪಕ್ಷ ಹಾಗೂ ಸರ್ಕಾರಕ್ಕೆ ಯಾವ ರೀತಿ ಡ್ಯಾಮೇಜ್ ಆಗಲಿದೆ ಅನ್ನೋದನ್ನ ಹೇಗೆ ಮನವರಿಕೆ ಮಾಡಬೇಕು ಎಂಬ ಬಗ್ಗೆಯೂ ಮಾತುಕತೆ ನಡೆದಿದೆ.

ಇದನ್ನೂ ಓದಿ: ಕಾಂಗ್ರೆಸ್​​ನಲ್ಲಿ ಮುಂದುವರಿದ ಡಿನ್ನರ್ ಮೀಟಿಂಗ್; ಅನಾರೋಗ್ಯದ ನಡುವೆಯೂ ಸಿಎಂ ಭಾಗಿ

ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಬೇಡಿ. ಸಿಎಂ ಸ್ಥಾನ ಬಿಟ್ಟು ಕೊಟ್ಟರೆ ಸಾಂಪ್ರಾದಾಯಿಕ ಅಹಿಂದಾ ಮತಗಳು ದೂರವಾಗುವ ಸಾಧ್ಯತೆ ಬಗ್ಗೆ ಹೈಕಮಾಂಡ್‌ಗೆ ಮನವರಿಕೆ ಮಾಡಿ. ಅಹಿಂದಾ ಸಚಿವರು, ಬಹುತೇಕ ಶಾಸಕರು ತಮ್ಮ ಪರವಾಗಿದ್ದಾರೆಂದು ಗಟ್ಟಿಯಾಗಿ ಹೇಳಿ ಎಂದು ಸಿದ್ದರಾಮಯ್ಯ ಅವರ ಮೇಲೆ ಬೆಂಬಲಿಗರು ಈ ವೇಳೆ ಒತ್ತಡ ಹೇರಿದ್ದಾರೆ. ರಾಜಣ್ಣರಂತೆ ಇನ್ನುಳಿದ ಅಹಿಂದಾ ನಾಯಕರು ರಾಹುಲ್‌ ಗಾಂಧಿಗೆ ಪತ್ರ ಚಳುವಳಿ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ. ಸಿದ್ದರಾಮಯ್ಯರ ವರ್ಚಸ್ಸು ಹೆಚ್ಚಿಸಲು ಶಕ್ತಿ ಪ್ರದರ್ಶನದಂತಹ ಸಮಾವೇಶ ಆಯೋಜನೆ ಬಗ್ಗೆಯೂ ಚಿಂತಿಸಲಾಗಿದ್ದು, ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಮಾದರಿಯಲ್ಲಿ ಜನವರಿ ವೇಳೆ ಅಹಿಂದಾ ಸಮಾವೇಶ ನಡೆಸುವ ಬಗ್ಗೆ ಚರ್ಚೆಯಾಗಿದೆ. ಈ ಸಮಾವೇಶದಲ್ಲಿ ಲಕ್ಷಾಂತರ ಜನರನ್ನು ಸೇರಿ ರಾಜ್ಯದ ಜನ ಸಿದ್ದರಾಮಯ್ಯ ಪರ ಇದ್ದಾರೆಂಬ ಸಂದೇಶ ರವಾನಿಸುವ ಪ್ಲ್ಯಾನ್ ಮಾಡಲಾಗಿದೆ.

ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೂ ಸಿದ್ದರಾಮಯ್ಯ ಬೆಂಬಲಿಗರು ಕಣ್ಣಿಟ್ಟಿದ್ದು, ಸಿಎಂ ಹುದ್ದೆಯ ಜೊತೆಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಲೂ ಪ್ರಯತ್ನಿಸೋಣ. ಆ ಮೂಲಕ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಡ್ತಿರುವ ಡಿಕೆಶಿಗೆ ಕೌಂಟರ್‌ ಕೊಡೋಣ ಎಂಬ ಬಗ್ಗೆಯೂ ಮಾತುಕತೆ ನಡೆದಿದ್ದು, ಜನವರಿ ತಿಂಗಳಲ್ಲಿ ಸತೀಶ್ ಜಾರಕಿಹೊಳಿ‌ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಿಸುವ ನಿಟ್ಟಿನಲ್ಲಿ ಒತ್ತಡ ಹಾಕುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 9:14 am, Fri, 19 December 25