ಬಿಡುವಿಲ್ಲದೆ ಶವ ಸಂಸ್ಕಾರ ನಡೆಸಿ ಸುಸ್ತಾದ ಚಿತಾಗಾರದ ಸಿಬ್ಬಂದಿ; ಮನೆಗೆ ಹೋಗಲೂ ಸಮಯವಿಲ್ಲ
ನಿನ್ನೆ ಬೆಳಗ್ಗೆ 9 ಗಂಟೆಯಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ಚಿತಾಗಾರ ಸಿಬ್ಬಂದಿಗಳು ಮತ್ತೆ ಮುಂಜಾನೆ 7 ಗಂಟೆಯಿಂದಲೇ ತಮ್ಮ ಕಾರ್ಯ ಶುರು ಮಾಡಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದು, ಮೃತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೂ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಸಾಲು ಸಾಲು ಶವಗಳನ್ನು ದಹಿಸಿ ಚಿತಾಗಾರದ ಸಿಬ್ಬಂದಿ ಸುಸ್ತಾಗಿ ಹೋಗಿದ್ದಾರೆ. ನಿನ್ನೆ (ಏಪ್ರಿಲ್ 20) ಒಂದೇ ದಿನ ಯಲಹಂಕ ಬಳಿಯ ಮೇಡಿ ಅಗ್ರಹಾರದ ಚಿತಾಗಾರದಲ್ಲಿ 39 ಮೃತದೇಹಗಳ ಅಂತ್ಯಸಂಸ್ಕಾರ ನಡೆಸಲಾಗಿದೆ. ಇಂದು ಬೆಳಗ್ಗೆ 7 ಗಂಟೆಯಿಂದಲೇ ಅಂತ್ಯಕ್ರಿಯೆ ಕೆಲಸ ಶುರು ಮಾಡಲಾಗಿದ್ದು, ಈಗಾಗಲೇ ಮೂರು ಆಂಬ್ಯುಲೆನ್ಸ್ಗಳು ಸರತಿ ಸಾಲಿನಲ್ಲಿ ನಿಂತಿವೆ. ಅಂತ್ಯಸಂಸ್ಕಾರಕ್ಕಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ.
ನಿನ್ನೆ ದಿನವಿಡೀ ಕೊವಿಡ್ನಿಂದ ಮರಣ ಹೊಂದಿದವರ ಶವ ಸಂಸ್ಕಾರ ನಡೆದಿದ್ದು, ರಾತ್ರಿ ಕೂಡ ಮೃತ ದೇಹಗಳನ್ನು ಸುಡುವ ಪ್ರಕ್ರಿಯೆ ಮುಂದುವರೆದಿತ್ತು. ನಿನ್ನೆ ಬೆಳಗ್ಗೆ 9 ಗಂಟೆಯಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ಚಿತಾಗಾರ ಸಿಬ್ಬಂದಿ ಮತ್ತೆ ಮುಂಜಾನೆ 7 ಗಂಟೆಯಿಂದಲೇ ತಮ್ಮ ಕಾರ್ಯ ಶುರು ಮಾಡಿದ್ದಾರೆ. ಹೀಗೆ ಬಿಡುವಿಲ್ಲದೇ ಶವ ದಹಿಸುತ್ತಿರುವ ಸಿಬ್ಬಂದಿ ಹೈರಾಣಾಗಿ ಹೋಗಿದ್ದಾರೆ.
ಚರಕ ಆಸ್ಪತ್ರೆ ಎದುರು ಆ್ಯಂಬುಲೆನ್ಸ್‌ನಲ್ಲೇ ರೋಗಿ ಸಾವು ಗಂಟೆಗಟ್ಟಲೆ ಆಸ್ಪತ್ರೆಯ ಮುಂದೆ ಕಾದರೂ ವೆಂಟಿಲೇಟರ್ ಬೆಡ್ ಸಿಗದೆ 48 ವರ್ಷದ ವ್ಯಕ್ತಿ ಸಾವಿಗೀಡಾದ ಘಟನೆ ಬೆಂಗಳೂರಿನ ಶಿವಾಜಿನಗರದಲ್ಲಿರುವ ಚರಕ ಆಸ್ಪತ್ರೆಯಲ್ಲಿ ನಡೆದಿದೆ. ಕೊರೊನಾ ಸೋಂಕಿಗೆ ಒಳಗಾದ ವ್ಯಕ್ತಿ ವೆಂಟಿಲೇಟರ್ ಸಿಗದ ಕಾರಣ ಚರಕ ಆಸ್ಪತ್ರೆ ಎದುರು ಆ್ಯಂಬುಲೆನ್ಸ್‌ನಲ್ಲೇ ಮಧ್ಯ ರಾತ್ರಿ 1 ಗಂಟೆಗೆ ಕೊನೆ ಉಸಿರೆಳೆದಿದ್ದಾರೆ.
ಬಾವಲಿ ಚೆಕ್‌ಪೋಸ್ಟ್‌ಗೆ ಇಂದು ಸಚಿವ ಸೋಮಶೇಖರ್ ಭೇಟಿ ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್‌ಪೋಸ್ಟ್‌ಗೆ ಇಂದು ಸಚಿವ ಸೋಮಶೇಖರ್ ಭೇಟಿ ನೀಡಲಿದ್ದಾರೆ. ಕರ್ನಾಟಕ, ಕೇರಳ ಗಡಿಯಲ್ಲಿರುವ ಈ ಬಾವಲಿ ಚೆಕ್ಪೋಸ್ಟ್ನಲ್ಲಿ ಕೈಗೊಂಡಿರುವ ಕೊವಿಡ್ ನಿಯಂತ್ರಣಾ ಕ್ರಮಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಸಚಿವ ಸೋಮಶೇಖರ್ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.