ಕರ್ನಾಟಕದಲ್ಲಿ ಅಕ್ರಮವಾಗಿ ಇರುವ ವಿದೇಶಿಯರ ಪತ್ತೆಗೆ ಸಮಿತಿ ರಚನೆ; ಅವರನ್ನು ಗಡಿಪಾರು ಮಾಡಲು ಚಿಂತನೆ
ಅಕ್ರಮವಾಗಿ ನೆಲೆಸಿರುವವರನ್ನು ಗಡಿಪಾರು ಮಾಡುವುದು. ಪ್ರತಿ ತಿಂಗಳು ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡುವುದು ಈ ಸಮಿತಿಯ ಜವಾಬ್ದಾರಿ ಆಗಿರಲಿದೆ.

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಅಕ್ರಮವಾಗಿ ಇರುವ ವಿದೇಶಿಯರ ಪತ್ತೆಗೆ ಸಮಿತಿ ರಚಿಸಲಾಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಈ ಸಮಿತಿ ರಚನೆ ಮಾಡಲಾಗುವುದು. ಒಳಾಡಳಿತ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಪ್ರಾದೇಶಿಕ ವಿದೇಶಿ ನೋಂದಣಾಧಿಕಾರಿ, ಗುಪ್ತಚರ ಇಲಾಖೆ ಪೊಲೀಸ್ ಅಧೀಕ್ಷಕರು, ಸಂಬಂಧಪಟ್ಟ ಪೊಲೀಸ್ ವರಿಷ್ಠಾಧಿಕಾರಿಗಳ ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿದುಬಂದಿದೆ.
ಅಕ್ರಮವಾಗಿ ನೆಲೆಸಿರುವವರನ್ನು ಗಡಿಪಾರು ಮಾಡುವುದು. ಪ್ರತಿ ತಿಂಗಳು ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡುವುದು ಈ ಸಮಿತಿಯ ಜವಾಬ್ದಾರಿ ಆಗಿರಲಿದೆ.
ಕರ್ನಾಟಕದಲ್ಲಿರುವ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಕ್ರಮ ವಲಸಿಗರನ್ನು ರಾಜ್ಯದಿಂದ ಹೊರಕ್ಕೆ ಕಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೂನ್ 13 ರಂದು ತಿಳಿಸಿದ್ದರು. ಮಾಧ್ಯಮದ ಜೊತೆ ಮಾತನಾಡಿದ ಅವರು, ಸಂಬಂಧಪಟ್ಟ ಅಧಿಕಾರಿಗಳಿಗೆ ರಾಜ್ಯದಲ್ಲಿ ಇರುವ ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ತಿಳಿಸಲಾಗಿದೆ ಎಂದು ಹೇಳಿದ್ದರು.
ನಿರಾಶ್ರಿತರಿಗೆ ವಸತಿ ಸೌಲಭ್ಯ ಒದಗಿಸಲು ನಿವೇಶನ ಒದಗಿಸಲು ಕೂಡ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮುಖ್ಯಮಂತ್ರಿ ಅವಧಿ ಮುಗಿಯುವುದರ ಒಳಗಾಗಿ ರಾಜ್ಯದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದರು.
ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ನೆರೆಯ ದೇಶಗಳಾದ ಶ್ರೀಲಂಕಾ ಸಹಿತ ಬಾಂಗ್ಲಾದೇಶ, ಪಾಕಿಸ್ತಾನದ ಅಕ್ರಮ ವಲಸಿಗರು ಇರುವುದು ಕೆಲವಾರು ಪ್ರಕರಣಗಳ ಮೂಲಕ ಬೆಳಕಿಗೆ ಬಂದಿತ್ತು. ಅವರು ಅಕ್ರಮವಾಗಿ ಇಲ್ಲಿಂದ ವಿದೇಶಕ್ಕೆ ತೆರಳವುದು, ಸ್ಥಳೀಯರ ಬಳಿ ಕಾರ್ಮಿಕರಾಗಿ ದುಡಿಯುತ್ತಿರುವ ಬಗ್ಗೆ ಹೇಳಿ ಇಲ್ಲಿ ಇರುತ್ತಿರುವುದು ತಿಳಿದುಬಂದಿತ್ತು. ಭಾರತದಲ್ಲಿ ಆಧಾರ್ ಕಾರ್ಡ್ ಕೂಡ ಮಾಡಿಸಿಕೊಳ್ಳುತ್ತಿದ್ದ ಬಗ್ಗೆ ತಿಳಿದುಬಂದಿತ್ತು. ನಂತರ ವಿದೇಶಕ್ಕೆ ಮಾನವ ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣಗಳನ್ನೂ ಪೊಲೀಸರು ಪತ್ತೆ ಹಚ್ಚಿದ್ದರು.
ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ವೇಳೆ ಬೃಹತ್ ಮಾನವ ಕಳ್ಳಸಾಗಣೆ ವಿಚಾರ ಬಹಿರಂಗವಾಗಿತ್ತು. ಮಾನವ ಕಳ್ಳಸಾಗಣೆ ದಂಧೆಯ ಕಿಂಗ್‌ಪಿನ್ ಸೇರಿ ನಾಲ್ವರನ್ನು ಬಂಧಿಸಲಾಗಿತ್ತು. ಬೆಂಗಳೂರು ಪೊಲೀಸರು ನೀಡಿದ ಮಾಹಿತಿ ಮೇರೆಗೆ ಬಾಂಗ್ಲಾದಲ್ಲಿ ಆರೋಪಿಗಳನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ವಿದೇಶಿ ಅಡ್ಡೆಗಳ ಮೇಲೆ ಸಿಸಿಬಿ ದಾಳಿ, ಅಕ್ರಮವಾಗಿ ವಾಸವಿದ್ದ 38 ಜನರು ಪತ್ತೆ