ಆಪರೇಷನ್ ಸಿಂದೂರ್ ಬಗ್ಗೆ ವಿವಾದಾತ್ಮ ಹೇಳಿಕೆ: ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ದೂರು
ಕೋಲಾರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಅವರು ‘ಆಪರೇಷನ್ ಸಿಂದೂರ್’ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಭಾರತದ ಪ್ರತಿಕ್ರಿಯೆ ಸಾಕಷ್ಟಿಲ್ಲ ಎಂದು ಅವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕೊತ್ತೂರು ಮಂಜುನಾಥ್ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೊತ್ತೂರು ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಒತ್ತಾಯಿಸಿದ್ದಾರೆ

ಬೆಂಗಳೂರು, ಮೇ 20: ಕೋಲಾರ (Kolar) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ (Congress MLA) ಕೊತ್ತೂರು ಮಂಜುನಾಥ್ (Kothur G Manjunath) ವಿರುದ್ಧ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಗರಿಕ ಹಕ್ಕು ಹೋರಾಟ ಸಮಿತಿ ಉಪಾಧ್ಯಕ್ಷ ಗಣೇಶ್ ಸಿಂಗ್ ಎಂಬುವರು ದೂರು ನೀಡಿದ್ದಾರೆ. ಶಾಸಕ ಕೊತ್ತುರು ಮಂಜುನಾಥ್ ದೇಶದ ಜನರ ಭಾವನೆಗೆ ಧಕ್ಕೆ ತಂದಿದ್ದಾರೆ. ಆಪರೇಷನ್ ಸಿಂದೂರ್ (Operation Sindoor) ಬಗ್ಗೆ ಅವಹೇಳನವಾಗಿ ಮಾತಾಡಿದ್ದಾರೆ. ನಾಲ್ಕು ವಿಮಾನ ಹಾರಿಸಿ ಬಡಾಯಿಕೊಚ್ಚಿಕೊಳ್ಳುತ್ತಿದೆ ಅಂದಿದ್ದಾರೆ. ಭಾರತೀಯ ಸೇನೆ ಬಗ್ಗೆ ಮಾತಾಡಿದ್ದಾರೆ ಎಂದು ಗಣೇಶ್ ದೂರು ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿದೆ. ಈ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಮೂಲಕ ಭಾರತೀಯ ಸೇನೆ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ 100 ಮಂದಿ ಉಗ್ರರು ಹತರಾಗಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಆದರೆ, ಈ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಕುರಿತು ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದರು.
ಕೊತ್ತೊರು ಮಂಜುನಾಥ್ ಹೇಳಿದ್ದೇನು?
“ಭಾರತ ಬೂಟಾಟಿಕೆಗೆ ನಾಲ್ಕು ಫ್ಲೈಟ್ ಮೇಲೆ ಕಳುಹಿಸಿದ್ದು ಬಿಟ್ಟರೆ ಏನೂ ಮಾಡಿಲ್ಲ. 26 ಜನ ಮಹಿಳೆಯರ ಅರಶಿನ ಕುಂಕುಮಕ್ಕೆ ಬೆಲೆ ಇಷ್ಟೆಯಾ? ಸಾಮಾನ್ಯ ಪ್ರಜೆಗಳ ಮೇಲೆ ಯುದ್ಧ ಮಾಡುವುದಕ್ಕೆ ನಮ್ಮ ವಿರೋಧವಿದೆ. ಆದರೆ, ನಮ್ಮ ದೇಶದೊಳಗೆ ಬಂದು ಪತ್ನಿಯರ ಎದುರೇ ಪತಿಯರನ್ನು ಹೊಡೆದರೆ ಹೇಗೆ ಸಹಿಸುವುದು? ಆ ಹೆಣ್ಣು ಮಕ್ಕಳು ಗಟ್ಟಿಯಾಗಿರುವುದಕ್ಕೆ ಪರವಾಗಿಲ್ಲ. ಇಲ್ಲಾ ಅಂದರೆ ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಿದ್ದರು. ಅಂತಹದಕ್ಕೆ ಪರಿಹಾರ ಇದಲ್ಲ. ಬೇರಿನಿಂದ ಕೊಂಬೆ ತನಕ ಎಲ್ಲವನ್ನೂ ಹೊಡೆಯಬೇಕು. ಈ ಬಾರಿ ಒಳ್ಳೆಯ ಅವಕಾಶ ಇತ್ತು, ಆದರೆ ಏನೂ ಮಾಡಿಲ್ಲ ಎಂಬುದು ಬೇಸರ ತಂದಿದೆ ಎಂದು ವಿವಾದಾತ್ಮ ಹೇಳಿಕೆ ನೀಡಿದ್ದರು.
ಕೊತ್ತೂರು ಮಂಜುನಾಥ್ ಹೇಳಿಕೆಗೆ ಆಕ್ಷೇಪ
ಭಾರತೀಯ ಸೇನೆಯ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಬಗ್ಗೆ ಕೊತ್ತೂರು ಮಂಜುನಾಥ್ ನೀಡಿದ್ದ ಹೇಳಿಕೆಗೆ ಬಿಜೆಪಿ ಮತ್ತು ಜೆಡಿಎಸ್ ವ್ಯಾಪಕ ಆಕ್ಷೇಪ ವ್ಯಕ್ತಪಡಿಸಿತ್ತು. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನ ಮಾಧ್ಯಮದಲ್ಲಿ ರಾತ್ರೋರಾತ್ರಿ ಸ್ಟಾರ್ ಆದ ನಂತರ, ಮತ್ತೊಬ್ಬ ಕಾಂಗ್ರೆಸ್ ನಾಯಕ ಪಾಕಿಸ್ತಾನದಲ್ಲಿ ಸ್ಟಾರ್ ಆಗಲು ಉತ್ಸುಕರಾಗಿದ್ದಾರೆ” ಎಂದು ಟೀಕಿಸಿದ್ದರು.
“ಪಾಕಿಸ್ತಾನದ ಉಗ್ರರ ವಿರುದ್ಧ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದರೇ, ಪ್ರತಿ ಬಾರಿಯೂ ಕಾಂಗ್ರೆಸ್ಸಿಗರು ಸಾಕ್ಷಿ ಕೇಳಿ, ಸೇನೆಗೆ ಅವಮಾನ ಮಾಡುತ್ತಲೇ ಇದ್ದಾರೆ. “ಆಪರೇಷನ್ ಸಿಂಧೂರ” ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರ ಶೌರ್ಯ, ಪ್ರರಾಕ್ರಮವನ್ನು ಇಡೀ ವಿಶ್ವವೇ ಮೆಚ್ಚಿ ಕೊಂಡಾಡುತ್ತಿದೆ. ಕಾಂಗ್ರೆಸ್ಸಿಗರು ಮಾತ್ರ ಸಾಕ್ಷಿ ಕೇಳುತ್ತಾ, ನೀಚ ಬುದ್ಧಿ, ಕೀಳು ಅಭಿರುಚಿಯನ್ನು ಪ್ರದರ್ಶಿಸುತ್ತಿರುವುದು ದುರಂತ” ಎಂದು ಜೆಡಿಎಸ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿತ್ತು.
ಇದನ್ನೂ ಓದಿ: ಶರಾವತಿ ನದಿ ತೀರದ ‘ರಾಣಿ ವೀಳ್ಯದೆಲೆ’ಗೆ ಪಾಕಿಸ್ತಾನವೇ ದೊಡ್ಡ ಮಾರುಕಟ್ಟೆ! ಆದರೂ ರಫ್ತು ನಿರಾಕರಿಸಿದ ರೈತರು
ಕೊತ್ತೂರು ಮಂಜುನಾಥ್ ಯುಟರ್ನ್
ಶಾಸಕ ಕೊತ್ತೂರು ಮಂಜುನಾಥ್ ನೀಡಿದ್ದ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಶಾಸಕ ಕೊತ್ತೂರು ಮಂಜುನಾಥ್ ಯೂಟರ್ನ್ ಹೊಡೆದಿದ್ದರು. ಆಪರೇಷನ್ ಸಿಂದೂರ್ ವಿಚಾರವಾಗಿ ನನಗೆ ಯಾವುದೇ ಅನುಮಾನವಿಲ್ಲ. ಕಾರ್ಯಾಚರಣೆ ಸಮಾಧಾನ ತಂದಿಲ್ಲ ಎಂದು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ, ಕೊತ್ತೂರು ಮಂಜುನಾಥ್ ಅವರ ವಿರುದ್ಧ ದೂರು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







