‘ಕೇರಳಕ್ಕೆ ಮೋಜು ಮಸ್ತಿಗೆ ಹೋಗಿರಲಿಲ್ಲ’: ಆಪ್ತರ ತಲೆದಂಡಕ್ಕೆ ಜಮೀರ್ ಕೆಂಡ, ಭುಗಿಲೆದ್ದ ಅಸಮಾಧಾನ

Karnataka Congress Rift: ದಾವಣಗೆರೆ ಉಪಚುನಾವಣೆ ಪ್ರಚಾರದಿಂದ ದೂರ ಉಳಿದ ಅಲ್ಪಸಂಖ್ಯಾತ ನಾಯಕರ ವಿರುದ್ಧ ಹೈಕಮಾಂಡ್ ಶಿಸ್ತುಕ್ರಮ ಕೈಗೊಂಡಿದ್ದು, ಇದರಿಂದ ಸಚಿವ ಜಮೀರ್ ಅಹ್ಮದ್ ಕೆಂಡಾಮಂಡಲವಾಗಿದ್ದಾರೆ. ಆಪ್ತರ ತಲೆದಂಡದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ‘ಟಾರ್ಗೆಟ್’ ರಾಜಕೀಯದ ಚರ್ಚೆ ತಾರಕಕ್ಕೇರಿದ್ದು, ಕೈ ಪಾಳೆಯದಲ್ಲಿ ಆಂತರಿಕ ಕಲಹ ಸ್ಫೋಟಗೊಂಡಿದೆ.

‘ಕೇರಳಕ್ಕೆ ಮೋಜು ಮಸ್ತಿಗೆ ಹೋಗಿರಲಿಲ್ಲ’: ಆಪ್ತರ ತಲೆದಂಡಕ್ಕೆ ಜಮೀರ್ ಕೆಂಡ, ಭುಗಿಲೆದ್ದ ಅಸಮಾಧಾನ
ಜಮೀರ್ ಅಹ್ಮದ್ ಖಾನ್
Image Credit source: tv9
Edited By:

Updated on: Apr 16, 2026 | 6:33 AM

ಬೆಂಗಳೂರು, ಏಪ್ರಿಲ್ 16: ದಾವಣಗೆರೆ ದಕ್ಷಿಣ ಉಪಚುನಾವಣೆಯ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಭಿನ್ನಮತದ ಸ್ಫೋಟಗೊಂಡಿದೆ. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಅವರ ಅಮಾನತು ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರ ಪದಚ್ಯುತಿಯು ಪಕ್ಷದೊಳಗೆ ಸಂಚಲನ ಸೃಷ್ಟಿಸಿದೆ. ಈ ಬೆಳವಣಿಗೆಗಳ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

‘ನಾನೇನು ಮೋಜು-ಮಸ್ತಿಗೆ ಹೋಗಿರಲಿಲ್ಲ’: ಜಮೀರ್ ಕಿಡಿ

ದಾವಣಗೆರೆ ಪ್ರಚಾರದಿಂದ ದೂರ ಉಳಿದು ಕೇರಳಕ್ಕೆ ತೆರಳಿದ್ದ ವಿಚಾರವಾಗಿ ಜಮೀರ್ ಅಹ್ಮದ್ ಖಡಕ್ ಉತ್ತರ ನೀಡಿದ್ದಾರೆ. ನಾನೇನು ಕೇರಳಕ್ಕೆ ಮೋಜು-ಮಸ್ತಿ ಮಾಡಲು ಹೋಗಿರಲಿಲ್ಲ. ಎಐಸಿಸಿ ನಾಯಕ ಕೆ.ಸಿ. ವೇಣುಗೋಪಾಲ್ ಅವರ ಸೂಚನೆಯಂತೆ ಪಕ್ಷದ ಕೆಲಸಕ್ಕಾಗಿಯೇ ಅಲ್ಲಿಗೆ ಹೋಗಿದ್ದೆ. ನನ್ನ ಹಣೆಬರಹ ಬರೆಯಲು ಯಾರಿಂದಲೂ ಸಾಧ್ಯವಿಲ್ಲ, ನನ್ನನ್ನು ಯಾರೂ ಟಾರ್ಗೆಟ್ ಮಾಡಲು ಆಗಲ್ಲ ಎಂದು ಜಮೀರ್ ಗುಡುಗಿದ್ದಾರೆ.

ಸರಣಿ ಕ್ರಮಗಳ ಹಿನ್ನೆಲೆ

ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತ ನಾಯಕರಿಗೆ ಟಿಕೆಟ್ ನೀಡಬೇಕೆಂದು ಜಮೀರ್ ಮತ್ತು ತಂಡ ಪಟ್ಟು ಹಿಡಿದಿತ್ತು. ಆದರೆ ಶಾಮನೂರು ಮಲ್ಲಿಕಾರ್ಜುನ್ ಪುತ್ರ ಸಮರ್ಥ್‌ಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡ ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ಪ್ರಚಾರದಿಂದ ದೂರ ಉಳಿದಿದ್ದರು ಎಂಬ ಆರೋಪ ಇದೆ. ಇದರ ಪರಿಣಾಮವಾಗಿ ನಸೀರ್ ಅಹ್ಮದ್‌ರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದ್ದರೆ, ಜಬ್ಬಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಅಮಾನತು ಮಾಡಲಾಗಿದೆ.

ಸಿಎಂ ಬಣ ಟಾರ್ಗೆಟ್?

ಪಕ್ಷದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಸಿಎಂ ಸಿದ್ದರಾಮಯ್ಯ ಅವರ ಆಪ್ತ ತಂಡವನ್ನು ಗುರಿಯಾಗಿಸಿಕೊಂಡು ನಡೆಯುತ್ತಿದೆಯೇ ಎಂಬ ಅನುಮಾನ ಮೂಡಿಸಿದೆ. ಈ ಬಗ್ಗೆ ವ್ಯಂಗ್ಯವಾಡಿರುವ ಮಾಜಿ ಸಚಿವ ಕೆ.ಎನ್. ರಾಜಣ್ಣ, ‘ಕಾಂಗ್ರೆಸ್ ಶಿಸ್ತಿನ ಪಕ್ಷ, ಆದರೆ ಇಲ್ಲಿ ದೊರೆ ಮಾಡಿದ್ದಕ್ಕೆ ದಂಡ ಇಲ್ಲ’ ಎನ್ನುವ ಮೂಲಕ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಟೀಕೆ ಮಾಡಿದ್ದಾರೆ. ಒಟ್ಟಿನಲ್ಲಿ ಉಪಚುನಾವಣೆ ಫಲಿತಾಂಶ ಬರುವ ಮೊದಲೇ ಕೈ ಪಾಳೆಯದಲ್ಲಿ ಅಧಿಕಾರ ಮತ್ತು ಶಿಸ್ತಿನ ಸಮರ ತಾರಕಕ್ಕೇರಿದೆ.

ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ದಾವಣಗೆರೆ ಉಪಕದನ ಕಿಚ್ಚು: ಅಬ್ದುಲ್ ಜಬ್ಬಾರ್ ಬೆನ್ನಲ್ಲೇ ಆಪ್ತರಿಂದಲೂ ಸಾಮೂಹಿಕ ರಾಜೀನಾಮೆ!

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us