ರಾಜ್ಯ ಅಕಾಡೆಮಿ, ವಿವಿಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕಕ್ಕೆ ಕೈ ನಾಯಕರಿಂದಲೇ ವಿರೋಧ

ಕರ್ನಾಟಕ ಸರ್ಕಾರ ಒಂದು ವಾರದ ಹಿಂದೆ ವಿಶ್ವವಿದ್ಯಾಲಯಗಳ ಸಿಂಡಿಕೇಟ್​ ಪ್ರಾಧಿಕಾರಗಳಿಗೆ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಸರ್ಕಾರದ ನಿರ್ದಾರಕ್ಕೆ ಕಾಂಗ್ರೆಸ್​ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನಡೆಯನ್ನು ರಾಜ್ಯ ನಾಯಕರು ಹೈಕಮಾಂಡ್​ ಗಮನಕ್ಕೆ ತರಲು ಮುಂದಾಗಿದ್ದಾರೆ.

ರಾಜ್ಯ ಅಕಾಡೆಮಿ, ವಿವಿಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕಕ್ಕೆ ಕೈ ನಾಯಕರಿಂದಲೇ ವಿರೋಧ
ಕಾಂಗ್ರೆಸ್​
Follow us
| Updated By: ವಿವೇಕ ಬಿರಾದಾರ

Updated on: Sep 04, 2024 | 11:17 AM

ಬೆಂಗಳೂರು, ಸೆಪ್ಟೆಂಬರ್​ 04: ರಾಜ್ಯ ಅಕಾಡೆಮಿ ಮತ್ತು ವಿಶ್ವವಿದ್ಯಾಲಯಗಳ ಸಿಂಡಿಕೇಟ್​ ಪ್ರಾಧಿಕಾರಗಳಿಗೆ ಸದಸ್ಯರ (Syndicate Members) ನೇಮಕದ ವಿಚಾರವಾಗಿ ಕಾಂಗ್ರೆಸ್ (Congress) ಪಾಳೆಯದಲ್ಲೇ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಸದಸ್ಯರ ನೇಮಕಾತಿಯಲ್ಲಿ ಏಕಪಕ್ಷೀಯ ನಡೆ ಅನುಸರಿಸಲಾಗಿದೆ ಎಂದು ತೀವ್ರ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್​ ಗಾಂಧಿ ಅವರಿಗೆ ದೂರು ನೀಡಲು ರಾಜ್ಯ ಕಾಂಗ್ರೆಸ್​ ನಾಯಕರು ನಿರ್ಧರಿಸಿದ್ದಾರೆ.

ನಿಗಮ-ಮಂಡಳಿ ಸದಸ್ಯರು, ನಿರ್ದೇಶಕರ ನೇಮಕ ವಿಚಾರವನ್ನು ಗೃಹ ಸಚಿವ ಡಾ.ಪರಮೇಶ್ವರ ನೇತೃತ್ವದ ಸಮಿತಿ ಗಮನಕ್ಕೆ ತರದೆ ಮುಖ್ಯಮಂತ್ರಿಗಳ ಕಚೇರಿಯಿಂದಲೇ ನೇರ ನೇಮಕ ಮಾಡಲಾಗಿದೆ. ಹಾಗಿದ್ದರೆ ಡಾ.ಪರಮೇಶ್ವರ ಸಮಿತಿ ಏಕೆ ಬೇಕಿತ್ತು? ಅಲ್ಲದೇ, ಸಂಬಂಧಿಸಿದ ಇಲಾಖೆ ಸಚಿವರ ಗಮನಕ್ಕೂ ತಂದಿಲ್ಲ. ಕಳೆದ ಬಾರಿ ಸರ್ಕಾರದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದವರು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆಯಾ ಕ್ಷೇತ್ರದಲ್ಲಿ ಏನೂ ಸಾಧನೆ ಮಾಡದವರಿಗೆ ಅವಕಾಶ ನೀಡಲಾಗಿದೆ ಎಂದು ಕೈ ನಾಯಕರು ಆರೋಪ ಮಾಡಿದ್ದಾರೆ.

ಪಕ್ಷದ ಎರಡು, ಮೂರನೇ ಹಂತದ ನಾಯಕರು, ಕಾರ್ಯಕರ್ತರಿಗೆ ಅವಕಾಶ ಸಿಗುತ್ತಿಲ್ಲ. ಸಿಂಡಿಕೇಟ್ ಸದಸ್ಯ ಸ್ಥಾನ ಬಹುತೇಕ ಸಾಹಿತಿಗಳು, ಸಾಹಿತಿಗಳ ಸೋಗಿನಲ್ಲಿರುವವರಿಗೆ ಆದ್ಯತೆ ನೀಡಿರುವ ದೂರು ಕೇಳಿಬರುತ್ತಿದೆ. ಸ್ವಪಕ್ಷಿಯರಿಗೆ ಆಯಕಟ್ಟಿನ ಹುದ್ದೆ ನೀಡುತ್ತಿರುವ ಅಥವಾ ವರ್ಗಾವಣೆ ಮಾಡುತ್ತಿರುವ ಬಗ್ಗೆ ಈ ಹಿಂದೆಯೇ ಶಾಸಕ ಶಾಮನೂರು ಶಿವಶಂಕರಪ್ಪ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದರು. ಬಹುತೇಕ ನಾಮ ನಿರ್ದೇಶನದಲ್ಲಿ ವೀರಶೈವ ಲಿಂಗಾಯತರು, ಕಡೆಗಣನೆ ಬಗ್ಗೆ ಜನಾಂಗದ ಮುಖಂಡರಲ್ಲಿ ಬೇಗುದಿ ಎದ್ದಿದೆ. ವೀರಶೈವ ಲಿಂಗಾಯತರು, ಒಕ್ಕಲಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶೈಕ್ಷಣಿಕ ವಲಯದ ಗಂಧ ಗಾಳಿ ಗೊತ್ತಿಲ್ಲದವರಿಗೂ ಮಣೆ ಹಾಕಲಾಗಿದೆ. ತಮ್ಮ ಗಮನಕ್ಕೆ ಬಾರದೇ ನೇಮಕ‌ ಮಾಡುತ್ತಿರುವ ಕಾರಣ ಡಾ. ಪರಮೇಶ್ವರ ಸಮಿತಿ ಸಭೆ ನಡೆಸಿಲ್ಲ. ಈ ಎಲ್ಲ ಬೆಳವಣಿಗೆ ಬಗ್ಗೆ ಮಲ್ಲಿಕಾರ್ಜುನ‌ ಖರ್ಗೆ ಅವರ ಗಮನಕ್ಕೆ ತರಲು ಕೆಲ ಸಚಿವರ ಮುಂದಾಗಿದ್ದಾರೆ ಎಂಬ ಮಾಹಿತಿ ಟಿವಿ9ಗೆ ಲಭ್ಯವಾಗಿದೆ.

ಇದನ್ನೂ ಓದಿ: ನನ್ನ ತಂಟೆಗೆ ಬಂದ್ರೆ ನಿನ್ನ ಬಟ್ಟೆ ಬಿಚ್ಚಿ ಬೆತ್ತಲೆ ಮಾಡ್ತೀನಿ: ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಶಾಸಕ ರಾಜು ಕಾಗೆ

ಕರ್ನಾಟಕ ಸರ್ಕಾರ ಒಂದು ವಾರದ ಹಿಂದೆ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್​ ಪ್ರಾಧಿಕಾರಗಳಿಗೆ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಗುಲ್ಬುರ್ಗಾ ವಿಶ್ವವಿದ್ಯಾಲಯ, ರಾಯಚೂರು ವಿಶ್ವವಿದ್ಯಾಲಯ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ನಗರ ಹಾಗೂ ಉತ್ತರ ವಿಶ್ವವಿದ್ಯಾಲಯಕ್ಕೆ ಸದಸ್ಯರನ್ನು ನೇಮಕ ಮಾಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ